‘ರಾಜ್ಯ ರಾಜಕೀಯಕ್ಕೂ ನಮ್ಮ ಮಠಕ್ಕೂ ಯಾವುದೇ ಸಂಬಂಧವಿಲ್ಲ’

ಈ ಸುದ್ದಿಯನ್ನು ಶೇರ್ ಮಾಡಿ

Nirmalanandanatha-shree

ಬೆಂಗಳೂರು,ಜ.18-ಪ್ರಸ್ತುತ ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಬೆಳವಣಿಗೆಗೂ ನಮ್ಮಮಠಕ್ಜೂ ಯಾವುದೇ ರೀತಿಯ ಸಂಬಂಧವಿಲ್ಲ. ಈ ಬಗ್ಗೆ ಕೆಲವು ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳು ಸಂಪೂರ್ಣವಾಗಿ ಆಧಾರರಹಿತವಾಗಿವೆ ಎಂದು ಆದಿಚುಂಚನಗಿರಿ ಮಠದ ಪೀಠಧ್ಯಕ್ಷರಾದ ಡಾ.ಶ್ರೀ ನಿರ್ಮಾಲನಂದನಾಥ ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ.

ಕಳೆದ ಹಲವಾರು ದಶಕಗಳಿಂದ ಶ್ರೀ ಮಠವು ಜಾತಿ,ಮತ, ಧರ್ಮ ಯಾವುದನ್ನೂ ಲೆಕ್ಕಿಸದೆ ಎಲ್ಲರೂ ಸಮಾನರು ಎಂಬ ತತ್ವದಡಿ ಸಮಾಜ ಸೇವೆಯನ್ನು ಮಾಡುತ್ತ ಬಂದಿರುವುದು ನಾಡಿನ ಭಕ್ತರೆಲ್ಲರಿಗೂ ತಿಳಿದಿರುವ ವಿಷಯ.

ಶ್ರೀ ಮಠವು ಹಿಂದಿನ ಪರಮ ಪೂಜ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಮುಂದುವರೆಯುತ್ತಿದ್ದೇವೆ ಎಂದು ಹೇಳಲು ನಮಗೆ ಅತೀವ ಸಂತಸವಾಗುತ್ತದೆ ಎಂದಿದ್ದಾರೆ.

ಆದರೆ,ಇತ್ತೀಚಿನ ದಿನಗಳಲ್ಲಿ ಕೆಲವು ಮಾಧ್ಯಮಗಳು ಮಠದ ಬಗ್ಗೆ ಊಹಾಪೋಹದ ಸುದ್ದಿಗಳನ್ನು ಬಿತ್ತರಿಸುವ ಮೂಲಕ ಭಕ್ತರ ಮನಸ್ಸಿಗೆ ನೋವು ತಂದಿರುವುದು ತೀವ್ರ ಆಘಾತ ಉಂಟು ಮಾಡಿದೆ.ಪ್ರಸ್ತುತ ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಗೂ ಶ್ರೀ ಮಠಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

ಕಳೆದ ಹಲವಾರು ದಶಕಗಳಿಂದ ಶ್ರೀ ಆದಿಚುಂಚನಗಿರಿ ಮಠವು ಎಂದಿಗೂ ಯಾವುದೇ ರೀತಿಯ ರಾಜಕೀಯ ಬೆಳವಣಿಗೆಯಲ್ಲಿ ಹಸ್ತಕ್ಷೇಪ ಮಾಡಿರುವುದಿಲ್ಲ. ಶಿಕ್ಷಣ, ದಾಸೋಹ, ಪರಿಸರ ಪ್ರೇಮ, ಆರೋಗ್ಯ, ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ಮಠವು ತನ್ನದೇ ಆದ ಸಮಾಜ ಸೇವೆ ಮಾಡುತ್ತ ಬಂದಿದೆ.

ಕೆಲವು ಮಾಧ್ಯಮಗಳು ಮಠದ ಹೆಸರಿಗೆ ಕಳಂಕ ತರುವ ದುರುದ್ದೇಶದಿಂದಲೇ ಮಠಕ್ಕೆ ರಾಜಕೀಯ ಲೇಪನ ಕಟ್ಟುತ್ತಿದ್ದಾರೆಂದು ಭಕ್ತರು ಆಘಾತಕ್ಕೆ ಒಳಗಾಗಿದ್ದಾರೆ ಎಂದು ವಿವರಿಸಿದ್ದಾರೆ.

ಭಕ್ತರು ಕೂಡ ಮಾಧ್ಯಮಗಳಲ್ಲಿ ಪ್ರಸಾರವಾಗುವ ಸುದ್ದಿಗಳಿಗೆ ಏಕಾಏಕಿ ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ವಾದ- ವಿವಾದಕ್ಕೆ ಇಳಿಯದೆ, ಸಮಾಜದ ಸ್ವಾಸ್ಥ್ಯವನ್ನು ಕಾಪಾಡಿಕೊಂಡು ಹೋಗಬೇಕು.

ನಾಡಿನ ಭಕ್ತರು ಮಠದ ಮೇಲೆ ಇಟ್ಟುಕೊಂಡಿರುವ ನಂಬಿಕೆಯನ್ನು ನಾವು ಎಂದಿಗೂ ಹುಸಿಗೊಳಿಸದೆ, ಸಮಾಜ ಸೇವೆಯನ್ನು ಮುಂದುವರೆಸುತ್ತೇವೆ. ಮಾಧ್ಯಮಗಳು ಇನ್ನು ಮುಂದೆ ಕಪೋಲಕಲ್ಪಿತ ಇಲ್ಲವೇ ಆಧಾರ ರಹಿತ ಸುದ್ದಿಯನ್ನು ಬಿತ್ತರಿಸುವ ಮುನ್ನ ಮಠದ ಕಾರ್ಯಾದರ್ಶಿಗಳನ್ನು ಸಂಪರ್ಕಿಸುವುದು ಉತ್ತಮ ಎಂದಿರುವ ಶ್ರೀಗಳು ಮಠದ ಮೇಲೆ ಕೋಟ್ಯಾಂತರ ಭಕ್ತರು ಇಟ್ಡುಕೊಂಡಿರುವ ನಂಬಿಕೆಗಳನ್ನು ಘಾಸಿಗೊಳಿಸುವ ಕೆಲಸಕ್ಕೆ ಕೈ ಹಾಕಬಾರದು ಎಂದು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

Facebook Comments

Sri Raghav

Admin