ಯಡಿಯೂರು ವಾರ್ಡ್’ನಲ್ಲಿ ಪ್ರಪ್ರಥಮ ವೈದಿಕ ಕೇಂದ್ರ ಆರಂಭ

ಈ ಸುದ್ದಿಯನ್ನು ಶೇರ್ ಮಾಡಿ

Yadiyur--01

ಬೆಂಗಳೂರು,ಜ.19- ಹಿಂದೂ ಧರ್ಮೀಯರು ಪೂರ್ವಿಕರ ವೈದಿಕ ಕಾರ್ಯಗಳನ್ನು ನೆರವೇರಿಸಲು ಅನುಕೂಲವಾಗುವಂತೆ ಬಿಬಿಎಂಪಿ ಇದೇ ಪ್ರಪ್ರಥಮ ಬಾರಿಗೆ ಯಡಿಯೂರು ವಾರ್ಡ್ನಲ್ಲಿ ಯಡಿಯೂರು ವೈದಿಕ ಕೇಂದ್ರ ಸ್ಥಾಪಿಸಿದ್ದು, ಇದನ್ನು ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳುವಂತೆ ಮೇಯರ್ ಗಂಗಾಂಬಿಕೆ ಇಂದಿಲ್ಲಿ ಕರೆ ನೀಡಿದರು.

ಯಡಿಯೂರು ಕೆರೆ ಸಮೀಪ 60 ಲಕ್ಷ ರೂ. ವೆಚ್ಚದಲ್ಲಿ ಬಿಬಿಎಂಪಿ ವತಿಯಿಂದ ನಿರ್ಮಾಣವಾಗಿರುವ ಅತ್ಯಾಧುನಿಕ ವೈದಿಕ ಕೇಂದ್ರವನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಹಿಂದೂ ಧರ್ಮದವರು ಅಗಲಿದ ಸಂಬಂಧಿಕರ, ಪೂರ್ವಿಕರ ವೈದಿಕ ಕರ್ಮಗಳು, ವೈಕುಂಠಾಧನೆ, ಉತ್ತರಾಧಿ ಕ್ರಿಯೆ ಮತ್ತಿತರ ಕಾರ್ಯಗಳನ್ನು ನಡೆಸಲು ನಗರದಲ್ಲಿ ಸ್ಥಳಾವಕಾಶ ಇರಲಿಲ್ಲ.

ಹಾಗಾಗಿ ಹೊರಭಾಗದ ಪ್ರದೇಶಗಳಿಗೆ ಹೋಗುತ್ತಾರೆ. ಇದನ್ನು ಮನಗಂಡು ಸ್ಥಳೀಯ ಪಾಲಿಕೆ ಸದಸ್ಯೆ ಪೂರ್ಣಿಮಾ ರಮೇಶ್ ಅತ್ಯಾಧುನಿಕ ವೈದಿಕ ಕೇಂದ್ರ ಸ್ಥಾಪಿಸಿದ್ದಾರೆ ಎಂದು ಹೇಳಿದರು.

ಮಹಿಳೆಯರಿಗೆ ಪ್ರತ್ಯೇಕ ಸೋಲಾರ್ ವಾಟರ್ ಹೀಟರ್, ಮಹಿಳೆಯರು-ಪುರುಷರಿಗೆ ಪ್ರತ್ಯೇಕ ಬಟ್ಟೆ ಬದಲಿಸುವ ಕೊಠಡಿ, 100 ಮಂದಿ ಕುಳಿತು ಊಟ ಮಾಡುವ ಹಾಲ್, ವೈದಿಕ ಕಾರ್ಯ ಮಾಡಲು ಪ್ರತ್ಯೇಕ ಸ್ಥಳ, ಸಮೀಪದಲ್ಲೇ ಕಲ್ಯಾಣಿಯೊಂದನ್ನು ಮಾಡಲಾಗಿದೆ.

ನಗರದಲ್ಲಿ ಇದು ಪ್ರಪ್ರಥಮವಾಗಿದ್ದು, ನಾಗರಿಕರು ಇಲ್ಲೇ ವೈದಿಕ ಕಾರ್ಯಗಳನ್ನು ಮಾಡಬೇಕೆಂದು ಮೇಯರ್ ಮನವಿ ಮಾಡಿದರು. ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಮಾತನಾಡಿ, ಎಲ್ಲ ಜಾತಿಯವರಲ್ಲೂ ವೈದಿಕ ಕಾರ್ಯ ಮಾಡಲು ಬೇರೆ ಊರುಗಳಿಗೆ ಹೋಗಬೇಕಿತ್ತು. ಇದನ್ನು ಅರಿತು ಯಡಿಯೂರು ಕೆರೆ ಸಮೀಪದಲ್ಲೇ ವಿಶಾಲವಾದ ವೈದಿಕ ಕೇಂದ್ರ ಸ್ಥಾಪಿಸಲಾಗಿದೆ.

ಇಲ್ಲಿ ಆಗಮಿಸುವವರಿಗೆ ಬಿಸಿ ನೀರಿನ ವ್ಯವಸ್ಥೆ ಸೇರಿದಂತೆ ಎಲ್ಲ ಸೌಲಭ್ಯ ಒದಗಿಸಿದ್ದೇವೆ. ಇದು ಈ ಭಾಗದ ಜನರಿಗೆ ವರದಾನವಾಗಿದೆ ಎಂದರು. ಉಪಮೇಯರ್ ಭದ್ರೇಗೌಡ, ಆಯುಕ್ತ ಮಂಜುನಾಥ್ ಪ್ರಸಾದ್, ಸ್ಥಳೀಯ ಪಾಲಿಕೆ ಸದಸ್ಯೆ ಪೂರ್ಣಿಮಾ ರಮೇಶ್ ಮತ್ತಿತರ ಮುಖಂಡರು ಕಾರ್ಯಕ್ರಮದಲ್ಲಿ ಹಾಜರಿದ್ದರು.

Facebook Comments

Sri Raghav

Admin