ಅಭಿವೃದ್ಧಿ ಅಂಕಿ ಅಂಶಗಳಲ್ಲಿ ಮೋದಿ ಸರ್ಕಾರ ಚೆಲ್ಲಾಟವಾಡುತ್ತಿದೆ : ಯಶವಂತ್ ಸಿನ್ಹಾ

ಈ ಸುದ್ದಿಯನ್ನು ಶೇರ್ ಮಾಡಿ

Yshwant-singha--01
ಕೋಲ್ಕತ್ತಾ,ಜ.19- ಸ್ವಾತಂತ್ರ್ಯ ಬಂದ ನಂತರ ದೇಶದ ಅಭಿವೃದ್ದಿ ಕುರಿತ ಅಂಕಿ ಅಂಶಗಳ ವಿಷಯದಲ್ಲಿ ಚೆಲ್ಲಾಟವಾಡುತ್ತಿರುವ ಪ್ರಥಮ ಸರ್ಕಾರವೆಂಬ ಕುಖ್ಯಾತಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರಕ್ಕೆ ಸಲ್ಲುತ್ತದೆ ಎಂದು ಕೇಂದ್ರದ ಮಾಜಿ ಸಚಿವ ಯಶವಂತ್ ಸಿನ್ಹಾ ವಾಗ್ದಾಳಿ ನಡೆಸಿದ್ದಾರೆ.

ಕೋಲ್ಕತ್ತಾದ ಬ್ರಿಗೇಡ್ ಪರೇಡ್ ಮೈದಾನದಲ್ಲಿ ಇಂದು ನಡೆದ ಬಿಜೆಪಿ ವಿರುದ್ಧದ ವಿರೋಧಿ ಪಕ್ಷಗಳ ಸಂಯುಕ್ತ ಮಹಾ ರ್ಯಾಲಿಯಲ್ಲಿ ಅವರು ಮಾತನಾಡಿ, ಮೋದಿ ಮತ್ತು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.

ಲೋಕಸಭಾ ಚುನಾವಣೆ ಕುರುಕ್ಷೇತ್ರವಿದ್ದಂತೆ. ನೀವೆಲ್ಲರೂ ಇಲ್ಲಿ ಅರ್ಜುನನಂತೆ ಹೋರಾಡಿ ಬಿಜೆಪಿ ಸ್ಪರ್ಧಿಗಳನ್ನು ಮಣಿಸಬೇಕೆಂದು ಕೇಂದ್ರದ ಮತ್ತೊಬ್ಬ ಮಾಜಿ ಸಚಿವ ಅರುಣ್ ಶೌರಿ ಪ್ರತಿಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರಿಗೆ ಕರೆ ನೀಡಿದರು.

ಕೇಂದ್ರ ಸರ್ಕಾರದ ಕುತಂತ್ರದಿಂದ ವಿದ್ಯುನ್ಮಾನ ಮತಯಂತ್ರಗಳು ಚೋರ್ ಮಿಷಿನ್‍ಗಳಾಗಿವೆ ಎಂದು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಫಾರೂಖ್ ಅಬ್ದುಲ್ಲ ಟೀಕಿಸಿದರು.

ಜಾತ್ಯತೀತ ಸರ್ಕಾರ ರಚನೆಗಾಗಿ ವಿರೋಧ ಪಕ್ಷಗಳ ಮಹಾಮೈತ್ರಿ ನಮ್ಮ ಗುರಿ ಎಂದು ಕಾಂಗ್ರೆಸ್ ಮುಖಂಡ ಅಭಿಷೇಕ್ ಮನು ಸಿಂಗ್ವಿ ಹೇಳಿದರು.
ಕೇಂದ್ರ ಸರ್ಕಾರದ ವಿವಾದಿತ ಪೌರತ್ವ ಮಸೂದೆಯಿಂದ ಇಡೀ ಈಶಾನ್ಯ ಭಾರತ ಗೊಂದಲದಿಂದ ಧಗಧಗಿಸುತ್ತಿದೆ ಎಂದು ಜೆಎನ್‍ಸಿ ನಾಯಕ ಲೈಡುಹ್ವಾನ ಅತಂಕ ವ್ಯಕ್ತಪಡಿಸಿದರು.

ಕೇಂದ್ರ ಮತ್ತು ರಾಜ್ಯಗಳಿಂದ ಬಿಜೆಪಿಯನ್ನು ಪದಚ್ಯುತಗೊಳಿಸಬೇಕೆಂದು ಜೆಎಂಎಂ ನಾಯಕ ಹೇಮಂತ್ ಸೊರೇನ್ ಪ್ರತಿಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರಿಗೆ ಕರೆ ನೀಡಿದರು.

ದಲಿತ ನಾಯಕ ಜಿಗ್ನೇಶ್ ಮೇವಾನಿ ಮಾತನಾಡಿ, ಬಿಜೆಪಿ ಸೋಲಿಸುವುದು ಮಹಾಮೈತ್ರಿಯ ಹೆಗ್ಗುರಿಯಾಗಿದೆ ಎಂದರು. ಗುಜರಾತ್ ಪಟ್ಟೇದಾರ್ ಸಮುದಾಯದ ಅಗ್ರ ನಾಯಕ ಹಾರ್ದಿಕ್ ಪಟೇಲ್ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು. ಆಗ ನೇತಾಜಿ ಸುಭಾಷ್‍ಚಂದ್ರ ಬೋಸ್ ಗೋರೊ(ಆಂಗ್ಲರ) ವಿರುದ್ಧ ಹೋರಾಟ ನಡೆಸಿದ್ದರು. ಈಗ ನಾವು ಚೋರೊ(ಕಳ್ಳರ) ವಿರುದ್ಧ ಸಮರ ಸಾರಬೇಕಿದೆ ಎಂದು ಹೇಳಿದರು.

Facebook Comments

Sri Raghav

Admin