ಚುನಾವಣೆ ಘೋಷಣೆ ಆಗದಿದ್ದರೂ ಗೆಲುವಿಗಾಗಿ ಮತದಾರರಿಗೆ ಕುಕ್ಕರ್ ಹಂಚಿಕೆ ಆರಂಭ ..!

ಈ ಸುದ್ದಿಯನ್ನು ಶೇರ್ ಮಾಡಿ

election-cooker

ಬಂಗಾರಪೇಟೆ, ಜ.18- ಸ್ಥಳೀಯ ಸಂಸ್ಥೆಗಳ ಚುನಾವಣೆ ಅಧಿಕೃತವಾಗಿ ಪ್ರಕಟಣೆಯಾಗದಿದ್ದರೂ ಹೇಗಾದರೂ ಮಾಡಿ ಈ ಬಾರಿ ನಡೆಯಲಿರುವ ಪುರಸಭೆ ಚುನಾವಣೆಯಲ್ಲಿ ಗೆದ್ದು ತನ್ನ ರಾಜಕೀಯ ಆಸ್ತಿತ್ವವನ್ನು ರಕ್ಷಣೆ ಮಾಡಿಕೊಳ್ಳಲು ಈಗಿನಿಂದಲೇ ಮತದಾರರ ಪ್ರಭುಗಳಿಗೆ ಕುಕ್ಕರ್ ವಿತರಣೆ ಮಾಡಿ ಆಮಿಷವೊಡ್ಡುತ್ತಿರುವ ಅಂಶ ಬೆಳಕಿಗೆ ಬಂದಿದೆ.

ಜಿಲ್ಲಾ ಕಾಂಗ್ರೆಸ್ ಮುಖಂಡರೊಬ್ಬರು ಗೆಲ್ಲಲೇಬೇಕೆಂಬ ಛಲದಲ್ಲಿ ವಾರ್ಡ್ 16 ರಲ್ಲಿ ಸಂಕ್ರಾಂತಿ ಹಬ್ಬದ ಶುಭಾಶಯಗಳ ನೆಪದಲ್ಲಿ ತನ್ನ ಸಹಚರರೊಂದಿಗೆ ಮತದಾರರಿಗೆ ಕುಕ್ಕರ್‍ಗಳನ್ನು ವಿತರಣೆ ಮಾಡುತ್ತಿರುವ ವಿಷಯ ವೈರಲ್ ಆಗಿರುವುದನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ಚುನಾವಣೆ ಯಾವ ರಂಗು ಪಡೆದುಕೊಳ್ಳಲಿದೆ ಎಂಬುದು ಊಹೆಗೂ ಮೀರಿದ್ದಾಗಿದೆ.

ಸೇಠ್‍ಕಾಂಪೌಂಡ್, ಶಾಂತಿನಗರ ಮತ್ತು ಗಾಂಧಿನಗರ ವಾರ್ಡ್‍ಗಳಿಂದ ಗೆದ್ದಿರುವ ಆಸಾಮಿ, ಇದೀಗ ಸಾಮಾನ್ಯಗೊಂಡಿರುವ ವಿಜಯನಗರ 16ನೇ ವಾರ್ಡ್‍ನಲ್ಲಿ ಸ್ಪರ್ಧಿಸಿ ಗೆಲ್ಲಲೇಬೇಂದು ಈಗಿನಿಂದಲೇ ಮತದಾರರಿಗೆ ಬಹಿರಂಗವಾಗಿ ಕುಕ್ಕರ್‍ಗಳನ್ನು ಹಂಚುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಯಾವುದೇ ರೀತಿ ಕಾನೂನು ಕ್ರಮಕ್ಕೆ ಮುಂದಾಗದೆ ಇರುವುದು ಇಲ್ಲಿನ ಕಾನೂನು ವೈಫಲ್ಯತೆ ಎತ್ತಿ ತೋರುತ್ತಿದೆ.

ಪ್ರಾಮಾಣಿಕವಾಗಿ ಚುನಾವಣೆ ಎದುರಿಸಲು ಸಾಧ್ಯವಾಗದೆ, ಕುಕ್ಕರ್‍ಗಳನ್ನು ಈಗಿನಿಂದಲೇ ವಿತರಣೆ ಮಾಡಿ ಮತದಾರರಿಗೆ ಆಮಿಷವೊಡ್ಡುತ್ತಿರುವುದು ಸರಿಯೇ ಎಂಬುದು ಬುದ್ಧಿಜೀವಿಗಳ ಪ್ರಶ್ನೆಯಾಗಿದೆ. ಒಟ್ಟು 27 ವಾರ್ಡ್‍ಗಳಲ್ಲಿ ಇಂತಹ ಬೆಳವಣಿಗೆ ನಡೆದಿಲ್ಲ.ಆದರೆ ವಾರ್ಡ್ 16 ರಲ್ಲಿ ಮಾತ್ರ ಕುಕ್ಕರ್ ನೀಡಿ ಈಗಿನಿಂದಲೇ ಮತ ಬೇಟೆ ಮಾಡುತ್ತಿರುವುದು ಎಲ್ಲೆಲ್ಲೂ ತೀವ್ರ ಚರ್ಚೆಗೆ ಗ್ರಾಸವಾಗಿದೆ.

Facebook Comments