‘ಕೈ-ಕಮಲ ಕಚ್ಚಾಟ, ಜನರಿಗೆ ಪೀಕಲಾಟ, ಅಧಿಕಾರಿಗಳಿಗೆ ಹಬ್ಬದೂಟ’

ಈ ಸುದ್ದಿಯನ್ನು ಶೇರ್ ಮಾಡಿ

Karantaka--01

ಬೆಂಗಳೂರು, ಜ.19- ವಿರೋಧ ಪಕ್ಷ ಬಿಜೆಪಿ ಶಾಸಕರು ಹರಿಯಾಣದ ಗುರುಗ್ರಾಮ ರೆಸಾರ್ಟ್‍ನಲ್ಲಿ ಆಡಳಿತ ಪಕ್ಷದ ಭಾಗವಾಗಿರುವ ಕಾಂಗ್ರೆಸ್ ಶಾಸಕರು ಬಿಡದಿ ರೆಸಾರ್ಟ್‍ನಲ್ಲಿ ಇವರನ್ನೆಲ್ಲ ನಂಬಿ ಮತ ಹಾಕಿದ ಜನ ಬೀದಿಯಲ್ಲಿದ್ದಾರೆ.

ಎಲ್ಲಿಗೆ ಬಂತು ಪ್ರಜಾಪ್ರಭುತ್ವ, ಯಾರಿಗೆ ಬಂತು ಪ್ರಜಾಪ್ರಭುತ್ವ, ಯಾರಿಗೋಸ್ಕರ ಪ್ರಜಾಪ್ರಭುತ್ವ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ. ಕಾಂಗ್ರೆಸ್, ಬಿಜೆಪಿ ಶಾಸಕರ ಕಚ್ಚಾಟದಿಂದ ರಾಜ್ಯದ ಜನರಿಗೆ ಪೀಕಲಾಟ ಶುರುವಾಗಿದೆ. ಇದರಿಂದ ಅಧಿಕಾರಿಗಳಿಗೆ ಮಾತ್ರ ಹಬ್ಬದ ವಾತಾವರಣ ಉಂಟಾಗಿದೆ.

ಸರ್ಕಾರ ಉರುಳಿಸುವ-ಉಳಿಸಿಕೊಳ್ಳುವ ಪ್ರಯತ್ನ ಸರ್ಕಾರ ರಚನೆಯಾದ ಏಳು ತಿಂಗಳಿನಿಂದಲೂ ನಡೆಯುತ್ತಿದೆ. ಇನ್ನು ಅಭಿವೃದ್ಧಿ ಕೆಲಸಗಳು ಮರೀಚಿಕೆಯಾಗಿವೆ. ಆಡಳಿತ ಪಕ್ಷ ದಷ್ಟೇ ಜವಾಬ್ದಾರಿ ಪ್ರತಿಪಕ್ಷಗಳಿಗೂ ಇರಬೇಕಿತ್ತು.

ಆದರೆ ಆಡಳಿತ, ಪ್ರತಿಪಕ್ಷಗಳ ಶಾಸಕರು ವೈಭವಯುತ ರೆಸಾರ್ಟ್ ಸೇರಿಕೊಂಡಿದ್ದಾರೆ. ಎಲ್ಲರೂ ನೈತಿಕತೆಯ ಮಾತನಾಡುತ್ತಿದ್ದಾರೆ. ರೆಸಾರ್ಟ್ ರಾಜಕಾರಣವನ್ನು ಕಾಂಗ್ರೆಸ್, ಬಿಜೆಪಿ ಸಮರ್ಥಿಸಿಕೊಳ್ಳುತ್ತಿದೆ. ನಾವು ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಒಂದೆಡೆ ಸೇರಿದ್ದೇವೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ.

ಇತ್ತ ಬಿಜೆಪಿ ನಾಯಕರ ಆಪರೇಷನ್ ಕಮಲದ ಭೀತಿಯಿಂದ ಬಿಡದಿ ರೆಸಾರ್ಟ್‍ನಲ್ಲಿ ನಾವು ಒಂದೆಡೆ ಸೇರಿದ್ದೇವೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ರಾಜ್ಯದಲ್ಲಿ 156 ತಾಲೂಕುಗಳಲ್ಲಿ ಬರಗಾಲವಿದೆ. ಮಡಿಕೇರಿಯಲ್ಲಿ ಭಾರೀ ಮಳೆಯಿಂದ ಕೊಚ್ಚಿ ಹೋದ ಜನರಿಗೆ ಪುನರ್ವಸತಿ ಕಲ್ಪಿಸಬೇಕಾಗಿದೆ. ಕುಡಿಯುವ ನೀರಿನ ಬಗ್ಗೆ ಚರ್ಚೆಯಾಗಬೇಕು, ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಜನರ ಸಮಸ್ಯೆ ಆಲಿಸಬೇಕು, ಸ್ಥಳೀಯ ಶಾಸಕರು ಕ್ಷೇತ್ರದಲ್ಲಿದ್ದು, ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು.

ಆದರೆ ಕಳೆದ ಹತ್ತು ದಿನಗಳಿಂದ ಇದ್ಯಾವುದೂ ಆಗುತ್ತಿಲ್ಲ. ರೆಸಾರ್ಟ್‍ಗಳಲ್ಲಿ ಸೇರಿರುವವರು ಇದ್ಯಾವುದರ ಬಗ್ಗೆಯೂ ಚರ್ಚೆ ನಡೆಸುತ್ತಿಲ್ಲ. ಕೇವಲ ಅಧಿಕಾರಕ್ಕೋಸ್ಕರ ರಾಜಕೀಯ ನಾಟಕಗಳನ್ನು ಆಡುತ್ತಿದ್ದಾರೆ. ನಾ ಮೇಲು, ತಾ ಮೇಲು ಎಂದು ತಮ್ಮನ್ನೇ ತಾವು ವೈಭವೀಕರಿಸಿಕೊಳ್ಳುತ್ತಿದ್ದಾರೆ.

ದೀನದಲಿತರಿಗೆ, ಬಡವರಿಗೆ ನೆರವಾಗಬೇಕಾಗಿದ್ದ ಜನಪ್ರತಿನಿಧಿಗಳು ತಮ್ಮ ಬುದ್ಧಿಶಕ್ತಿಯನ್ನು ಬ್ಲಾಕ್‍ಮೇಲ್ ರಾಜಕಾರಣಕ್ಕೆ ಮೀಸಲಿಟ್ಟಿದ್ದಾರೆ. ಇದರಿಂದ ಪ್ರಾಮಾಣಿಕ ರಾಜಕಾರಣಿಗಳು, ನವ ಜನಪ್ರತಿನಿಧಿಗಳು, ಪಕ್ಷನಿಷ್ಠರು ಕಂಗಾಲಾಗಿದ್ದಾರೆ. ಹೇಗಾದರೂ ಮಾಡಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಕೆಡವಿ ಬಿಜೆಪಿ ಸರ್ಕಾರವನ್ನು ಪ್ರತಿಷ್ಠಾಪಿಸಬೇಕೆಂದು ಯಡಿಯೂರಪ್ಪ ಶತಾಯಗತಾಯ ಪ್ರಯತ್ನ ನಡೆಸುತ್ತಿದ್ದಾರೆ.

ಯಡಿಯೂರಪ್ಪನವರ ಪ್ರಯತ್ನ ಫಲಿಸಲು ಅವಕಾಶ ನೀಡಬಾರದೆಂದು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮುಖಂಡರು ಪ್ರಯತ್ನ ಮುಂದುವರೆಸಿದ್ದಾರೆ. ಸಂವಿಧಾನಾತ್ಮಕವಾಗಿ ರಚನೆಯಾದ ಯಾವುದೇ ಸರ್ಕಾರವನ್ನು ಕೆಡವಬೇಕಾದರೆ ಅಥವಾ ಅಸ್ಥಿರಗೊಳಿಸಿ ಬೇರೆ ಸರ್ಕಾರ ರಚನೆ ಮಾಡಬೇಕಾದರೆ ಸ್ವಂತ ಶಕ್ತಿ ಇರಬೇಕು. ಇಲ್ಲದಿದ್ದರೆ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ, ಹೊರೆಯಾಗುತ್ತದೆ.

ಸಾರ್ವಜನಿಕರ ಸಮಸ್ಯೆಗಳ ಅರಿವು ಯಾವ ಪಕ್ಷದ ಜನಪ್ರತಿನಿಧಿಗಳಿಗೂ ಇದ್ದಂತಿಲ್ಲ. ದ್ವೇಷದ ರಾಜಕಾರಣ, ಅಧಿಕಾರದ ಲಾಲಸೆ ಅಷ್ಟೇ ಮುಖ್ಯವಾಗಿದೆ. ಹೇಗಾದರೂ ಮಾಡಿ ಅಧಿಕಾರ ಹಿಡಿಯಬೇಕು. ಹೇಗಾದರೂ ಮಾಡಿ ಅಧಿಕಾರ ಉಳಿಸಿಕೊಳ್ಳಬೇಕು ಎಂಬುದಷ್ಟೇ ಮುಖ್ಯವಾಗಿದೆ.

ಫೆಬ್ರವರಿ 8 ರಂದು ರಾಜ್ಯದ ಬಜೆಟ್ ಘೋಷಣೆಯಾಗಲಿದೆ. ಇದಕ್ಕಾಗಿ ಬಜೆಟ್ ಪೂರ್ವ ಸಭೆಗಳು ನಡೆಯಬೇಕು. ಇಲಾಖೆ ಬೇಡಿಕೆಗಳ ಬಗ್ಗೆ ಚರ್ಚೆಯಾಗಬೇಕು, ಕ್ಷೇತ್ರಗಳಿಗೆ ಅನುದಾನ ಬಿಡುಗಡೆಯಾಗುವ ಬಗ್ಗೆ ಆಯಾ ಕ್ಷೇತ್ರದ ಶಾಸಕರು ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಬೇಕು. ಪ್ರತಿಪಕ್ಷದ ನಾಯಕರೂ ಕೂಡ ಈ ಬಗ್ಗೆ ಗಮನಹರಿಸಬೇಕು. ಆದರೆ ರಾಜಕೀಯ ಮೇಲಾಟದಲ್ಲಿ ಈ ಯಾವ ಕಾರ್ಯಕ್ರಮಗಳೂ ಸರಿಯಾಗಿ ನಡೆಯುತ್ತಿಲ್ಲ. ಎಲ್ಲ ಅಧಿಕಾರಿಗಳ ಕೈಯಲ್ಲಿ ನಡೆಯುತ್ತಿದೆ.

ಜನಪ್ರತಿನಿಧಿಗಳು ರೆಸಾರ್ಟ್ ಸೇರಿಕೊಂಡಿದ್ದಾರೆ. ಪ್ರಜಾಪ್ರಭುತ್ವದ ಸಂವಿಧಾನ ನೀತಿ, ನಿಯಮಗಳೆಲ್ಲ ಮೂಲೆಗೆ ತಳ್ಳಿ ಜನತೆ ನೀಡಿದ ಮತಾದೇಶವನ್ನು ಪಣಕ್ಕಿಟ್ಟಿದ್ದಾರೆ ಎಂದು ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಈ ನಡುವೆ ಅಧಿಕಾರಿಗಳ ವರ್ಗಾವಣೆ ಪರ್ವ ಮುಂದುವರೆದಿದೆ. ಕೆಲವು ಅಧಿಕಾರಿಗಳು ಕೆಎಟಿ ಮೊರೆ ಹೋಗಿದ್ದಾರೆ.

ತಮ್ಮ ಕ್ಷೇತ್ರಗಳಿಗೆ ಬೇಕಾದ ಅಧಿಕಾರಿಗಳಿಗೆ ಶಿಫಾರಸು ಮಾಡಬೇಕಾದ ಜನಪ್ರತಿನಿಧಿಗಳೇ ಇಲ್ಲ. ಯಾವ ರೀತಿ ಕ್ಷೇತ್ರದ ಅಭಿವೃದ್ಧಿ ಕೆಲಸಗಳು ಆಗುತ್ತವೆ. ಇಂತಹ ಜನಪ್ರತಿನಿಧಿಗಳಿಂದ ಯಾವ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯ ಎಂದು ಕ್ಷೇತ್ರದ ಮತದಾರರು ಕಿಡಿಕಾರುತ್ತಿದ್ದಾರೆ.

ಆಡಳಿತ ಮತ್ತು ಪ್ರತಿಪಕ್ಷಗಳ ಕೆಸರೆರಚಾಟ ಮುಂದುವರೆದಿದೆ. ತಾವು ಮಾಡಿದ್ದೇ ಸರಿ ಎಂದು ಕಾಂಗ್ರೆಸ್-ಜೆಡಿಎಸ್ ನಾಯಕರು ಸಮರ್ಥಿಸಿಕೊಳ್ಳುತ್ತಿದ್ದಾರೆ.
ಕಳೆದ 10 ದಿನಗಳಿಂದ ನಡೆಯುತ್ತಿರುವ ರಾಜಕೀಯ ಪ್ರಹಸನಕ್ಕೆ ಕಾಂಗ್ರೆಸ್, ಬಿಜೆಪಿ ನಾಯಕರು ತಮ್ಮದೇ ಆದ ವ್ಯಾಖ್ಯಾನಗಳನ್ನು ನೀಡುತ್ತಿದ್ದಾರೆ. ಆರೋಪ-ಪ್ರತ್ಯಾರೋಪಗಳ ಸುರಿಮಳೆಯಾಗುತ್ತಿದೆ.

ಲೋಕಸಭೆ ಚುನಾವಣೆ ಸಂಬಂಧ ಒಂದೆಡೆ ಕುಳಿತು ಚರ್ಚಿಸಲು ನಾವು ಗುರುಗ್ರಾಮ ರೆಸಾರ್ಟ್‍ನಲ್ಲಿದ್ದೇವೆ. ನಾವು ಯಾವುದೇ ಆಪರೇಷನ್ ಕಮಲ ಮಾಡುತ್ತಿಲ್ಲ ಎಂದು ಹೇಳುತ್ತಲೇ ಬಿಜೆಪಿ ಕಾಂಗ್ರೆಸ್‍ನ ಹಲವು ಶಾಸಕರನ್ನು ಸೆಳೆಯುವ ರಹಸ್ಯ ಕಾರ್ಯಾಚರಣೆ ನಡೆಸುತ್ತಿದೆ. ಇದನ್ನರಿತೇ ಕಾಂಗ್ರೆಸ್ ತನ್ನ ಶಾಸಕರನ್ನು ರಕ್ಷಿಸಿಕೊಳ್ಳಲು ಶಾಸಕಾಂಗ ಪಕ್ಷದ ಸಭೆ, ಇದರಲ್ಲಿ ಭಾಗವಹಿಸದಿದ್ದರೆ ಕ್ರಮ ಎಂಬ ಹಿನ್ನೆಲೆಯಲ್ಲಿ ಎಲ್ಲರನ್ನು ಒಂದೆಡೆ ಸೇರಿಸಿ ರೆಸಾರ್ಟ್‍ನಲ್ಲಿ ಕೂಡಿ ಹಾಕಿದೆ.

ಕಾಂಗ್ರೆಸ್ ಒಗ್ಗಟ್ಟು ಪ್ರದರ್ಶಿಸಿದರೂ ಹಲವು ಶಾಸಕರು ಕೈಕೊಡುವ ಆತಂಕ ಎದುರಾಗಿದೆ. ಹೀಗಾಗಿ ರಾಜಕೀಯ ಮೇಲಾಟ ಮತ್ತಷ್ಟು ರಂಗುಪಡೆದುಕೊಂಡಿದೆ. ಈ ಎಲ್ಲದರ ನಡುವೆ ಸಿಲುಕಿ ಹಾಕಿಕೊಂಡಿರುವ ಜನಸಾಮಾನ್ಯರು ಉಸಿರುಗಟ್ಟಿದ ವಾತಾವರಣದಲ್ಲಿದ್ದಾರೆ.

Facebook Comments

Sri Raghav

Admin