ದೋಸ್ತಿ ಸರ್ಕಾರದ ನೆತ್ತಿ ಮೇಲೆ ನೇತಾಡುತ್ತಿದೆ ‘ಅವಿಶ್ವಾಸ’ದ ತೂಗುಗತ್ತಿ..!

ಈ ಸುದ್ದಿಯನ್ನು ಶೇರ್ ಮಾಡಿ

Kumaraswamy-Parameshwar--01

ಬೆಂಗಳೂರು,ಜ.19- ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಿ ಪಕ್ಷವನ್ನು ಅಧಿಕಾರಕ್ಕೆ ತರಲೇಬೇಕೆಂದು ಪಟ್ಟು ಹಿಡಿದಿರುವ ಬಿಜೆಪಿ, ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಮಂಡಿಸಲು ಮುಂದಾಗಿದೆ.

ಈ ಸಂಬಂಧ ನಾಳೆ ಬೆಂಗಳೂರಿನ ಹೊರವಲಯದಲ್ಲಿ ಬಿಜೆಪಿ ಶಾಸಕರ ಮಹತ್ವದ ಸಭೆ ನಡೆಯಲಿದ್ದು, ಅವಿಶ್ವಾಸ ನಿರ್ಣಯ ಮಂಡಿಸುವ ಕುರಿತಂತೆ ಅಂತಿಮ ತೀರ್ಮಾನವನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ. ಕಾಂಗ್ರೆಸ್‍ನಿಂದ ಸಿಡಿದೆದ್ದಿರುವ ಶಾಸಕರು ಇಂದು ಸಂಜೆ ಇಲ್ಲವೇ ಸೋಮವಾರ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವುದು ಬಹುತೇಕ ಖಚಿತವಾಗಲಿದೆ.

ಆ ಮೂಲಕ ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಸಿ ಕೆಲ ತಿಂಗಳ ಮಟ್ಟಿಗಾದರೂ ವಿಧಾನಸಭೆಯನ್ನು ಅಮಾನತಿನಲ್ಲಿಟ್ಟು ನಂತರ ಸರ್ಕಾರ ರಚಿಸುವ ಲೆಕ್ಕಾಚಾರದಲ್ಲಿ ಬಿಜೆಪಿ ಇದೆ. ಇವೆಲ್ಲವೂ ಶಾಸಕರ ರಾಜೀನಾಮೆ ನೀಡಿದ ನಂತರವೇ ತೀರ್ಮಾನವಾಗಲಿದೆ.

ಮೂಲಗಳ ಪ್ರಕಾರ ನಿನ್ನೆ ಕಾಂಗ್ರೆಸ್ ಶಾಸಕಾಂಗ ಸಭೆಗೆ ಗೈರು ಹಾಜರಾಗಿದ್ದ ಗೋಕಾಕ್‍ನ ರಮೇಶ್ ಜಾರಕಿಹೊಳಿ, ಅಥಣಿಯ ಮಹೇಶ್ ಕುಮಟಳ್ಳಿ, ಚಿಂಚೋಳಿಯ ಡಾ.ಉಮೇಶ್ ಜಾಧವ್ ಹಾಗೂ ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದು ಬಹುತೇಕ ಖಚಿತವಾಗಿದೆ.

ಈಗಾಗಲೇ ಈ ನಾಲ್ವರು ಶಾಸಕರು ವಿಧಾನಸಭೆಯ ಸ್ಪೀಕರ್ ರಮೇಶ್‍ಕುಮಾರ್ ಅವರಲ್ಲಿ ಸಮಯಾವಕಾಶ ಕೋರಿದ್ದಾರೆ ಎಂದು ಹೇಳಲಾಗಿದೆ.  ನಿನ್ನೆ ರಾತ್ರಿಯೇ ನವದೆಹಲಿಗೆ ತೆರಳಿದ್ದ ಬಿ.ನಾಗೇಂದ್ರ ಇಂದು ಪುನಃ ಮುಂಬೈಗೆ ತೆರಳಿದ್ದು, ಭಿನ್ನಮತೀಯರ ಗುಂಪು ಸೇರಿಕೊಂಡಿದ್ದಾರೆ. ಈ ನಾಲ್ವರು ಶಾಸಕರು ಒಟ್ಟಿಗೆ ಬಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಲಿದ್ದಾರೆ ಎನ್ನಲಾಗುತ್ತಿದೆ.  ಮೊದಲ ಹಂತದಲ್ಲಿ ನಾಲ್ವರು ಶಾಸಕರು ರಾಜೀನಾಮೆ ನೀಡಿದರೆ ನಂತರ 2ನೇ ಹಂತದಲ್ಲಿ 5ರಿಂದ 6 ಶಾಸಕರನ್ನು ಸೆಳೆಯಲು ಬಿಜೆಪಿ ಕಾರ್ಯತಂತ್ರ ರೂಪಿಸುತ್ತಿದೆ.

ಈಗಾಗಲೇ ಇಬ್ಬರು ಪಕ್ಷೇತರ ಶಾಸಕರಾದ ನಾಗೇಶ್ ಮತ್ತು ಆರ್.ಶಂಕರ್ ಕೂಡ ಬಿಜೆಪಿ ಪಾಳೆಯದಲ್ಲಿದ್ದಾರೆ. ಒಟ್ಟು 12ರಿಂದ 15 ಶಾಸಕರಿಂದ ರಾಜೀನಾಮೆ ಕೊಡಿಸಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಮಂಡಿಸಲು ಬಿಜೆಪಿ ಮುಂದಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಸದ್ಯಕ್ಕೆ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರಕ್ಕೆ 118 ಶಾಸಕರ ಬೆಂಬಲವಿದೆ. ಇಬ್ಬರು ಪಕ್ಷೇತರ ಶಾಸಕರು ಬೆಂಬಲವನ್ನು ವಾಪಸ್ ಪಡೆದಿದ್ದಾರೆ. ಬಿಜೆಪಿ 104 ಶಾಸಕರನ್ನು ಹೊಂದಿದೆ. ನಾಲ್ವರು ಶಾಸಕರು ರಾಜೀನಾಮೆ ಕೊಟ್ಟರೆ ಮೈತ್ರಿ ಸರ್ಕಾರದ ಸಂಖ್ಯಾ ಬಲ 114ಕ್ಕೆ ಕುಸಿಯುತ್ತದೆ. ಒಂದು ವೇಳೆ 15 ಶಾಸಕರು ರಾಜೀನಾಮೆ ಕೊಟ್ಟರೆ 103ಕ್ಕೆ ಇಳಿಯುತ್ತದೆ. ಈ ವೇಳೆ ವಿಧಾನಸಭೆಯ ಒಟ್ಟು 224 ಸದಸ್ಯರಲ್ಲಿ 15 ಸ್ಥಾನಗಳು ಖಾಲಿಯಾದರೆ 209 ಸದಸ್ಯರನ್ನು ಪರಿಗಣಿಸಬೇಕಾಗುತ್ತದೆ.

ಆಗ ಯಾವುದೇ ಸರ್ಕಾರಕ್ಕೆ ಸರಳ ಬಹುಮತವಾಗಿ 105 ಮತಗಳು ಬೇಕಾಗುತ್ತದೆ. ಬಿಜೆಪಿ ಈಗಾಗಲೇ 104 ಶಾಸಕರ ಜೊತೆಗೆ ಇಬ್ಬರು ಪಕ್ಷೇತರರನ್ನು ಹೊಂದಿರುವುದರಿಂದ ಸರಳ ಬಹುಮತದ ಮೂಲಕ ಸರ್ಕಾರ ಹಿಡಿಯಬಹುದು ಎಂಬ ಲೆಕ್ಕಾಚಾರ ಬಿಜೆಪಿಯದಾಗಿದೆ. ಫೆ.8ರಂದು ಪ್ರಸಕ್ತ ಸಾಲಿನ ರಾಜ್ಯ ಬಜೆಟ್ ಮಂಡನೆಯಾಗಲಿದ್ದು, ಅದಕ್ಕೂ ಮುನ್ನ ರಾಜ್ಯಪಾಲರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಬೇಕು. ಬಜೆಟ್ ಮಂಡನೆಗೂ ಮುನ್ನವೇ ಅವಿಶ್ವಾಸ ನಿರ್ಣಯ ಮಂಡಿಸುವುದು ಬಿಜೆಪಿಯ ಮುಖಂಡರ ಲೆಕ್ಕಾಚಾರವಾಗಿದೆ.

ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಬಜೆಟ್ ಮಂಡನೆಗೆ ಅವಕಾಶ ನೀಡಬಾರದೆಂದು ಬಿಜೆಪಿ ಈ ಕಾರ್ಯತಂತ್ರ ರೂಪಿಸಿದೆ.
ಒಂದು ವೇಳೆ ಅಂದುಕೊಂಡಂತೆ ನಡೆಯದಿದ್ದರೆ ಎಷ್ಟು ಶಾಸಕರಿಂದ ಸಾಧ್ಯವೋ ಅಷ್ಟು ಶಾಸಕರಿಂದ ರಾಜೀನಾಮೆ ಕೊಡಿಸಿ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಸಿ ಮೈತ್ರಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ಕಾರ್ಯೋನ್ಮುಖವಾಗಿದೆ.

Facebook Comments

Sri Raghav

Admin