ಬಿಜೆಪಿ ಶಾಸಕರು ರೆಸಾರ್ಟ್’ಗೆ ಹೋಗಿದ್ದೇಕೆ ಗೊತ್ತೇ..? ರಾಮುಲು ಹೇಳ್ತಾರೆ ಕೇಳಿ

ಈ ಸುದ್ದಿಯನ್ನು ಶೇರ್ ಮಾಡಿ

Sriramulu--01

ನವದೆಹಲಿ,ಜ.19- ನಾವು ರೆಸಾರ್ಟ್‍ಗೆ ರಾಜಕಾರಣ ಮಾಡಲು ಹೋಗಿಲ್ಲ. ಲೋಕಸಭೆ ಚುನಾವಣೆ ಕುರಿತು ಚರ್ಚಿಸಲು ತೆರಳಿದ್ದೆವು ಎಂದು ಬಿಜೆಪಿ ಮುಖಂಡ ಹಾಗೂ ಶಾಸಕ ಶ್ರೀರಾಮುಲು ಹೇಳಿದ್ದಾರೆ.

ನವದೆಹಲಿಯಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಆಪರೇಷನ್ ಕಮಲ ನಡೆಸಲು ರೆಸಾರ್ಟ್‍ಗೆ ಹೋಗಿದ್ದೇವೆಂದು ಕಾಂಗ್ರೆಸ್-ಜೆಡಿಎಸ್ ನಾಯಕರು ದೂರುತ್ತಿದ್ದಾರೆ. ಈ ಆರೋಪ ದಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಸ್ಪಷ್ಟಪಡಿಸಿದರು.

ವರಿಷ್ಠರ ಸೂಚನೆಯಂತೆ ನಾವು ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗಳಿಸಲು ಶಾಸಕರನ್ನು ಒಂದೆಡೆ ಕರೆದು ಚರ್ಚೆ ನಡೆಸಿದ್ದೇವೆ. ಇದರಲ್ಲಿ ಅಂತಹ ಪ್ರಮಾದವೇನೂ ಆಗಿಲ್ಲ. ಬೆಂಗಳೂರಿಗೆ ಬರುತ್ತಿದ್ದಂತೆ ಎಲ್ಲ ಶಾಸಕರು ಅವರವರ ಕ್ಷೇತ್ರಗಳಿಗೆ ತೆರಳಿ ಅಲ್ಲಿನ ಸಮಸ್ಯೆಗಳನ್ನು ಆಲಿಸಲಿದ್ದಾರೆ ಎಂದರು.

ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ನಾವು ಆಪರೇಷನ್ ಕಮಲದ ಮೂಲಕ ಸೆಳೆಯುತ್ತಿದ್ದೇವೆ ಎಂಬುದು ಆಧಾರ ರಹಿತ ಆರೋಪ. ಮಹಾರಾಷ್ಟ್ರದಲ್ಲಿ ನಮ್ಮ ಪಕ್ಷದ ಶಾಸಕರು ಇದ್ದ ಕಾರಣ ನಮ್ಮ ಪಕ್ಷದ ಶಾಸಕ ಡಾ.ಅಶ್ವಥ್ ನಾರಾಯಣ್ ಮುಂಬೈಗೆ ತೆರಳಿದ್ದರು. ಯಾವುದೇ ಭಿನ್ನಮತೀಯ ಶಾಸಕರನ್ನು ಸೆಳೆಯುವ ಪ್ರಯತ್ನ ಪಕ್ಷ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್-ಜೆಡಿಎಸ್ ಸರ್ಕಾರದ ಬಗ್ಗೆ ಜನರು ಭ್ರಮನಿರಸನ ಗೊಂಡಿದ್ದಾರೆ. ಸರ್ಕಾರ ಎಷ್ಟು ಬೇಗ ಪತನವಾಗುತ್ತದೆ ಎಂದು ದಿನಗಳನ್ನು ಎಣಿಸುತ್ತಿದ್ದಾರೆ. ತಮ್ಮ ತಮ್ಮ ಹುಳುಕುಗಳನ್ನು ಮುಚ್ಚಿಕೊಳ್ಳಲು ಬಿಜೆಪಿ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಸಿದ್ಧರಾಮಯ್ಯ ಮಾಡುತ್ತಿದ್ದಾರೆ.

ಅವರ ಮಾತಿಗೆ ಕಾಂಗ್ರೆಸ್ ಪಕ್ಷದಲ್ಲಿ ಕವಡೆ ಕಾಸಿನ ಕಿಮ್ಮಿತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು. ಯಾವ ಶಾಸಕರಿಗೂ ಹಣದ ಆಮಿಷವೊಡ್ಡಿಲ್ಲ. ಕಾಂಗ್ರೆಸ್‍ನ ಭಿನ್ನಮತೀಯರು ಬಿಜೆಪಿಗೆ ಸೇರುತ್ತೇವೆ ಎಂದು ಎಲ್ಲಿಯೂ ಹೇಳಿಲ್ಲ. ಸ್ವಂತ ನಿರ್ಧಾರ ತೆಗೆದುಕೊಳ್ಳಲು ಅವರು ಸ್ವತಂತ್ರರು ಎಂದು ಹೇಳಿದರು.

Facebook Comments

Sri Raghav

Admin