BIG NEWS : ಬಿಡದಿ ರೆಸಾರ್ಟ್’ನಲ್ಲಿ ಕೈ ಕೈ ಮಿಲಾಯಿಸಿದ ಶಾಸಕರು.!?

ಈ ಸುದ್ದಿಯನ್ನು ಶೇರ್ ಮಾಡಿ

Anand-Singh--01

ಬೆಂಗಳೂರು,ಜ.20- ಕಳೆದ ಒಂದು ವಾರದಿಂದ ಹರಿಯಾಣದ ಗುರುಗ್ರಾಮ ರೆಸಾರ್ಟ್‍ನಲ್ಲಿದ್ದ ಬಿಜೆಪಿ ಶಾಸಕರು ಒಬ್ಬೊಬ್ಬರೇ ಹೊರ ಬಂದು ಬರ ಅಧ್ಯಯನಕ್ಕೆಂದು ತೆರಳುತ್ತಿದ್ದರೆ, ಇತ್ತ ಬಿಡದಿ ರೆಸಾರ್ಟ್ ಸೇರಿಕೊಂಡಿರುವ ಹಲವು ಶಾಸಕರು ಪರಸ್ಪರ ಬಡಿದಾಡಿಕೊಂಡಿದ್ದಾರೆಂದು ತಿಳಿದು ಬಂದಿದೆ.

ಬಳ್ಳಾರಿ ಕಾಂಗ್ರೆಸ್ ಶಾಸಕರ ನಡುವೆ ಮಾತಿನ ಚಕಮಕಿ ನಡೆದು ಪರಸ್ಪರ ಕೈ ಕೈ ಮಿಲಾಯಿಸುವ ಹಂತ ತಲುಪಿ ಶಾಸಕರೊಬ್ಬರ ಮೇಲೆ ಹಲ್ಲೆಯಾಗಿದ್ದು, ಅವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು ಮಾಡಿಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ವಿಜಯನಗರ ಶಾಸಕ ಆನಂದ್ ಸಿಂಗ್ ಮತ್ತು ಕಂಪ್ಲಿ ಶಾಸಕ ಗಣೇಶ್ ಅವರ ನಡುವೆ ತಡರಾತ್ರಿ ಮಾತಿನ ಚಕಮಕಿ ನಡೆದು ಗಣೇಶ್ ಅವರು ಆನಂದ್ ಸಿಂಗ್ ಮೇಲೆ ಬಾಟಲಿಯಿಂದ ಹಲ್ಲೆ ನಡೆಸಿದ್ದಾರೆನ್ನಲಾಗಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಕಳೆದ ಎರಡು ದಿನಗಳಿಂದ ಈಗಲ್ ರೆಸಾರ್ಟ್‍ನಲ್ಲಿ ಕಾಂಗ್ರೆಸ್ ಶಾಸಕರು ಬೀಡು ಬಿಟ್ಟಿದ್ದರು.

ನಿನ್ನೆ ಸಂಜೆ ಶಾಸಕರೊಂದಿಗೆ ಸಭೆ ನಡೆಸಲಾಗಿತ್ತು. ಉಸ್ತುವಾರಿ ಸಚಿವರು ಪ್ರತ್ಯೇಕ ಸಭೆಗಳನ್ನು ನಡೆಸಿದ್ದರು. ತಡರಾತ್ರಿಯವರೆಗೆ ಸಭೆ ನಡೆದಿತ್ತು. ಬಳ್ಳಾರಿ ಜಿಲ್ಲೆಯ ಚರ್ಚೆಯ ವೇಳೆ ಶಾಸಕರ ನಡುವೆ ಗಲಾಟೆ ನಡೆದಿರುವುದು ತಿಳಿದುಬಂದಿದೆ.

ಬಿಡದಿ ರೆಸಾರ್ಟ್‍ನಿಂದ ಇಂದು ಎಲ್ಲರೂ ಸ್ವಕ್ಷೇತ್ರಕ್ಕೆ ಮರಳುವ ಸಾಧ್ಯತೆಯಿತ್ತು. ಬೆಳಗ್ಗೆ 11 ಗಂಟೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರೊಂದಿಗೆ ಶಾಸಕರ ಸಭೆಯನ್ನು ಕೂಡಾ ಆಯೋಜಿಸಲಾಗಿತ್ತು. ಅಲ್ಲದೆ ಅವರು ಪ್ರತ್ಯೇಕವಾಗಿ ಶಾಸಕರೊಂದಿಗೆ ಚರ್ಚೆ ಕೂಡಾ ನಡೆಸುವವರಿದ್ದರು.

ಆನಂದ್ ಸಿಂಗ್, ಕಂಪ್ಲಿ ಗಣೇಶ್ ಅವರ ನಡುವೆ ರಾತ್ರಿಯಿಡಿ ಮಾತಿನ ಚಕಮಕಿ ನಡೆದಿದೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಪರಸ್ಪರ ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ಆನಂದ್ ಸಿಂಗ್ ಅವರ ತಲೆಗೆ ಗಾಯವಾಗಿದೆ ಎನ್ನಲಾಗಿದೆ.

ಯಾವುದೇ ಗಲಾಟೆಯಿಲ್ಲ: ಈ ಬಗ್ಗೆ ಸ್ಪಷ್ಟನೆ ನೀಡಿರುವ ಜಲಸಂಪನ್ಮೂಲ ಸಚಿವ ಹಾಗೂ ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ಡಿ.ಕೆ.ಶಿವಕುಮಾರ್ ಅವರು, ಈ ರೀತಿಯ ಯಾವುದೇ ಗಲಾಟೆ ನಡೆದಿಲ್ಲ. ಶಾಸಕರ ನಡುವೆ ಜಗಳ, ಹಲ್ಲೆ ನಡೆದಿಲ್ಲ. ಇದು ಕೇವಲ ಊಹಾಪೋಹ. ನಾವೆಲ್ಲ ಜೊತೆಯಲ್ಲೇ ಇದ್ದೇವೆ. ಶಾಸಕರಾದ ಕಂಪ್ಲಿ ಗಣೇಶ್, ಆನಂದ್ ಸಿಂಗ್ ಮಾಧ್ಯಮದ ಎದುರು ಬಂದು ಮಾತನಾಡಲಿದ್ದಾರೆ ಎಂದು ಹೇಳಿದರು. ಆನಂದ್ ಸಿಂಗ್ ಅವರು, ಕುಟುಂಬದವರೊಂದಿಗೆ ಮದುವೆ ಸಮಾರಂಭಕ್ಕೆ ತೆರಳಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಸ್ಪಷ್ಟನೆ ಇಲ್ಲ;  ಶಾಸಕರ ನಡುವೆ ನಡೆದ ಗಲಾಟೆ, ಹಲ್ಲೆ ವಿಷಯ ಮಾಧ್ಯಮಗಳಲ್ಲಿ ಬಿತ್ತರಗೊಂಡರೂ ಈವರೆಗೆ ಶಾಸಕರು ಈ ಕುರಿತು ಸ್ಪಷ್ಟನೆ ನೀಡಿಲ್ಲ.

Facebook Comments

Sri Raghav

Admin