ಲೋಕಸಭಾ ಸಮರದಲ್ಲಿ ಮೋದಿ ಮಣಿಸಲು ಕೋಲ್ಕತ್ತಾದಲ್ಲಿ ಮೊಳಗಿದ ರಣಕಹಳೆ

ಈ ಸುದ್ದಿಯನ್ನು ಶೇರ್ ಮಾಡಿ

kalakatta

ಕೋಲ್ಕತ್ತಾ, ಜ.19- ಮುಂಬರುವ ಲೋಕಸಭಾ ಚುನಾವಣೆ ಕದನ ಕೌತುಕ ಕೆರಳಿಸಿರುವಂತೆಯೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರವನ್ನು ಮಣಿಸುವ ಉದ್ದೇಶದೊಂದಿಗೆ ಕೋಲ್ಕತ್ತಾದಲ್ಲಿ ತೃಣಮೂಲ ಕಾಂಗ್ರೆಸ್ ನಾಯಕಿ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಾರಥ್ಯದಲ್ಲಿ ಇಂದು ನಡೆದ ಸಂಯುಕ್ತ ವಿರೋಧಿ ಪಕ್ಷ ಮಹಾರ್ಯಾಲಿಯಲ್ಲಿ 20ಕ್ಕೂ ಹೆಚ್ಚು ಪಕ್ಷಗಳು ಒಗ್ಗಟ್ಟು ಪ್ರದರ್ಶಿಸಿ ಕೇಂದ್ರದ ವಿರುದ್ಧ ರಣಕಹಳೆ ಮೊಳಗಿಸಿದೆ.

ಲೋಕಸಭೆಯ ಹೋರಾಟದ ಸನ್ನಿವೇಶದ ಬದಲಾವಣೆಗೆ ಕಾರಣವಾದ ಪ್ರತಿಪಕ್ಷಗಳ ಈ ಸಮಾವೇಶ ಬಿಜೆಪಿ ಮುಖಂಡರಲ್ಲಿ ಆತಂಕದ ಸಂಚಲನ ಸಹ ಮೂಡಿಸಿದೆ.

ರ್ಯಾಲಿಯಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ ಈ ಮಹಾಮೈತ್ರಿಕೂಟಕ್ಕೆ ಬೆಂಬಲ ನೀಡಬೇಕೆಂದು ದೇಶದ ಜನತೆಯಲ್ಲಿ ಒಕ್ಕೊರಲಿನ ಮನವಿ ಮಾಡಿದ್ದಾರೆ.

ಇಂದು ನಡೆದ ಸಮಾವೇಶವನ್ನು ಸಂಯುಕ್ತ ಭಾರತ ರ್ಯಾಲಿ ಎಂದೇ ಪರಿಗಣಿಸಲಾಗಿದೆ. ಸಂಯುಕ್ತ ವಿರೋಧಿ ರ್ಯಾಲಿಯು ಮುಂಬರುವ ಲೋಕಸಭಾ ಸಮರದಲ್ಲಿ ಬಿಜೆಪಿಗೆ ಮರಣ ಮೃದಂಗವಾಗಲಿದೆ ಎಂದು ಮಮತಾ ಬ್ಯಾನರ್ಜಿ ನಿನ್ನೆಯಷ್ಟೇ ಬಣ್ಣಿಸಿದರು.

ಲೋಕಸಭೆ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳು ಮಹತ್ವದ ಪಾತ್ರ ವಹಿಸುತ್ತವೆ. ಬಿಜೆಪಿ 125 ಸ್ಥಾನಗಳನ್ನು ಗೆಲ್ಲುವುದು ಕಷ್ಟ. ನಮ್ಮ ಮಹಾ ಮೈತ್ರಿಕೂಟವು ಕಳೆದ ಚುನಾವಣೆಯಲ್ಲಿ ಬಿಜೆಪಿಗಿಂತ ಹೆಚ್ಚು ಸ್ಥಾನಗಳನ್ನು ಗಳಿಸಲಿದೆ ಎಂದು ಪ್ರತಿಪಕ್ಷಗಳ ಪ್ರಧಾನಮಂತ್ರಿ ಅಭ್ಯರ್ಥಿ ಎಂದೇ ಬಿಂಬಿತವಾಗಿರುವ ದೀದಿ ವಿಶ್ವಾಸದಿಂದ ನುಡಿದರು.

# 20ಕ್ಕೂ ಹೆಚ್ಚು ಪಕ್ಷಗಳ ಮುಖಂಡರು ಭಾಗಿ:
ಕೋಲ್ಕತ್ತಾದ ಐತಿಹಾಸಿಕ ಬ್ರಿಗೇಡ್ ಪರೇಡ್ ಗ್ರೌಂಡ್‍ನಲ್ಲಿ ನಡೆದ ಸಭೆಯಲ್ಲಿ ಜೆಡಿಎಸ್ ವರಿಷ್ಠ ಮತ್ತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಅವರ ಪುತ್ರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.

ಮುಖ್ಯಮಂತ್ರಿಗಳಾದ ಅರವಿಂದ್ ಕೇಜ್ರಿವಾಲ್, ಚಂದ್ರಬಾಬು ನಾಯ್ಡು, ಮಾಜಿ ಮುಖ್ಯಮಂತ್ರಿಗಳಾದ ಡಾ.ಫಾರೂಕ್ ಅಬ್ದುಲ್ಲ, ಓಮರ್ ಅಬ್ದುಲ್ಲಾ, ಅಖಿಲೇಶ್ ಯಾದವ್, ಡಿಎಂಕೆ ನಾಯಕ ಎಂ.ಕೆ.ಸ್ಟಾಲಿನ್, ಆರ್‍ಜೆಡಿ ಮುಖಂಡ ತೇಜಸ್ವಿ ಯಾದವ್, ಶರದ್ ಯಾದವ್, ಹೇಮಂತ್ ಸೊರೇನ್ ಸಹ ಈ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದರು.

ಬಿಎಸ್‍ಪಿ ಪ್ರಧಾನ ಕಾರ್ಯದರ್ಶಿ ಸತೀಶ್ ಚಂದ್ರ, ಎನ್‍ಸಿಪಿ ನಾಯಕ ಶರದ್‍ಪವಾರ್, ಆರ್‍ಎಲ್‍ಡಿ ಮುಖ್ಯಸ್ಥ ಅಜಿತ್‍ಸಿಂಗ್, ಬಿಜೆಪಿ ಬಂಡಾಯ ನಾಯಕ ಶತ್ರುಘ್ನ ಸಿನ್ಹ, ಕೇಂದ್ರದ ಮಾಜಿ ಸಚಿವರಾದ ಯಶವಂತ್ ಸಿನ್ಹ, ಅರುಣ್ ಶೌರಿ, ಪಟೀದರ್ ಸಮುದಾಯದ ಮುಖಂಡ ಹಾರ್ದಿಕ್ ಪಟೇಲ್, ದಲಿತ ನಾಯಕ ಜಿಜ್ಞೇಶ್ ಮೇವಾನಿ, ಜಾರ್ಖಂಡ್ ವಿಕಾಸ ಮೋರ್ಚಾದ ಮುಖಂಡ ಬಾಬುಲಾಲ್ ಮರಾಂಡಿ, ಮೊನ್ನೆಯಷ್ಟೆ ಬಿಜೆಪಿ ತೊರೆದ ಅರುಣಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ಗೆಗಾಂಗ್ ಅಪಾಂಗ್ ಭಾಗವಹಿಸ ಪ್ರತಿಪಕ್ಷಗಳ ಸಂಯುಕ್ತ ರಂಗಕ್ಕೆ ಬೆಂಬಲ ನೀಡುವಂತೆ ದೇಶವಾಸಿಗಳಲ್ಲಿ ಮನವಿ ಮಾಡಿದರು.

ಆದರೆ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ ಮತ್ತು ಬಿಎಸ್‍ಪಿ ಅಧಿನಾಯಕಿ ಮಾಯಾವತಿ ಅವರ ಗೈರು ಹಾಜರಿ ನಾಳಿನ ಮಹಾ ರ್ಯಾಲಿಯಲ್ಲಿ ಎದ್ದು ಕಾಣುತ್ತಿತ್ತು. ಆದಾಗ್ಯೂ ನಿನ್ನೆಯಷ್ಟೆ ಮಮತಾ ಬ್ಯಾನರ್ಜಿಗೆ ಪತ್ರ ಬರೆದು ಈ ಮಹಾರ್ಯಾಲಿಗೆ ಮತ್ತು ವಿರೋಧ ಪಕ್ಷಗಳ ಸಂಯುಕ್ತ ರಂಗಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಿಸಿದರು.

ಎಡರಂಗಗಳು ಮತ್ತು ಅವುಗಳ ಮಿತ್ರ ಪಕ್ಷಗಳು ಸಭೆಯಲ್ಲಿ ಭಾಗವಹಿಸದೆ ದೂರ ಉಳಿದಿದ್ದವು. ರಾಹುಲ್ ಬದಲಿಗೆ ಕಾಂಗ್ರೆಸ್‍ನಿಂದ ಮಲ್ಲಿಕಾರ್ಜುನ ಖರ್ಗೆ ಮತ್ತು ಅಭಿಷೇಕ್ ಮನು ಸಿಂಘ್ವಿ ಭಾಗವಹಿಸಿದ್ದಾರೆ.

ಇದಕ್ಕೂ ಮುನ್ನ ಮಮತಾ ಬ್ಯಾನರ್ಜಿ ಅವರು ಟ್ವೀಟ್ ಮಾಡಿ ಈ ಮಹಾರ್ಯಾಲಿಗೆ ಭಾಗವಹಿಸಿರುವ ಎಲ್ಲ 20ಕ್ಕೂ ಹೆಚ್ಚು ಮುಖಂಡರಿಗೆ ಸ್ವಾಗತ ಕೋರಿ ಅಭಿನಂದನೆ ಸಲ್ಲಿಸಿದರು. ಏರ್ ಪೋರ್ಟ್ ನಿಂದ ಮಹಾರ್ಯಾಲಿ ನಡೆದ ಸ್ಥಳದವರೆಗೂ ಎಚ್.ಡಿ.ದೇವೇಗೌಡ ಅವರಿಂದ ಪ್ರತಿಯೊಬ್ಬ ನಾಯಕರ ಪೋ ಸ್ಟರ್‍ಗಳು ಮತ್ತು ಬ್ಯಾನರ್‍ಗಳು ರಾರಾಜಿಸಿದವು.

# ಭಾರೀ ಭದ್ರತೆ:
ಈ ಮಹಾರ್ಯಾಲಿಗಾಗಿ ಬೃಹತ್ ವೇದಿಕೆ ಸಿದ್ಧಪಡಿಸಲಾಗಿದ್ದು, 20 ಕಾವಲು ಗೋಪುರಗಳು, 1000 ಮೈಕ್ರೋ ಫೋನ್‍ಗಳು, 30 ಎಲ್‍ಇಡಿ ಸ್ಕ್ರೀನ್‍ಗಳನ್ನು ಹಾಕಲಾಗಿದೆ.  ಭದ್ರತೆಗಾಗಿ 10,000ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 400 ತಾತ್ಕಾಲಿಕ ಪೆÇಲೀಸ್ ಚೌಕಿಗಳನ್ನು ನಿರ್ಮಿಸಲಾಗಿದೆ. ಈ ರ್ಯಾಲಿಯಲ್ಲಿ 10 ಲಕ್ಷಕ್ಕೂ ಹೆಚ್ಚು ಮಂದಿ ಕಾರ್ಯಕರ್ತರು ಭಾಗವಹಿಸಿದ್ದರು.

Facebook Comments

Sri Raghav

Admin