ತೈಲ ಕೊಳವೆಮಾರ್ಗದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 22 ಮಂದಿ ಸುಟ್ಟು ಕರಕಲು..!

ಈ ಸುದ್ದಿಯನ್ನು ಶೇರ್ ಮಾಡಿ

Mexixo--01

ಮೆಕ್ಸಿಕೋ ಸಿಟಿ (ಪಿಟಿಐ), ಜ.19- ತೈಲ ಕೊಳವೆ ಮಾರ್ಗದಲ್ಲಿ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ 22 ಮಂದಿ ಸುಟ್ಟು ಕರಕಲಾಗಿ, 50ಕ್ಕೂ ಹೆಚ್ಚು ಜನರು ತೀವ್ರ ಗಾಯಗೊಂಡಿರುವ ಘಟನೆ ಮೆಕ್ಸಿಕೋದ ಹಿಡಾಲ್ಗೋ ಪ್ರಾಂತ್ಯದಲ್ಲಿ ಇಂದು ಸಂಭವಿಸಿದೆ.

ಪೈಪ್‍ಲೈನ್‍ನಲ್ಲಿ ಸೋರಿಕೆಯಾಗುತ್ತಿದ್ದ ಇಂಧನವನ್ನು ತುಂಬಿಕೊಳ್ಳಲು ಸ್ಥಳೀಯ ಜನರ ಗುಂಪು ಅಲ್ಲಿ ಸೇರಿದ್ದಾಗ ಬೆಂಕಿ ಆಕಸ್ಮಿಕ ಸಂಭವಿಸಿ 20ಕ್ಕೂ ಹೆಚ್ಚು ಮಂದಿ ಸಜೀವ ದಹನಗೊಂಡರು ಎಂದು ಹಿಡಾಲ್ಗೋ ರಾಜ್ಯದ ಗೌರ್ನರ್ ಓಮರ್ ಫಯಾದ್ ಹೇಳಿದ್ದಾರೆ.

ಈ ದುರ್ಘಟನೆಯಲ್ಲಿ 54 ಮಂದಿಗೆ ತೀವ್ರ ಸುಟ್ಟು ಗಾಯಗಳಾಗಿದ್ದು, ಕೆಲವರ ಸ್ಥಿತಿ ಶೋಚನೀಯವಾಗಿರುವುದರಿಂದ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ ಎಂದು ಗೌರ್ನರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ದೊಡ್ಡ ಕೊಳೆವೆ ಮಾರ್ಗದಲ್ಲಿ ತೈಲ ಸೋರಿಕೆಯಾಗುತ್ತಿದ್ದ ಸುದ್ದಿ ತಿಳಿದು ಬಕೆಟ್‍ಗಳು ಮತ್ತು ಕ್ಯಾನ್‍ಗಳೊಂದಿಗೆ ಸ್ಥಳೀಯ ನಿವಾಸಿಗಳ ಗುಂಪೊಂದು ಅಲ್ಲಿ ಜಮಾಯಿಸಿತ್ತು. ಇದೇ ಸಂದರ್ಭದಲ್ಲಿ ಗ್ಯಾಸೋಲೈನ್ ಪೈಪ್‍ನಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಆ ಮಾರ್ಗದ ಕೊಳವೆ ಬೆಂಕಿಯ ಜ್ವಾಲೆಗಳೊಂದಿಗೆ ದಗದಗಿಸಿತು.

ಅಗ್ನಿಯ ರೌದ್ರಾವತಾರ ಕಂಡು ಜನರು ದಿಕ್ಕಾಪಾಲಾಗಿ ಓಡಿದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ. ಸುದ್ದಿ ತಿಳಿದ ಕೂಡಲೇ ಅಗ್ನಿಶಾಮಕ ಮತ್ತು ಆಂಬ್ಯುಲೆನ್ಸ್‍ಗಳೊಂದಿಗೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿ ಬೆಂಕಿ ಕೆನ್ನಾಲಿಗೆಯನ್ನು ನಂದಿಸಲು ಹರ ಸಾಹಸಪಟ್ಟರು. ಕೊಳವೆ ಮಾರ್ಗದಲ್ಲಿ ತೈಲ ಸೋರಿಕೆ, ಬೆಂಕಿ ದುರಂತ ಮತ್ತು ಸಾವುನೋವಿನ ಘಟನೆಗಳ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.

Facebook Comments

Sri Raghav

Admin