ಆಂಬಿಡೆಂಟ್ ಪ್ರಕರಣದಲ್ಲಿ ಜನಾರ್ಧನ ರೆಡ್ಡಿ ವಿರುದ್ಧ ಚಾರ್ಜ್‍ಶೀಟ್..?

ಈ ಸುದ್ದಿಯನ್ನು ಶೇರ್ ಮಾಡಿ

Janardhan-Reddy--CCB
ಬೆಂಗಳೂರು,ಜ.19- ಆಂಬಿಡೆಂಟ್ ವಂಚನೆ ಪ್ರಕರಣದಲ್ಲಿ ಮಾಜಿ ಸಚಿವ ಹಾಗೂ ಬಳ್ಳಾರಿ ಗಣಿಧಣಿ ಜನಾರ್ಧನ ರೆಡ್ಡಿಯನ್ನು ಆರೋಪಿಯನ್ನಾಗಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ (ಚಾರ್ಜ್‍ಶೀಟ್) ಸಲ್ಲಿಸಲು ಸಿಸಿಬಿ ತನಿಖಾಧಿಕಾರಿಗಳು ಮುಂದಾಗಿದ್ದಾರೆ.

ಈಗಾಗಲೇ ಸಿಸಿಬಿ ಅಧಿಕಾರಿಗಳು ತನಿಖೆಯನ್ನು ಪೂರ್ಣಗೊಳಿಸಿದ್ದು, ಮುಂದಿನ ವಾರ ನ್ಯಾಯಾಲಯಕ್ಕೆ ಜನಾರ್ಧನ ರೆಡ್ಡಿ ಸೇರಿದಂತೆ ಆರೋಪಿಗಳ ವಿರುದ್ಧ ಜಾರ್ಜ್‍ಶೀಟ್ ಹಾಕಲಿದ್ದಾರೆ ಎಂದು ತಿಳಿದುಬಂದಿದೆ.

ಆಂಬಿಡೆಂಟ್ ವಂಚನೆ ಪ್ರಕರಣದ ತನಿಖೆ ನಡೆಸಿರುವ ಸಿಸಿಬಿ ಅಧಿಕಾರಿಗಳು ಒಟ್ಟು 10 ಮಂದಿಯನ್ನು ಆರೋಪಿಗಳನ್ನಾಗಿಸಿದ್ದಾರೆ. ಮೊದಲ ಆರೋಪಿಯನ್ನಾಗಿ ಫರೀದ್ ಪುತ್ರ ಸಯ್ಯದ್ ಅಫ್ರದ್ ಅಹಮ್ಮದ್, ಇಫ್ರಾನ್ ಮಿರ್ಜಾ, ಆಂಬಿಡೆಂಟ್ ಕಂಪನಿಯ ನಿರ್ದೇಶಕ, ಬಳ್ಳಾರಿ ಮೂಲದ ಚಿನ್ನಬೆಳ್ಳಿ ವ್ಯಾಪಾರಿ ರಮೇಶ್ ಮತ್ತು ಆಲಿಖಾನ್ ಅವರುಗಳನ್ನು ಪ್ರಮುಖ ಆರೋಪಿಗಳೆಂದು ಗುರುತಿಸಲಾಗಿದೆ.

ಇದರ ಜೊತೆಗೆ ಈ ವಂಚನೆ ಪ್ರಕರಣದಲ್ಲಿ ವಿಜಯ್ ತಾತ ಹಾಗೂ ಇತರೆ ನಾಲ್ವರನ್ನು ಸಹ ಆರೋಪಿಗಳೆಂದು ಸಿಸಿಬಿ ಪತ್ತೆ ಮಾಡಿದೆ. ಈಗಾಗಲೇ ತನಿಖೆಯನ್ನು ನಾವು ಪೂರ್ಣಗೊಳಿಸಿದ್ದೇವೆ.

 

ನಗರ ಪೊಲೀಸ್ ಆಯುಕ್ತರ ಅನುಮತಿ ಪಡೆದು ನ್ಯಾಯಾಲಯಕ್ಕೆ ಮುಂದಿನ ವಾರ ದೋಷಾರೋಪ ಪಟ್ಟಿ ಸಲ್ಲಿಸುವುದಾಗಿ ಹಿರಿಯ ತನಿಖಾಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣದಲ್ಲಿ ಜನಾರ್ಧನ ರೆಡ್ಡಿ ಶಾಮೀಲಾಗಿರುವುದು ಕಂಡುಬಂದಿದೆ. ಅಲ್ಲದೆ ರೆಡ್ಡಿ ಆಪ್ತ ಆಲಿಖಾನ್ ಕೂಡ ಶಾಮೀಲಾಗಿಯೇ ಜನರಿಗೆ ವಂಚನೆ ಮಾಡಿರುವುದು ತನಿಖಾ ವೇಳೆ ಪತ್ತೆಯಾಗಿದೆ.

ಆಂಬಿಡೆಂಟ್ ಕಂಪನಿಯ ಮಾಲೀಕ ಫರೀದ್ ಜನರಿಂದ ನೂರಾರು ಕೋಟಿ ಹಣವನ್ನು ಸಂಗ್ರಹಿಸಿ ವಂಚನೆ ಮಾಡಿದ್ದ. ತಮ್ಮ ಹಣವನ್ನು ಹಿಂತಿರುಗಿಸುವಂತೆ ಸಾರ್ವಜನಿಕರು ಒತ್ತಡ ಹಾಕುತ್ತಿದ್ದಂತೆ ತಲೆಮರೆಸಿಕೊಳ್ಳಲು ಮುಂದಾಗಿದ್ದ. ಈ ಪ್ರಕರಣವನ್ನು ಇಡಿ ತನಿಖೆಗೆ ಕೈಗೆತ್ತಿಕೊಳ್ಳಲು ಮುಂದಾಗಿದ್ದ ವೇಳೆ ಫರೀದ್ ಬಳ್ಳಾರಿ ಮೂಲದ ಚಿನ್ನಬೆಳ್ಳಿ ವ್ಯಾಪಾರಿಗಳಾದ ರಮೇಶ್ ಮತ್ತು ಮೆಫೂಜ್ ಆಲಿಖಾನ್ ರೆಡ್ಡಿಯನ್ನು ಸಂಪರ್ಕಿಸಿದರು.

ತನಗೆ ಇಡಿ ಅಧಿಕಾರಿಗಳು ಪರಿಚಯವಿದ್ದು, ಪ್ರಕರಣವನ್ನು ಮುಚ್ಚಿ ಹಾಕಲು ಕನಿಷ್ಟ 20 ಕೋಟಿ ಹಣವನ್ನು ನೀಡುವಂತೆ ಜನಾರ್ಧನ್ ರೆಡ್ಡಿ ಚಿನ್ನಬೆಳ್ಳಿ ವ್ಯಾಪಾರಿಗಳಿಗೆ ಸೂಚಿಸಿದ್ದರು.

ಇದರಂತೆ ಆರ್‍ಟಿಜಿಎಸ್ ಮೂಲಕ ಫರೀದ್, ರಮೇಶ್ ಹಾಗೂ ಮೆಫೂಜ್ ಆಲಿಖಾನ್ ಖಾತೆಗೆ 20 ಕೋಟಿ ಹಣವನ್ನು ರವಾನಿಸಿದ್ದರು. ಈ ಹಣದಲ್ಲೇ ರೆಡ್ಡಿ ಚಿನ್ನಾಭರಣಗಳನ್ನು ಖರೀದಿ ಮಾಡಿದ್ದರು ಎಂಬುದು ತನಿಖೆ ವೇಳೆ ಸಾಬೀತಾಗಿದೆ.  ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ನ.11ರಂದು ಜನಾರ್ಧನ ರೆಡ್ಡಿ, ಆತನ ಆಪ್ತ ಆಲಿಖಾನ್ ಮತ್ತಿತರರನ್ನು ಸಿಸಿಬಿ ಅಧಿಕಾರಿಗಳು ಬಂಧಿಸಿದ್ದರು.
ಸದ್ಯ ನ್ಯಾಯಾಲಯದ ಜಾಮೀನಿನ ಮೇಲೆ ಆರೋಪಿಗಳು ಹೊರಬಂದಿದ್ದಾರೆ.

Facebook Comments

Sri Raghav

Admin