ಅತೃಪ್ತ ಶಾಸಕರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆಯ ಅಸ್ತ್ರ ಪ್ರಯೋಗ..?

ಈ ಸುದ್ದಿಯನ್ನು ಶೇರ್ ಮಾಡಿ

Nagednra--01

ಬೆಂಗಳೂರು, ಜ.19-ಮುಂಬೈ ಹೊಟೇಲ್‍ನಲ್ಲಿರುವ ಅತೃಪ್ತ ಶಾಸಕರನ್ನು ಮರಳಿ ಕರೆತರಲು ಕಾಂಗ್ರೆಸ್ ಕೊನೆಯ ಪ್ರಯತ್ನ ನಡೆಸುತ್ತಿದ್ದು, ಯಶಸ್ವಿ ಯಾಗದೆ ಹೋದರೆ ಪಕ್ಷಾಂತರ ನಿಷೇಧ ಕಾಯ್ದೆಯಡಿ ಕ್ರಮ ಜರುಗಿಸುವಂತೆ ವಿಧಾನಸಭಾಧ್ಯಕ್ಷರಿಗೆ ಶಿಫಾರಸು ಮಾಡಲು ಮುಂದಾಗಿದೆ.

ನಿನ್ನೆ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಗೆ ಶಾಸಕರಾದ ರಮೇಶ್   ಜಾರಕಿ ಹೊಳಿ, ನಾಗೇಂದ್ರ, ಉಮೇಶ್ ಜಾಧವ್ ಮತ್ತು ಮಹೇಶ್ ಕಮಟಳ್ಳಿ ಗೈರು ಹಾಜರಾಗಿದ್ದರು.

ನಾಲ್ವರ ಪೈಕಿ ನಾಗೇಂದ್ರ ಅವರು ಕೆ.ಸಿ.ವೇಣುಗೋಪಾಲ್ ಅವರ ಜೊತೆ ದೂರವಾಣಿಯಲ್ಲಿ ಮಾತನಾಡಿ ಅನುಮತಿ ಕೇಳಿದ್ದು, ಉಮೇಶ್ ಜಾಧವ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಅನಾರೋಗ್ಯದಿಂದಾಗಿ ಸಭೆಯಲ್ಲಿ ಭಾಗವಹಿಸಲಾಗುತ್ತಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ಮಹೇಶ್ ಕಮಟಳ್ಳಿ ಮತ್ತು ರಮೇಶ್ ಜಾರಕಿ ಹೊಳಿ ಅವರೊಂದಿಗೆ ಸಂಪರ್ಕ ಸಾಧಿಸಲು ಸಚಿವ ಸತೀಶ್ ಜಾರಕಿ ಹೊಳಿ ನಿರಂತರ ಪ್ರಯತ್ನ ಪಟ್ಟರೂ ಅದು ಸಾಧ್ಯವಾಗಿಲ್ಲ. ಈಗಾಗಲೇ ಕಾಂಗ್ರೆಸ್‍ನ ಎಲ್ಲಾ ಶಾಸಕರು ರೆಸಾರ್ಟ್‍ನಲ್ಲಿ ಬೀಡುಬಿಟ್ಟಿದ್ದು, ಅದರಲ್ಲಿ ಹಿರಿಯ ಶಾಸಕರು ಮತ್ತು ಪಕ್ಷ ನಿಷ್ಠರು ರೆಸಾರ್ಟ್‍ನಿಂದ ಹೊರಗಿರಲು ವಿನಾಯಿತಿ ನೀಡಲಾಗಿದೆ.

ಈ ನಾಲ್ವರು ಶಾಸಕರು ಮಾತ್ರ ಶಾಸಕಾಂಗ ಸಭೆಗೂ ಬಾರದೆ, ರೆಸಾರ್ಟ್‍ನ ಸಭೆಗೂ ಸೇರಿಕೊಳ್ಳದೆ ದೂರ ಉಳಿದಿದ್ದಾರೆ. ಅವರಿಗೆ ಅಂತಿಮ ಹಂತದ ತಿಳುವಳಿಕೆ ನೀಡಿ ಕಾಂಗ್ರೆಸ್ ಜೊತೆಯಲ್ಲೇ ಉಳಿದುಕೊಳ್ಳುವಂತೆ ಎಚ್ಚರಿಕೆ ನೀಡಲಾಗುತ್ತಿದೆ. ಒಂದು ವೇಳೆ ಅತೃಪ್ತರು ಅದಕ್ಕೆ ಮನ್ನಣೆ ನೀಡದಿದ್ದರೆ ಪಕ್ಷಾಂತರ ನಿಷೇಧ ಕಾಯ್ದೆಯಡಿ ಕ್ರಮ ಜರುಗಿಸಿ ಇತರರಿಗೂ ಎಚ್ಚರಿಕೆಯ ಪಾಠ ಮಾಡಲು ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ.

ಮೂಲಗಳ ಪ್ರಕಾರ ನ್ಯಾಯಾಲಯದ ವಿಚಾರಣೆಗೆ ಬೆಂಗಳೂರಿಗೆ ಆಗಮಿಸಿದ್ದ ನಾಗೇಂದ್ರ ಅವರು ಈಗಾಗಲೇ ಮುಂಬೈಗೆ ವಾಪಸ್ ಮರಳಿದ್ದು, ಅತೃಪ್ತ ಶಾಸಕರ ಗುಂಪನ್ನು ಸೇರಿಸಿಕೊಂಡಿದ್ದಾರೆ.

ನಾಗೇಂದ್ರ ಅವರ ಮೂಲಕ ರಮೇಶ್ ಜಾರಕಿ ಹೊಳಿ, ಮಹೇಶ್ ಕಮಟಳ್ಳಿ ಮತ್ತು ಉಮೇಶ್ ಜಾಧವ್ ಅವರ ಮನವೊಲಿಸುವ ಪ್ರಯತ್ನವೂ ನಡೆಯುತ್ತಿದೆ. ಯಾವುದೂ ಫಲ ನೀಡದಿದ್ದರೆ ಈಗಾಗಲೇ ಅಮಾನತುಗೊಂಡಿರುವ ನಾಲ್ವರು ಶಾಸಕರನ್ನು ಶಾಸಕಾಂಗ ಸಭೆಯಿಂದ ಅನರ್ಹಗೊಳಿಸುವಂತೆ ಸ್ಪೀಕರ್ ರಮೇಶ್‍ಕುಮಾರ್ ಅವರಿಗೆ ಶಿಫಾರಸು ಮಾಡಲಾಗುತ್ತದೆ.

ಅಷ್ಟರೊಳಗಾಗಿ ನಾಲ್ವರು ಶಾಸಕರು ಖುದ್ದಾಗಿ ತಾವೇ ಶಾಸಕರ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂಬ ವದಂತಿಗಳಿವೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿ ಕಾಂಗ್ರೆಸ್‍ನ ಪ್ರತಿತಂತ್ರಕ್ಕೆ ತತ್ತರಿಸಿದ್ದು, ಸರ್ಕಾರ ರಚನೆ ಸಲುವಾಗಿ ಕೈಗೊಂಡಿದ್ದ ಆಪರೇಷನ್ ಕಮಲ ಕೈಬಿಡುವ ಲಕ್ಷಣಗಳು ಕಾಣಿಸುತ್ತಿವೆ.

ಹೀಗಾಗಿ ಅತೃಪ್ತ ಶಾಸಕರು ಅತಂತ್ರರಾಗುತ್ತಿದ್ದು, ದುಡುಕಿ ರಾಜೀನಾಮೆ ನೀಡಿದರೆ ಶಾಸಕರಾಗಿರುವ ಅವಕಾಶವನ್ನು ಕಳೆದುಕೊಂಡಂತಾಗುತ್ತದೆ. ಇತ್ತ ಮೂಲ ಪಕ್ಷದಲ್ಲೂ ನೆಲೆಯಿಲ್ಲ, ಬಿಜೆಪಿಯಲ್ಲೂ ಅವಕಾಶಗಳಿಲ್ಲ ಎಂಬಂತಹ ತ್ರಿಶಂಕು ಸ್ಥಿತಿಗೆ ಅತೃಪ್ತರು ತಲುಪಲಿದ್ದಾರೆ.

ನಾಲ್ವರ ಪೈಕಿ ಇಬ್ಬರು ಶಾಸಕರು ರಾಜಕೀಯ ಭವಿಷ್ಯ ಕಳೆದುಕೊಳ್ಳಲು ಸಿದ್ಧರಿಲ್ಲ ಎಂದು ಹೇಳಲಾಗುತ್ತಿದೆ. ಹೀಗಾಗಿ ಒಂದು ವೇಳೆ ಬಿಜೆಪಿ ಸರ್ಕಾರ ರಚನೆಯ ಪ್ರಯತ್ನವನ್ನು ಅಧಿಕೃತವಾಗಿ ಕೈ ಚೆಲ್ಲಿದರೆ ಅವರು ಕೂಡ ಕಾಂಗ್ರೆಸ್‍ಗೆ ಮರಳಲು ಸಿದ್ಧರಿದ್ದಾರೆ ಎಂದು ಹೇಳಲಾಗುತ್ತಿದೆ.

Facebook Comments

Sri Raghav

Admin