11 ತಿಂಗಳ ಮಗು ಅಪಹರಿಸಿ 2 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದ ಐವರು ಅಂದರ್

ಈ ಸುದ್ದಿಯನ್ನು ಶೇರ್ ಮಾಡಿ

5-Arrested--01

ಬೆಂಗಳೂರು,ಜ.19- ಹನ್ನೊಂದು ತಿಂಗಳ ಮಗುವನ್ನು ಅಪಹರಿಸಿ 2 ಲಕ್ಷ ರೂ. ಹಣಕ್ಕಾಗಿ ತಮಿಳುನಾಡು ಮೂಲದ ದಂಪತಿಗೆ ಮಾರಾಟ ಮಾಡಿದ್ದ ಮೂವರು ಆರೋಪಿಗಳು ಸೇರಿದಂತೆ ಐದು ಮಂದಿಯನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡು ಮೂಲದ ದಂಪತಿ ಥಾಮಸ್ ಪಯಸ್ (55), ಈತನ ಪತ್ನಿ ಅರುಣ ಪಯಸ್(45), ಜ್ಞಾನಜ್ಯೋತಿ ನಗರದ ಅನ್ಬುಕುಮಾರ್(43), ಕೆ.ಪಿ.ಅಗ್ರಹಾರದ ಮಂಜುನಾಥ (19) ಮತ್ತು ಮಾಗಡಿ ಮುಖ್ಯರಸ್ತೆಯ  ಯೋಗೇಶ್‍ಕುಮಾರ್(21) ಬಂಧಿತ ಆರೋಪಿಗಳು.

ರಾಣಿ ಎಂಬುವರು ಬಾಡಿಗೆಗೆ ಹೊಸ ಮನೆಯನ್ನು ಪಡೆದಿದ್ದು, ಸಾಮಾನು ಸಾಗಿಸುವ ಸಲುವಾಗಿ ಜ.16 ರಂದು ರಾತ್ರಿ 8 ಗಂಟೆ ಸಮಯದಲ್ಲಿ ತಮ್ಮ 11 ತಿಂಗಳ ಮಗು ಅರ್ನಬೀ ಕುಮಾರಿಸಿಂಗ್‍ಳನ್ನು ಮನೆಯಲ್ಲಿ ಮಲಗಿಸಿ ಹೊಸ ಮನೆಗೆ ಹೋಗಿದ್ದರು. ಕೆಲ ಸಮಯದ ಬಳಿಕ ಮನೆಗೆ ಬಂದು ನೋಡಿದಾಗ ಮಗು ಕಾಣೆಯಾಗಿತ್ತು.

ಗಾಬರಿಯಾದ ರಾಣಿಯವರು ಅಕ್ಕಪಕ್ಕದ ಮನೆಯವರನ್ನು ವಿಚಾರಿಸಿದಾಗ ಯಾರೋ ಇಬ್ಬರು ಬೈಕ್‍ನಲ್ಲಿ ಬಂದು ನಿಮ್ಮ ಮಗು ಎತ್ತಿಕೊಂಡು ಹೋದರೆಂದು ತಿಳಿಸಿದ್ದಾರೆ. ತಕ್ಷಣ ಜ್ಞಾನಭಾರತಿ ಠಾಣೆಗೆ ರಾಣಿ ದೂರು ನೀಡಿದ್ದಾರೆ. ಪ್ರಕರಣ ವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರೋಪಿಗಳ ಪತ್ತೆಗಾಗಿ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಮಂಜುನಾಥ್ ನೇತೃತ್ವದಲ್ಲಿ ಇನ್ಸ್‍ಪೆಕ್ಟರ್ ಶಿವಾರೆಡ್ಡಿ ಹಾಗೂ ಸಿಬ್ಬಂದಿ ಒಳಗೊಂಡ ವಿಶೇಷ ತಂಡವನ್ನು ರಚಿಸಲಾಗಿತ್ತು.

ಈ ತಂಡ ಕಾರ್ಯಪ್ರವೃತ್ತವಾಗಿ ಆರೋಪಿಗಳ ಬಗ್ಗೆ ವಿವಿಧ ಮಾಹಿತಿ ಕಲೆ ಹಾಕಿ ಮೊದಲು ಮೂವರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಲಕ್ಷಾಂತರ ಹಣಕ್ಕಾಗಿ ಮಗುವನ್ನು ಅಪಹರಿಸಿ ತಮಿಳು ನಾಡು ಮೂಲದ ದಂಪತಿಗೆ ಮಾರಾಟ ಮಾಡಿರುವುದಾಗಿ ಬಾಯ್ಬಿಟ್ಟಿದ್ದಾರೆ.

ಮಗು ಪಡೆದಿದ್ದ ದಂಪತಿ ಕಾರಿನಲ್ಲಿ ತಮಿಳುನಾಡಿನ ತೂತುಕುಡಿಗೆ ಕೊಂಡೊಯ್ದಿರುವ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರು ತಮಿಳುನಾಡಿಗೆ ತೆರಳಿ ದಂಪತಿಯನ್ನು ಬಂಧಿಸಿ ಮಗುವನ್ನು ಸುರಕ್ಷಿತವಾಗಿ ಪತ್ತೆ ಮಾಡಿ ಕರೆತರಲು ಯಶಸ್ವಿಯಾಗಿದ್ದಾರೆ.

Facebook Comments

Sri Raghav

Admin