ಸಿರಿಧಾನ್ಯ ಮೇಳದಲ್ಲಿ ಶೂನ್ಯ ತ್ಯಾಜ್ಯ ಭೋಜನ ವ್ಯವಸ್ಥೆ

ಈ ಸುದ್ದಿಯನ್ನು ಶೇರ್ ಮಾಡಿ

Siridhanya--01

ಬೆಂಗಳೂರು, ಜ.19- ಲಕ್ಷಾಂತರ ಮಕ್ಕಳ ಹಸಿವು ತಣಿಸುತ್ತಿರುವ ಜತೆಯಲ್ಲಿಯೇ ಝೀರೊ ಗಾರ್ಬೆಜ್ ಮೂಲಕ ಮನೆಮಾತಾಗಿರುವ ಅದಮ್ಯ ಚೇತನ ಈ ಬಾರಿಯ ಸಾವಯವ ಮತ್ತು ಸಿರಿಧಾನ್ಯಗಳ ಅಂತಾರಾಷ್ಟ್ರೀಯ ವಾಣಿಜ್ಯ ಮೇಳ-2019ರ ಭೋಜನ ವ್ಯವಸ್ಥೆಯಲ್ಲೂ ಶೂನ್ಯ ತ್ಯಾಜ್ಯ ಮಾಡುವ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆ.

10 ಸಾವಿರ ಪ್ರತಿನಿಧಿಗಳು ಮತ್ತು 50 ಸಾವಿರಕ್ಕೂ ಹೆಚ್ಚು ಸಾರ್ವಜನಿಕರು ಭಾಗವಹಿಸುವ ಮೂರು ದಿನಗಳ ಈ ಸಾವಯವ ಮತ್ತು ಸಿರಿಧಾನ್ಯಗಳ ಮೇಳದಲ್ಲಿ ಅದಮ್ಯ ಚೇತನ ಶೂನ್ಯ ತ್ಯಾಜ್ಯ ಭೋಜನ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಿದೆ.

ಈ ಬಗ್ಗೆ ಮಾಹಿತಿ ನೀಡಿದ ಅದಮ್ಯ ಚೇತನ ಸಂಸ್ಥೆ ಅಧ್ಯಕ್ಷೆ ಡಾ.ತೇಜಸ್ವಿನಿ ಅನಂತಕುಮಾರ್, ಸಿರಿಧಾನ್ಯಗಳ ಬಳಕೆ ನಮ್ಮ ಭೋಜನ ಶಾಲೆಯಲ್ಲಿ ಸಾಮಾನ್ಯ.

ಇಂತಹ ಸಿರಿಧಾನ್ಯಗಳ ಅಂತಾರಾಷ್ಟ್ರೀಯ ಮೇಳದಲ್ಲಿ ಪ್ಲಾಸ್ಟಿಕ್, ಅಡಿಕೆ, ಪೇಪರ್ ತಟ್ಟೆ, ಪೇಪರ್ ಚಮಚ ಹಾಗೂ ಲೋಟಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ ಎಂದರು.

ಅದಮ್ಯ ಚೇತನ ಸಂಸ್ಥೆ ವತಿಯಿಂದ ಬಹುದಿನಗಳ ಯೋಜನೆಯಾದ ಸ್ಟೀಲ್ ತಟ್ಟೆ ಹಾಗೂ ಲೋಟಗಳ ಬ್ಯಾಂಕಿನ ಅಡಿಯಲ್ಲಿ 20 ಸಾವಿರ ಸ್ಟೀಲ್ ತಟ್ಟೆಗಳು, 20 ಸಾವಿರ ಸ್ಟೀಲ್ ಬಟ್ಟಲುಗಳು, 50 ಸಾವಿರ ಸ್ಟೀಲ್ ಚಮಚಗಳು ಮತ್ತು ಇನ್ನಿತರ ಸ್ಟೀಲ್ ವಸ್ತುಗಳನ್ನು ಪೂರೈಸಲಾಗಿದೆ.

ಈ ಮೂಲಕ ತ್ಯಾಜ್ಯ ಉತ್ಪತ್ತಿಯನ್ನು ಸಂಪೂರ್ಣವಾಗಿ ಕಡಿಮೆಗೊಳಿಸಿ ಪರಿಸರ ಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿರುವುದು ಸಂತಸದ ವಿಷಯವಾಗಿದೆ ಎಂದರು.

ಅಲ್ಲದೆ, ಊಟದ ನಂತರದಲ್ಲಿ ಮಿಕ್ಕುಳಿದ ಆಹಾರವನ್ನು ಗೊಬ್ಬರ ತಯಾರಿಸಲು ಗೊಬ್ಬರದ ಗುಂಡಿಗೆ ಹಾಕುವ ವ್ಯವಸ್ಥೆ ಮಾಡಲಾಗಿದೆ. ಹಾಗೆಯೇ ಊಟೋಪಚಾರಕ್ಕೆ ಬಳಸಲಾದ ಈ ಸ್ಟೀಲ್ ವಸ್ತುಗಳನ್ನು ಸ್ವಚ್ಛಗೊಳಿಸಲು ಸಾವಯವ ಸಾಬೂನು ಬಳಕೆ ಮಾಡು ತ್ತಿರುವುದರಿಂದ ಯಾವುದೇ ಕಾರಣಕ್ಕೂ ಪರಿಸರಕ್ಕೆ ಹಾನಿ ಯನ್ನುಂಟು ಮಾಡುವ ರಾಸಾಯನಿಕಗಳು ಮತ್ತು ಪ್ಲಾಸ್ಟಿಕ್ ವಸ್ತುಗಳನ್ನು ಬಳಸುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಸಾವಯವ ಸಿರಿಧಾನ್ಯಗಳ ಮೇಳದ ಉದ್ಘಾಟನಾ ದಿನ ಹಾಗೂ ಮೊದಲ ದಿನವಾದ ಇಂದು ಸಾವಿರಾರು ಜನರು ಈ ಸ್ಟೀಲ್ ತಟ್ಟೆಗಳು ಹಾಗೂ ಲೋಟಗಳನ್ನು ಬಳಸಿಕೊಂಡಿದ್ದಾರೆ. ಈ ಮೂಲಕ ಪರಿಸರಕ್ಕೆ ಅಲ್ಪ ಕಾಣಿಕೆಯನ್ನೂ ನೀಡಿರುವ ಖುಷಿ ಅದಮ್ಯ ಚೇತನ ಸಂಸ್ಥೆಯದ್ದಾಗಿದೆ.

Facebook Comments

Sri Raghav

Admin