ರೆಸಾರ್ಟ್’ನಲ್ಲಿ ಪಾರ್ಟಿ, ಶಾಸಕರ ಫೈಟ್, ಕಾಂಗ್ರೆಸ್ ನಾಯಕರ ಹೈಡ್ರಾಮಾ..!

ಈ ಸುದ್ದಿಯನ್ನು ಶೇರ್ ಮಾಡಿ

Congress-Anand-Singh-Ganesh

ಬೆಂಗಳೂರು,ಜ.20- ಕಳೆದ ಒಂದು ವಾರದಿಂದ ಹರಿಯಾಣದ ಗುರುಗ್ರಾಮ ರೆಸಾರ್ಟ್‍ನಲ್ಲಿದ್ದ ಬಿಜೆಪಿ ಶಾಸಕರು ಒಬ್ಬೊಬ್ಬರೇ ಹೊರ ಬಂದು ಬರ ಅಧ್ಯಯನಕ್ಕೆಂದು ತೆರಳುತ್ತಿದ್ದರೆ, ಇತ್ತ ಬಿಡದಿ ರೆಸಾರ್ಟ್ ಸೇರಿಕೊಂಡಿದ್ದ ಕಾಂಗ್ರೆಸ್ ಶಾಸಕರ ಪೈಕಿ ಬಳ್ಳಾರಿಯ ಆನಂದ್ ಸಿಂಗ್ ಮತ್ತು ಕಂಪ್ಲಿ ಗಣೇಶ್ ನಡುವೆ ಬಡಿ ದಾಟ ನಡೆದಿದೆ ಎಂದು ತಿಳಿದು ಬಂದಿದೆ.

ಬಳ್ಳಾರಿ ಕಾಂಗ್ರೆಸ್‍ನ ಶಾಸಕರಾದ ಭೀಮಾನಾಯ್ಕ್, ಆನಂದ್ ಸಿಂಗ್ ಮತ್ತು ಗಣೇಶ್ ನಡುವೆ ಮಾತಿನ ಚಕಮಕಿ ನಡೆದು ಪರಸ್ಪರ ಕೈ ಕೈ ಮಿಲಾಯಿಸಿದ್ದು, ಈ ಸಂದರ್ಭದಲ್ಲಿ ಆನಂದ ಸಿಂಗ್ ಅವರಿಗೆ ಗಾಯವಾಗಿದ್ದು, ಅವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎನ್ನಲಾಗಿದೆ.

ಆಪರೇಷನ್ ಕಮಲ ಸಂಬಂಧದ ರಹಸ್ಯ ಮಾಹಿತಿಯನ್ನು ಆನಂದ್ ಸಿಂಗ್ ಅವರು ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಅವರಿಗೆ ಬಹಿರಂಗಗೊಳಿಸಿದ್ದರು.  ತಾವಿರುವ ಮಾಹಿತಿಯನ್ನು ಅವರಿಗೆ ನೀಡಿದ್ದರು ಎಂಬ ಹಿನ್ನೆಲೆಯಲ್ಲಿ ಕಂಪ್ಲಿ ಗಣೇಶ್ ಆಕ್ರೋಶಗೊಂಡು ಅವರ ಮೇಲೆ ತಡರಾತ್ರಿ ಪಾರ್ಟಿ ವೇಳೆ ಬಾಟಲಿಯಿಂದ ಹಲ್ಲೆ ನಡೆಸಿದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಪಕ್ಕದಲ್ಲಿದ್ದ ಶಾಸಕರು ಗಲಾಟೆಯನ್ನು ಬಿಡಿಸಿದ್ದಾರೆ.

ಗಾಯಗೊಂಡಿರುವ ಆನಂದ್ ಸಿಂಗ್ ಅವರನ್ನು ಶೇಷಾದ್ರಿಪುರಂನ ಅಪೋಲೋ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ ಎನ್ನಲಾಗಿದೆ. ಆದರೆ ಇನ್ನೊಂದು ಮೂಲದ ಪ್ರಕಾರ, ಆನಂದ್‍ಸಿಂಗ್ ಅವರು ಎದೆನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗುತ್ತಿದೆ. ನಿನ್ನೆ ಸಂಜೆ ನಾಲ್ಕು ಗಂಟೆಗೆ ವಿಧಾನಸೌಧದಲ್ಲಿ ಬಳ್ಳಾರಿ ಜಿಲ್ಲೆ ಅಭಿವೃದ್ಧಿ ಕುರಿತು ಸಚಿವ ಡಿ.ಕೆ.ಶಿವಕುಮಾರ್ ಅವರು ಸಭೆ ನಡೆಸಿದ್ದರು. ಈ ಸಭೆಯಲ್ಲಿ ಜಿಲ್ಲೆಯ ಎಲ್ಲಾ ಶಾಸಕರು ಭಾಗವಹಿಸಿದ್ದರು. ನಂತರ ಶಾಸಕ ಹ್ಯಾರೀಸ್ ಅವರ ಸಂಬಂಧಿಕರ ಮದುವೆಯಲ್ಲಿ ಪಾಲ್ಗೊಂಡಿದ್ದರು.

ಆ ನಂತರ ರೆಸಾರ್ಟ್‍ನಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದರು. ಕಳೆದ ಎರಡು ದಿನಗಳಿಂದ ಈ ಮೂವರ ನಡುವೆ ಈ ಸಂಬಂಧ ಮಾತಿನ ಚಕಮಕಿ ನಡೆದಿತ್ತು. ತಡರಾತ್ರಿ ಪಾರ್ಟಿ ವೇಳೆ ಗಲಾಟೆ ನಡೆದಿದೆ ಎನ್ನಲಾಗಿದೆ. ಕಳೆದ ಎರಡು ದಿನಗಳಿಂದ ಈಗಲ್‍ಟನ್ ರೆಸಾರ್ಟ್‍ನಲ್ಲಿ ಕಾಂಗ್ರೆಸ್ ಶಾಸಕರು ಬೀಡು ಬಿಟ್ಟಿದ್ದಾರೆ. ಬಿಡದಿ ರೆಸಾರ್ಟ್‍ನಿಂದ ಇಂದು ಎಲ್ಲರೂ ಸ್ವಕ್ಷೇತ್ರಕ್ಕೆ ಮರಳುವ ಸಾಧ್ಯತೆಯಿದೆ. ಬೆಳಗ್ಗೆ 11 ಗಂಟೆಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರೊಂದಿಗೆ ಶಾಸಕರ ಸಭೆಯನ್ನು ಕೂಡಾ ಆಯೋಜಿಸಲಾಗಿದೆ.

ಅಲ್ಲದೆ ಅವರು ಪ್ರತ್ಯೇಕವಾಗಿ ಶಾಸಕರೊಂದಿಗೆ ಚರ್ಚೆ ಕೂಡಾ ನಡೆಸುವವರಿದ್ದರು. ಆನಂದ್ ಸಿಂಗ್, ಕಂಪ್ಲಿ ಗಣೇಶ್ ಅವರ ನಡುವೆ ರಾತ್ರಿಯಿಡಿ ಮಾತಿನ ಚಕಮಕಿ ನಡೆದಿದೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಪರಸ್ಪರ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಮೈತ್ರಿ ಸರ್ಕಾರ ಸಂಕಷ್ಟದಲ್ಲಿರುವಾಗಲೇ ಕೈ ಶಾಸಕರು ಪರಸ್ಪರ ಬಡಿದಾಡಿಕೊಂಡಿರುವುದು ಪಕ್ಷದ ವರ್ಚಸ್ಸಿಗೆ ಧಕ್ಕೆಯುಂಟಾಗಿದೆ. ಬಂಡಾಯ, ಭಿನ್ನಮತ ಪರಿಹರಿಸುವ ನಿಟ್ಟಿನಲ್ಲಿ ಹೈಕಮಾಂಡ್ ನಾಯಕರು ಹರಸಾಹಸ ಪಡುತ್ತಿದ್ದರೆ, ಈ ಶಾಸಕರುಗಳ ಫೈಟಿಂಗ್ ಹೊಸ ತಲೆನೋವು ತಂದಿಟ್ಟಿದೆ.

ನಾವು ಜನಪ್ರತಿನಿಧಿಗಳು ಎಂಬುದನ್ನು ಮರೆತು ಈ ರೀತಿ ವರ್ತಿಸಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಇಬ್ಬರ ನಡುವೆ ಜಗಳವಾಗಿದೆ ಎಂದು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆ ಅವರ ಕುಟುಂಬಗಳವರು ಕಂಗಾಲಾಗಿದ್ದಾರೆ. ಶಾಸಕರು ಕುಟುಂಬದವರಿಗೆ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಅವರ ಸಂಬಂಧಿಕರು ಡಿ.ಕೆ.ಶಿವಕುಮಾರ್ ಅವರಿಗೆ ಕರೆ ಮಾಡಿ ಮಾಹಿತಿ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

# ಬಾಟಲಿಯಿಂದ ಅಟ್ಯಾಕ್, ತಲೆಗೆ 12 ಹೊಲಿಗೆ
ಈಗಲ್ ರೆಸಾರ್ಟ್ನಲ್ಲಿರುವ ವೇಳೆಯಲ್ಲಿ ನಡೆದ ಪಾರ್ಟಿ ವೇಳೆಯಲ್ಲಿ ಕುಡಿದ ಮತ್ತಿನಲ್ಲಿ ಕಂಪ್ಲಿ ಶಾಸಕ ಗಣೇಶ್ ಹಾಗೂ ಹೊಸಪೇಟೆ ಶಾಸಕ ಆನಂದ್ ಸಿಂಗ್ ಅವರ ನಡುವೆ ಜಗಳ ನಡೆದು ಸಿಟ್ಟಿನಲ್ಲಿ ಗಣೇಶ್ ಆನಂದ್ ಸಿಂಗ್ ಅವರ ತಲೆಗೆ ಬಾಟಲಿಯಿಂದ ಹೊಡೆದಿದ್ದಾರೆ ಎನ್ನಲಾಗಿದೆ.

ಸದ್ಯ ಆನಂದ್ ಸಿಂಗ್ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತಿದ್ದು, ಅವರ ತಲೆಗೆ ತಲೆಗೆ 12 ಹೊಲಿಗೆ ಹಾಕಲಾಗಿದೆ ಎನ್ನಲಾಗಿದೆ. ಸದ್ಯದ ಮಟ್ಟಿಗೆ ವೈದ್ಯರು ಅವರ ಆರೋಗ್ಯದ ಮೇಲೆ ನಿಗವಹಿಸಿದ್ದು ಗಾಯದ ಬಗ್ಗೆ ತಲೆಗೆ ಸಿಟಿ ಸ್ಕ್ಯಾನ್ ತಪಾಸಣೆ ನಡೆದಿದ್ದು, ವರದಿಗಳು ಬಂದ ಬಳಿಕ ಹೆಚ್ಚಿನ ಮಾಹಿತಿ ನೀಡಲಾಗುತ್ತಿದೆ ಎನ್ನಲಾಗಿದೆ.

# ಯಾವುದೇ ಗಲಾಟೆಯಿಲ್ಲ:
ಈ ಬಗ್ಗೆ ಸ್ಪಷ್ಟನೆ ನೀಡಿರುವ ಜಲಸಂಪನ್ಮೂಲ ಸಚಿವ ಹಾಗೂ ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ಡಿ.ಕೆ.ಶಿವಕುಮಾರ್ ಅವರು, ಈ ರೀತಿಯ ಯಾವುದೇ ಗಲಾಟೆ ನಡೆದಿಲ್ಲ. ಶಾಸಕರ ನಡುವೆ ಜಗಳ, ಹಲ್ಲೆ ನಡೆದಿಲ್ಲ. ಇದು ಕೇವಲ ಊಹಾಪೋಹ. ನಾವೆಲ್ಲ ಜೊತೆಯಲ್ಲೇ ಇದ್ದೇವೆ. ಶಾಸಕರಾದ ಕಂಪ್ಲಿ ಗಣೇಶ್, ಆನಂದ್ ಸಿಂಗ್ ಮಾಧ್ಯಮದ ಎದುರು ಬಂದು ಮಾತನಾಡಲಿದ್ದಾರೆ ಎಂದು ಹೇಳಿದರು. ಆನಂದ್ ಸಿಂಗ್ ಅವರು, ಕುಟುಂಬದವರೊಂದಿಗೆ ಮದುವೆ ಸಮಾರಂಭಕ್ಕೆ ತೆರಳಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

# ಆನಂದ್ ಸಿಂಗ್‍ರನ್ನು ನೋಡಲು ಬಿಡುತ್ತಿಲ್ಲ
ಬಿಡದಿಯ ಈಗಲ್ ಟನ್ ರೆಸಾರ್ಟ್‍ನಲ್ಲಿ ತಡರಾತ್ರಿ ನಡೆದ ಗಲಾಟೆಯಲ್ಲಿ ಗಾಯಗೊಂಡು ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾಸಕ ಆನಂದ್ ಸಿಂಗ್‍ರನ್ನು ನೋಡಲು ಬಿಡುತ್ತಿಲ್ಲ ಎಂದು ಬಿಜೆಪಿ ಶಾಸಕ ರಾಜೂಗೌಡ ತಿಳಿಸಿದ್ದಾರೆ.

ಆನಂದ್ ಸಿಂಗ್ ನನ್ನ ಸ್ನೇಹಿತ. ವಿಚಾರ ತಿಳಿದು ಅವರ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಬಂದಿದ್ದೇನೆ. ಆದರೆ ನನಗೆ ಅವರನ್ನು ನೋಡಲು ಅವಕಾಶ ನೀಡಲಾಗಿಲ್ಲ. ಹಾಗಾಗಿ ನಿರಾಸೆಯಿಂದಲೇ ಹೊರಬಂದಿದ್ದೇನೆ ಎಂದು ಸುದ್ದಿಗಾರರಿಗೆ ತಿಳಿಸಿದರು. ಭೇಟಿಯಲ್ಲಿ ಯಾವುದೇ ರಾಜಕೀಯ ಉದ್ದೇಶಗಳಿಲ್ಲ. ಮೊದಲಿನಿಂದಲೂ ನಾನು, ಆನಂದ್ ಸಿಂಗ್ ಸ್ನೇಹಿತರು. ಹಾಗಾಗಿ ಅವರು ಆಸ್ಪತ್ರೆಗೆ ಸೇರಿರುವ ವಿಚಾರ ತಿಳಿದು ಬಂದಿದ್ದೇನೆ ಎಂದರು.

# ಡಿ.ಕೆ.ಸುರೇಶ್ ಹೇಳಿದ್ದೇನು ..? :
ಕಾಂಗ್ರೆಸ್‍ನ ಶಾಸಕ ಆನಂದ್‍ಸಿಂಗ್ ಅವರು ಎದೆನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅದರ ಹೊರತಾಗಿ ಶಾಸಕರ ನಡುವೆ ಯಾವುದೇ ಗಲಾಟೆ ನಡೆದಿಲ್ಲ. ಆನಂದ್‍ಸಿಂಗ್‍ಗೆ ಯಾವುದೇ ಗಾಯಗಳಾಗಿಲ್ಲ ಎಂದು ಸಂಸದ ಡಿ.ಕೆ.ಸುರೇಶ್ ಸ್ಪಷ್ಟಪಡಿಸಿದ್ದಾರೆ.

ಆಸ್ಪತ್ರೆಯಲ್ಲಿದ್ದು ಆನಂದ್‍ಸಿಂಗ್ ಅವರ ಆರೋಗ್ಯ ವಿಚಾರಿಸಿದ ಸುರೇಶ್ ಅವರು ನಂತರ ಹೊರ ಬಂದ ಸುದ್ದಿಗಾರರ ಜತೆ ಮಾತನಾಡಿದರು. ಕಂಪ್ಲಿ ಕ್ಷೇತ್ರದ ಶಾಸಕ ಜೆ.ಎನ್.ಗಣೇಶ್ ಮತ್ತು ಆನಂದಸಿಂಗ್ ನಡುವೆ ಗಲಾಟೆಯಾಗಿದೆ. ಬಾಟಲಿಯಲ್ಲಿ ಆನಂದ್‍ಸಿಂಗ್‍ಗೆ ಹಲ್ಲೆ ಮಾಡಲಾಗಿದೆ ಎಂಬ ಸುದ್ದಿಗಳು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿವೆ. ಅದು ಆಧಾರ ರಹಿತ.

ಇಂದು ಬೆಳಗ್ಗೆ 7 ಗಂಟೆಗೆ ಆನಂದ್‍ಸಿಂಗ್ ಅವರು ತಾವಾಗಿಯೇ ಬಂದು ಶೇಷಾದ್ರಿಪುರಂನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಿನ್ನೆಯೆಲ್ಲಾ ಅವರು ಮದುವೆ ಹಾಗೂ ಇತರೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರಿಂದ ನಿದ್ದೆ ಇರಲಿಲ್ಲ. ಆರೋಗ್ಯ ಕೆಟ್ಟಿದೆ ಎಂಬ ಮಾಹಿತಿ ಇದೆ. ಆಸ್ಪತ್ರೆ ವೈದ್ಯರು ಆನಂದ್‍ಸಿಂಗ್ ಅವರಿಗೆ ಬಿಪಿ, ಶುಗರ್, ಇಸಿಜಿ ಸೇರಿದಂತೆ ಅನೇಕ ಪರೀಕ್ಷೆಗಳನ್ನು ಮಾಡಿದ್ದಾರೆ. ಚಿಕಿತ್ಸೆ ನೀಡಲಾಗುತ್ತಿದೆ, ಇಂಜೆಕ್ಷನ್ ಕೊಟ್ಟಿರುವುದರಿಂದ ಆನಂದ್‍ಸಿಂಗ್ ನಿದ್ದೆ ಮಾಡುತ್ತಿದ್ದಾರೆ ಎಂದರು.

# ಗೂಂಡಾ ಸಂಸ್ಕೃತಿ ಅನಾವರಣ
ಬಿಡದಿಯ ಈಗಲ್‍ಟನ್ ರೆಸಾರ್ಟ್‍ನಲ್ಲಿರುವ ಕಾಂಗ್ರೆಸ್ ಶಾಸಕರು ಕುಡಿದು ಹೊಡೆದಾಡಿಕೊಂಡು ರಾಜ್ಯದ ಮಾನ ಮರ್ಯಾದೆ ಹರಾಜಾಕಿದ್ದಾರೆ ಎಂದು ಬಿಜೆಪಿ ಮುಖಂಡ ಆರ್.ಅಶೋಕ್ ಆರೋಪಿಸಿದ್ದಾರೆ. ಶಾಸಕ ಆನಂದ್ ಸಿಂಗ್ ಅವರ ಮೇಲೆ ನಡೆದಿದೆ ಎನ್ನಲಾದ ಹಲ್ಲೆ ಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಗೂಂಡಾ ಸಂಸ್ಕøತಿ ಎಂದರೆ ಅದು ಕಾಂಗ್ರೆಸ್ ಸಂಸ್ಕøತಿ ಎಂಬುದು ಈ ಘಟನೆಯಿಂದ ಜಗಜ್ಜಾಹೀರಾಗಿದೆ.

ಜನಪ್ರತಿನಿಧಿಗಳು ಕುಡಿತದ ಹಾವಳಿಯನ್ನು ತಪ್ಪಿಸಬೇಕು.ಅವರಿಂದ ಆಗುವ ಅನಾಹುತಗಳ ಬಗ್ಗೆ ಕ್ರಮ ಕೈಗೊಳ್ಳಬೇಕು. ಆದರೆ ಅವರೇ ಕುಡಿದು ಬಡಿದಾಡಿಕೊಂಡಿರುವುದು ನಾಚಿಕೆಗೇಡಿನ ವಿಷಯ ಎಂದು ಅವರು ಹೇಳಿದರು.  ಕುಡಿದ ಮತ್ತಿನಲ್ಲಿ ಆನಂದ್ ಸಿಂಗ್ ಅವರ ಹೊಟ್ಟೆ ಇರಿಯಲಾಗಿದ್ದು, ತಲೆಗೂ ಪೆಟ್ಟಾಗಿದೆ. ಆನಂದ್ ಸಿಂಗ್ ಅವರ ಆರೋಗ್ಯ ವಿಚಾರವನ್ನು ಮರೆಮಾಚುತ್ತಿರುವುದನ್ನು ನೋಡಿದರೆ ಅವರು ಜೀವನ್ಮರಣದಲ್ಲಿ ಹೋರಾಡುತ್ತಿರಬಹುದು ಎಂದು ಆತಂಕ ವ್ಯಕ್ತಪಡಿಸಿದರು.

Facebook Comments

Sri Raghav

Admin