ಇಂದು ‘ಸೀತಾರಾಮ ಕಲ್ಯಾಣ’ದ ಸಂಭ್ರಮಕ್ಕೆ ಸಾಕ್ಷಿಯಾಗಲಿದೆ ಮೈಸೂರು

ಈ ಸುದ್ದಿಯನ್ನು ಶೇರ್ ಮಾಡಿ

Seetarama-kalyana--01

ಬೆಂಗಳೂರು,ಜ.19- ಅರಮನೆಗಳ ನಗರಿ ಮೈಸೂರಿನಲ್ಲಿಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮೊಮ್ಮಗ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪುತ್ರ, ನಟ ನಿಖಿಲ್ ಕುಮಾರಸ್ವಾಮಿ ನಟಿಸಿರುವ ಗ್ರಾಮೀಣ ಸೊಗಡಿನ ಕಥಾಹಂದರ ಹೊಂದಿರುವ ಸೀತಾರಾಮ ಕಲ್ಯಾಣ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಅದ್ಧೂರಿಯಾಗಿ ನಡೆಯಲಿದೆ.

ಮೈಸೂರಿನ ಬನ್ನಿಮಂಟಪದಲ್ಲಿರುವ ಟಾರ್ಚ್ಲೈಟ್ ಪರೇಡ್ ಮೈದಾನದಲ್ಲಿ ಅನಿತಾ ಕುಮಾರಸ್ವಾಮಿ ನಿರ್ಮಾಣದ, ಎ.ಹರ್ಷ ನಿರ್ದೇಶನದ ಸೀತಾರಾಮ ಕಲ್ಯಾಣ ಚಿತ್ರದ ಟ್ರೇಲರ್ ಬಿಡುಗಡೆಗೆ ಬೃಹತ್ ವೇದಿಕೆ ಸಿದ್ಧವಾಗಿದೆ.  ಇದೇ 25 ರಂದು ವಿಶ್ವಾದ್ಯಂತ ಸೀತಾರಾಮ ಕಲ್ಯಾಣ ಚಿತ್ರ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದ್ದು, ಚಿತ್ರ ರಸಿಕರು ಚಿತ್ರ ವೀಕ್ಷಣೆಗೆ ಕಾತುರರಾಗಿದ್ದು, ಅದರ ಟ್ರೇಲರ್ಗೆ ಚಾಲನೆ ದೊರೆಯುತ್ತಿದೆ.

100*80 ಅಡಿ ವಿಸ್ತೀರ್ಣದ ಬೃಹತ್ ವೇದಿಕೆಯನ್ನು ದೀಪಾಲಂಕಾರದಿಂದ ಶೃಂಗರಿಸಲಾಗಿದೆ. ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು ಮಂದಿ ಕಾರ್ಯಕ್ರಮ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ.  ಸೀತಾರಾಮ ಕಲ್ಯಾಣ ಚಿತ್ರದ ನಾಯಕ ನಿಖಿಲ್ಕುಮಾರ ಸ್ವಾಮಿ, ನಾಯಕಿ ರಚಿತಾರಾಮ್ ಚಿತ್ರದ ಹಾಡುಗಳಿಗೆ ಹೆಜ್ಜೆ ಹಾಕಲಿದ್ದಾರೆ. ಈ ಚಿತ್ರದಲ್ಲಿ ನಟಿಸಿರುವ ಹಿರಿಯ ನಟ ಶರತ್ಕುಮಾರ್, ಬಾಲಿವುಡ್ ನಟಿ ಮಧುಬಾಲ, ಹಾಸ್ಯ ನಟರಾದ ಚಿಕ್ಕಣ್ಣ, ಸಾಧುಕೋಕಿಲ, ಆದಿತ್ಯ ಮೆನನ್, ಸಂಪತ್ ಸೇರಿದಂತೆ ಸುಮಾರು 60 ಮಂದಿ ನಟ-ನಟಿಯರು ಸಾಥ್ ನೀಡಲಿದ್ದಾರೆ.

ನಟಿಯರಾದ ರಾಗಿಣಿ, ಶರ್ಮಿಳಾ ಮಾಂಡ್ರೆ, ಮಾನ್ವಿತ ಹರೀಶ್ ಸೇರಿದಂತೆ ಬಹುತೇಕ ನಟ-ನಟಿಯರು ಹಾಗೂ ಖ್ಯಾತ ನೃತ್ಯಪಟುಗಳು ನೃತ್ಯ ಪ್ರದರ್ಶನ ಮಾಡಲಿದ್ದಾರೆ. ಮೂರು ಗಂಟೆಗೂ ಹೆಚ್ಚು ಕಾಲ ಮನೋರಂಜನಾ ಕಾರ್ಯಕ್ರಮ ನಡೆಯಲಿದ್ದು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಚಿತ್ರರಂಗದ ಗಣ್ಯರು, ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ನಿಖಿಲ್ ಕುಮಾರಸ್ವಾಮಿ ನಟಿಸಿದ್ದ ಮೊದಲ ಚಿತ್ರ ಜಾಗ್ವಾರ್ನ ಆಡಿಯೋ ರಿಲೀಸ್ ಮಂಡ್ಯದಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಿತ್ತು. ಇದೀಗ ಸೀತಾರಾಮ ಕಲ್ಯಾಣ ಚಿತ್ರದ ಟ್ರೇಲರ್ ಮೈಸೂರಿನಲ್ಲಿ ಬಿಡುಗಡೆ ಮಾಡುವ ಮೂಲಕ ಜಿಲ್ಲೆಗಳಲ್ಲೂ ಚಿತ್ರದ ಬಗ್ಗೆ ಇನ್ನಷ್ಟು ಕುತೂಹಲ ಮೂಡಿಸಲಾಗುತ್ತಿದೆ.

Facebook Comments

Sri Raghav

Admin