ಕಾಫಿ ಕುಡಿದು ತಾಯಿ ಮಗಳ ದುರ್ಮರಣ, ಮೊಮ್ಮಕ್ಕಳು ಪಾರು….!

ಈ ಸುದ್ದಿಯನ್ನು ಶೇರ್ ಮಾಡಿ

Cofeee01

ಬಾಗೇಪಲ್ಲಿ, ಜ.19- ಪ್ರಸಾದ ವಿಷವಾಯಿತು… ನೀರು ವಿಷವಾಯಿತು… ಈಗ ಆಹಾರ ವಸ್ತುಗಳಲ್ಲೂ ಕೂಡ ವಿಷ ಬೆರೆಸುವ ಹೀನ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ.ತಾಲೂಕಿನ ಬತ್ತಲಹಳ್ಳಿ ಗ್ರಾಮದಲ್ಲಿ ಕಳೆದ ರಾತ್ರಿ ಅಂಗಡಿಯಿಂದ ಕಾಫಿಪುಡಿ ತಂದು ಮನೆಯಲ್ಲಿ ಕಾಫಿ ಮಾಡಿ ಕುಡಿದ ನಂತರ ಇಡೀ ಕುಟುಂಬವೇ ಅಸ್ವಸ್ಥಗೊಂಡು ತಾಯಿ-ಮಗಳು ಮೃತಪಟ್ಟಿರುವ ದುರಂತ ಘಟನೆ ನಡೆದಿದೆ.

ಅಕ್ಕುಲಮ್ಮ (80) ಹಾಗೂ ನರಸಮ್ಮ (60) ಮೃತಪಟ್ಟ ತಾಯಿ-ಮಗಳಾಗಿದ್ದು, ಮೊಮ್ಮಕ್ಕಳಾದ ಅರವಿಂದ (7), ಆರತಿ (4) ಆರೋಗ್ಯದಲ್ಲಿ ಏರುಪೇರಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ನಂತರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಗ್ರಾಮದ ಅಂಗಡಿಯೊಂದರಲ್ಲಿ ನಿನ್ನೆ ಮಕ್ಕಳಿಗೆ ದುಡ್ಡು ಕೊಟ್ಟು ಕಾಫಿ ಪುಡಿ ತರುವಂತೆ ನರಸಮ್ಮ ಕಳುಹಿಸಿದ್ದರು. ಅದರಂತೆ ಸಂಜೆ 7 ಗಂಟೆಗೆ ಎಲ್ಲರೂ ಖುಷಿಯಾಗಿಯೇ ಕಾಫಿ ಮಾಡಿ ಸೇವಿಸಿದ್ದಾರೆ.

ಸ್ವಲ್ಪ ಸಮಯದ ನಂತರ ಹೊಟ್ಟೆನೋವು ಕಾಣಿಸಿಕೊಂಡು ವಾಂತಿ ಮಾಡಿದ್ದಾರೆ.  ಇಡೀ ಕುಟುಂಬದ ಒಬ್ಬೊಬ್ಬರೇ ಅನಾರೋಗ್ಯಕ್ಕೀಡಾದ ತಕ್ಷಣ ಅಕ್ಕಪಕ್ಕದವರು ಆತಂಕಗೊಂಡು ತಕ್ಷಣ ನೆರವಿಗೆ ಬಂದಿದ್ದಾರೆ. ಅಷ್ಟರಲ್ಲೇ ತಾಯಿ-ಮಗಳು ಮೃತಪಟ್ಟಿದ್ದು, ಮಕ್ಕಳು ಒದ್ದಾಡುತ್ತಿದ್ದನ್ನು ಕಂಡು ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಅಂಗಡಿಯಿಂದ ತಂದ ಕಾಫಿಪುಡಿ ಹಳೆಯದಾಗಿತ್ತೇ ಅಥವಾ ಇದಕ್ಕೆ ವಿಷ ಬೆರೆಸಿದ್ದಾರೆಯೇ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದ್ದು, ಬಾಗೇಪಲ್ಲಿ ಠಾಣೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಸ್ಥಳಕ್ಕೆ ಎಸ್‍ಪಿ ಕಾರ್ತಿಕ್‍ರೆಡ್ಡಿ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಮನೆಯಲ್ಲಿ ಉಳಿದಿದ್ದ ಕಾಫಿಯನ್ನು ವಿಧಿ-ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿ ನಿರೀಕ್ಷಿಸಲಾಗಿದೆ.

Facebook Comments

Sri Raghav

Admin