ಮೆಕ್ಸಿಕೋ ಪೈಪ್‍ಲೈನ್ ಸ್ಫೋಟ ದುರಂತದಲ್ಲಿ ಮೃತರ ಸಂಖ್ಯೆ 76ಕ್ಕೇರಿಕೆ..!

ಈ ಸುದ್ದಿಯನ್ನು ಶೇರ್ ಮಾಡಿ

Fire--01

ಟ್ಲಾಹ್ಯೂಲಿಪನ್(ಮೆಕ್ಸಿಕೋ), ಜ.20 (ಪಿಟಿಐ)- ಮೆಕ್ಸಿಕೋದ ಟ್ಲಾಹ್ಯುಲಿಪನ್ ಪಟ್ಟಣದಲ್ಲಿ ಅಕ್ರಮ ತೈಲ ಕೊಳವೆ ಮಾರ್ಗದಲ್ಲಿ ನಿನ್ನೆ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡ ಸ್ಫೋಟಗೊಂಡು ದುರ್ಘಟನೆಯಲ್ಲಿ ಸತ್ತವರ ಸಂಖ್ಯೆ 76ಕ್ಕೇರಿದೆ.

ಈ ಭೀಕರ ದುರಂತದಲ್ಲಿ ಅನೇಕರು ಸುಟ್ಟು ಕರಕಲಾಗಿ, 70ಕ್ಕೂ ಹೆಚ್ಚು ಜನರು ತೀವ್ರ ಗಾಯಗೊಂಡಿರುವ ಘಟನೆ ಮೆಕ್ಸಿಕೋದ ಹಿಡಾಲ್ಗೋ ಪ್ರಾಂತ್ಯದಲ್ಲಿ ನಿನ್ನೆ ಸಂಭವಿಸಿತ್ತು. ಪೈಪ್‍ಲೈನ್‍ನಲ್ಲಿ ಸೋರಿಕೆಯಾಗುತ್ತಿದ್ದ ಇಂಧನವನ್ನು ತುಂಬಿಕೊಳ್ಳಲು ಸ್ಥಳೀಯ ಜನರ ಗುಂಪು ಅಲ್ಲಿ ಸೇರಿದ್ದಾಗ ಬೆಂಕಿ ಆಕಸ್ಮಿಕ ಸಂಭವಿಸಿ ಭಾರೀ ಸ್ಫೋಟವಾಯಿತು. ಈ ದುರ್ಘಟನೆಯಲ್ಲಿ ಈವರೆಗೆ 76 ಮಂದಿ ಮೃತಪಟ್ಟಿದ್ದಾರೆ ಎಂದು ಹಿಡಾಲ್ಗೋ ರಾಜ್ಯದ ಗೌರ್ನರ್ ಓಮರ್ ಫಯಾದ್ ಹೇಳಿದ್ದಾರೆ.

ಈ ದುರ್ಘಟನೆಯಲ್ಲಿ ಇತರ 70ಕ್ಕೂ ಹೆಚ್ಚು ಮಂದಿಗೆ ತೀವ್ರ ಸುಟ್ಟ ಗಾಯಗಳಾಗಿದ್ದು, ಕೆಲವರ ಸ್ಥಿತಿ ಶೋಚನೀಯವಾಗಿರುವುದರಿಂದ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ ಎಂದು ಗೌರ್ನರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ದೊಡ್ಡ ಕೊಳೆವೆ ಮಾರ್ಗದಲ್ಲಿ ತೈಲ ಸೋರಿಕೆಯಾಗುತ್ತಿದ್ದ ಸುದ್ದಿ ತಿಳಿದು ಬಕೆಟ್‍ಗಳು ಮತ್ತು ಕ್ಯಾನ್‍ಗಳೊಂದಿಗೆ ಸ್ಥಳೀಯ ನಿವಾಸಿಗಳ ಗುಂಪೊಂದು  ಅಲ್ಲಿ ಜಮಾಯಿಸಿತ್ತು. ಇದೇ ಸಂದರ್ಭದಲ್ಲಿ ಗ್ಯಾಸೋಲೈನ್ ಪೈಪ್‍ನಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಆಸ್ಫೋಟನೆಯಾಯಿತು.

ಆ ಮಾರ್ಗದ ಕೊಳವೆ ಬೆಂಕಿಯ ಜ್ವಾಲೆಗಳೊಂದಿಗೆ ಅಲ್ಲಿದ್ದವರನ್ನು ಆಪೋಶನ ತೆಗೆದುಕೊಂಡಿತು. ಮೃತರಲ್ಲಿ ಹಲವರು ಗುರುತಿಸಲಾಗದಷ್ಟು ಸುಟ್ಟು ಕರಕಲಾಗಿದ್ದರೆ, ಇನ್ನು ಕೆಲವರು ಬೂದಿಯಾಗಿದ್ದಾರೆ. ಸುಟ್ಟ ಗಾಯಗಳಿಂದ ಚಿಕಿತ್ಸೆ ಪಡೆಯುತ್ತಿರುವವರಲ್ಲಿ ಇನ್ನೂ ಅನೇಕರ ಸ್ಥಿತಿ ಚಿಂತಾಜನಕವಾಗಿದೆ.

ಮೆಕ್ಸಿಕೋದಲ್ಲಿ ಅಕ್ರಮ ತೈಲ ದಂಧೆ ಅವ್ಯಾಹತವಾಗಿ ನಡೆಯುತ್ತಿದ್ದು, ಇದನ್ನು ಮಟ್ಟ ಹಾಕುತ್ತಿದ್ದರೂ ಇಂಥ ದುರ್ಘಟನೆಗಳು ಮುಂದುವರಿದಿವೆ. ಕೊಳವೆ ಮಾರ್ಗದಲ್ಲಿ ತೈಲ ಸೋರಿಕೆ, ಬೆಂಕಿ ದುರಂತ ಮತ್ತು ಸಾವುನೋವಿನ ಘಟನೆಗಳ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.

Facebook Comments

Sri Raghav

Admin