ಕೆಎಸ್‌ಆರ್‌ಟಿಸಿ ಟಿಕೆಟ್ ಬುಕಿಂಗ್ ವೇಳೆ ಹೆಚ್ಚಿನ ದರ ಪಡೆದರೆ ಹುಷಾರ್..!

ಈ ಸುದ್ದಿಯನ್ನು ಶೇರ್ ಮಾಡಿ

KSRTC-Bus-Pass-1ಬೆಂಗಳೂರು,ಜ.18-ಕೆಎಸ್‌ಆರ್‌ಟಿಸಿ ನಿಗಮದ ಮುಂಗಡ ಬುಕಿಂಗ್ ಕೌಂಟರ್‍ಗಳಲ್ಲಿ ಟಿಕೆಟ್‍ಗಳಿಗೆ ನಿಗದಿತ ದರಕ್ಕಿಂತ ಹೆಚ್ಚಿನ ದರ ಪಡೆಯುವವರ ವಿರುದ್ಧ ಸೂಕ್ತ ಕ್ರಮ ವಹಿಸಿ ಆ ಕೌಂಟರ್ ಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು ಎಂದು ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ ಎಚ್ಚರಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಮುಂಗಡ ಟಿಕೆಟ್ ಕಾಯ್ದಿರಿಸುವ ಕೇಂದ್ರಗಳ ವ್ಯವಹಾರ ಪಾರದರ್ಶಕವಾಗಿರಬೇಕು, ಸಾರ್ವಜನಿಕ ಪ್ರಯಾಣಿಕರು ಕಾಯ್ದಿರಿಸುವ ಟಿಕೆಟ್‍ಗಳಿಗೆ ಹೆಚ್ಚಿನ ದರ ಪಡೆಯಬಾರದು ಮುಂದಿನ ದಿನಗಳಲ್ಲಿ ನಿಗಮದ ಎಲ್ಲಾ ವಿಭಾಗಗಳಲ್ಲಿಯೂ ದಿಢೀರ್ ತಪಾಸಣೆ ನಡೆಸಿ ಇಂತಹ ಅವ್ಯವಸ್ಥೆ ಇದ್ದರೆ ಸೂಕ್ತ ಕ್ರಮ ವಹಿಸುವುದಾಗಿ ಹೇಳಿದ್ದಾರೆ.

ರಾಜ್ಯ ಹಾಗೂ ಅಂತಾರಾಜ್ಯಗಳ ಪ್ರಯಾಣಿಕರಿಗೆ ಮುಂಗಡ ಬುಕಿಂಗ್ ವ್ಯವಸ್ಥೆಗಾಗಿ ನಿಗಮದ129 ಮತ್ತು ಖಾಸಗಿ ಫ್ರಾಂಚೈಸಿಗಳ ಮೂಲಕ 599 ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದ್ದು, ಇದರಲ್ಲಿ ತಮಿಳುನಾಡಿನ ತಿರುಕೋಯಿಲೂರಿನಲ್ಲಿರುವ ಫ್ರಾಂಚೈಸಿಯೊಂದು ಮುಂಗಡ ಬುಕಿಂಗ್‍ನಲ್ಲಿ ನಿಗದಿತ ದರಕ್ಕಿಂತ ಹೆಚ್ಚಿನ ದರ ಪಡೆಯುತ್ತಿರುವ ಬಗ್ಗೆ ಬಂದ ದೂರಿನನ್ವಯ ಬೆಂಗಳೂರು ಕೇಂದ್ರೀಯ ವಿಭಾಗದ ಒಂದು ತಂಡ ಪರಿಶೀಲನೆ ನಡೆಸಿದ್ದು, ನಿಗದಿತ ಟಿಕೆಟ್ ದರಕ್ಕಿಂತ 70 ರೂ. ಹೆಚ್ಚಿನ ದರ ಪಡೆಯುತ್ತಿರುವುದು ಕಂಡುಬಂದಿದೆ.

ಈ ಹಿನ್ನೆಲೆಯಲ್ಲಿ ತಿರುಕೋಯಿಲೂರಿನ ಕೌಂಟರ್‍ಗೆ ನೋಟಿಸ್ ನೀಡಲಾಗಿದ್ದು, ಈ ಕೌಂಟರ್ ಮೂಲಕ ಟಿಕೆಟ್ ಬುಕಿಂಗ್‍ನ್ನು ಮುಂದಿನ ಆದೇಶದವರೆಗೂ ಸ್ಥಗಿತಗೊಳಿಸಿರುವುದಾಗಿ ತಿಳಿಸಿದ್ದಾರೆ. ಸಾರ್ವಜನಿಕರು ನಿಗದಿತ ದರಕ್ಕಿಂತ ಹೆಚ್ಚಿನ ಹಣ ಪಡೆಯುವ ಬಗ್ಗೆ ಯಾವುದೇ ಪ್ರಕರಣಗಳಿದ್ದರೆ ಸಂಸ್ಥೆಯ ವೆಬ್‍ಸೈಟ್  https://awatar.ksrtc.in/ksrtc-oprs/  ಹಾಗೂ 7760990034/35, 080-49596666 ಸಂಪರ್ಕಿಸಲು ಕೋರಲಾಗಿದೆ.

Facebook Comments