ಬೆಂಗಳೂರು ಏರೋ ಇಂಡಿಯಾ ಶೋಗೆ ಸಾಕ್ಷಿಯಾಗಲಿದ್ದಾರೆ ಜೆಕ್ ರಕ್ಷಣಾ ಸಚಿವ

ಈ ಸುದ್ದಿಯನ್ನು ಶೇರ್ ಮಾಡಿ

Andrzej-Bubbiesನವದೆಹಲಿ, ಜ.20- ಬೆಂಗಳೂರಿನ ಯಲಹಂಕದಲ್ಲಿ ಫೆ.20ರಿಂದ 24ರ ವರೆಗೆ ನಡೆಯಲಿರುವ ಪ್ರತಿಷ್ಠಿತ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ಜೆಕ್ ಗಣರಾಜ್ಯದ ರಕ್ಷಣಾ ಸಚಿವ ಲುಬೋಮಿರ್ ಮೆಟ್ನರ್ ಭಾಗವಹಿಸಲಿದ್ದಾರೆ. ದೆಹಲಿಯಲ್ಲಿಂದು ಸುದ್ದಿಗಾರರಿಗೆ ಜೆಕ್ ರಿಪಬ್ಲಿಕ್ ಪ್ರಧಾನಮಂತ್ರಿ ಅಂಡ್ರೆಜ್ ಬಬ್ಬೀಸ್ ಈ ವಿಷಯ ತಿಳಿಸಿದರು.

ಭಾರತದೊಂದಿಗೆ ರಕ್ಷಣಾ ಮತ್ತು ಇತರ ವಲಯಗಳಲ್ಲಿ ಸಹಭಾಗಿತ್ವಕ್ಕೆ ತಮ್ಮ ದೇಶ ಸಜ್ಜಾಗಿದ್ದು, ಉಭಯ ರಾಷ್ಟ್ರಗಳ ಬಲವರ್ಧನೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

ಗಾಂಧಿನಗರದಲ್ಲಿ ನಡೆದ ವೈಬ್ರೆಂಟ್ ಗುಜರಾತ್ ಸಮಾವೇಶದಲ್ಲಿ ಭಾಗವಹಿಸಿದ್ದ ಅವರು, ಪ್ರಧಾನಿಯವರೊಂದಿಗೆ ಎರಡೂ ದೇಶಗಳ ಸಂಬಂಧ ವೃದ್ಧಿ ಕುರಿತು ಚರ್ಚೆ ನಡೆಸಿದರು.

ಬೆಂಗಳೂರಿನಲ್ಲಿ ನಡೆಯುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ನಮ್ಮ ದೇಶದ ರಕ್ಷಣಾ ಸಚಿವರ ನಿಯೋಗ ಭೇಟಿ ನೀಡಲಿದೆ. ಇದರೊಂದಿಗೆ ರಕ್ಷಣಾ ಕ್ಷೇತ್ರದಲ್ಲಿ ಹೊಸ ಸಹಭಾಗಿತ್ವಕ್ಕೆ ನಾಂದಿಯಾಗಲಿದೆ ಎಂದು ಬಬ್ಬೀಸ್ ತಿಳಿಸಿದರು.

ಈಗಾಗಲೇ ಸಿದ್ಧತೆಗಳು ಬಹುತೇಕ ಪೂರ್ಣಗೊಳ್ಳುವ ಹಂತಕ್ಕೆ ತಲುಪುತ್ತಿದ್ದು, ಹಲವಾರು ವಿದೇಶಿ ರಕ್ಷಣಾ ಕ್ಷೇತ್ರದ ಕಂಪೆನಿಗಳು ತಮ್ಮ ಆಧುನಿಕ ಉತ್ಪನ್ನಗಳನ್ನು ಬೆಂಗಳೂರಿಗೆ ತಂದಿವೆ ಮತ್ತು ಅವನ್ನು ಪ್ರದರ್ಶನಕ್ಕೆ ಸಿದ್ಧಪಡಿಸುವ ಕಾರ್ಯವು ಕೂಡ ನಡೆಯುತ್ತಿದೆ.

ಇನ್ನು ಕೆಲವೇ ದಿನಗಳು ಬಾಕಿ ಉಳಿದಿರುವಂತೆ ಸಮರ ಮತ್ತು ಯುದ್ಧ ವಿಮಾನಗಳ ತಾಲೀಮು ಕೂಡ ಆರಂಭಗೊಳ್ಳಲಿದೆ ಎಂಬ ಮಾಹಿತಿಗಳು ಕೇಳಿಬರುತ್ತಿವೆ. ಕಳೆದ ಬಾರಿಗಿಂತ ಈ ಬಾರಿ ಪ್ರದರ್ಶನ ಕ್ಷೇತ್ರ ವಿಸ್ತರಣೆಗೊಂಡಿದ್ದು, ವ್ಯಾಪಾರ-ವಹಿವಾಟಿಗೂ ಕೂಡ ಇದು ಸಾಕ್ಷಿಯಾಗಲಿದೆ.

Facebook Comments