ಅರಣ್ಯ ರಕ್ಷಣೆಗಾಗಿ ನಾಗರಹೊಳೆಯಲ್ಲಿ ಫೈರ್ ಲೈನ್ ನಿರ್ಮಾಣ

ಈ ಸುದ್ದಿಯನ್ನು ಶೇರ್ ಮಾಡಿ

Nagarholeಹುಣಸೂರು, ಜ.20- ಬೇಸಿಗೆಯಲ್ಲಿ ಸಂಭವಿಸುವ ಬೆಂಕಿ ಅವಘಡ ನಿಯಂತ್ರಿಸಲು ಅರಣ್ಯ ಇಲಾಖೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಫೈರ್‍ಲೈನ್ (ಬೆಂಕಿ ರೇಖೆ) ನಿರ್ಮಿಸುವ ಮೂಲಕ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ನಾಗರಹೊಳೆ ಉದ್ಯಾನವನ ವ್ಯಾಪ್ತಿಯಲ್ಲಿ ಈ ಬಾರಿ ಉತ್ತಮ ಮಳೆಯಾದ ಕಾರಣ ಕಾಡಿನಲ್ಲಿ ನೀರು ಹಾಗೂ ಹಸಿರು ಸಮೃದ್ಧವಾಗಿದೆ.

ಅಲ್ಲದೇ ಇಲಾಖೆಯ ಈ ಹಿಂದಿನ ನಿರ್ದೇಶಕರಾದ ಗೋಕುಲ್ ಹಾಗೂ ದಿ. ಮಣಿಕಂಠನ್ ನೇತೃತ್ವದ ತಂಡವು ವನ್ಯಜೀವಿಗಳಿಗೆ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಸೋಲಾರ್ ಪಂಪ್‍ಸೆಟ್ ನಿರ್ಮಿಸಿ ಕೆರೆ-ಕಟ್ಟೆಗಳಿಗೆ ನೀರು ತುಂಬಿಸಿದ್ದರಿಂದ ಹಸಿರು ಉಳಿದುಕೊಂಡಿದೆ.

ಆದರೂ ಬಿಸಿಲಿನ ತಾಪಕ್ಕೆ ಗಿಡಗಂಟಿಗಳು ಒಣಗುತ್ತಿರುವುದರಿಂದ ಹಾಗೂ ಬೇಸಿಗೆಯಲ್ಲಿ ತಪ್ಪಿಸಬಹುದಾದ ಅನಾಹುತ ತಪ್ಪಿಸಲು ಅರಣ್ಯ ಇಲಾಖೆ ಮೊದಲ ಹಂತವಾಗಿ ಫೈರ್‍ಲೈನ್‍ಗಳ ನಿರ್ಮಾಣ ಕಾರ್ಯದಲ್ಲಿ ತೊಡಗಿದೆ.

1890 ಕಿ.ಮೀ.ಉದ್ದದ ಫೈರ್‍ಲೈನ್: ಉದ್ಯಾನವನದ 640 ಚದರ ಕಿ.ಮೀ.ವ್ಯಾಪ್ತಿಯಲ್ಲಿ ಒಟ್ಟು 1890 ಕಿ.ಮೀ.ಉದ್ದದ ಫೈರ್‍ಲೈನ್ ನಿರ್ಮಾಣ ಕಾರ್ಯ ನಡೆದಿದೆ. 10 ಮೀಟರ್ ಅಗಲವನ್ನು ಫೈರ್‍ಲೈನ್ ಹೊಂದಲಿದೆ. ಪ್ರಸ್ತುತ ಗಿಡಗಂಟಿಗಳನ್ನು ಕಡಿಯುವ ಕಾರ್ಯ ಪೂರ್ಣಗೊಂಡಿದ್ದು, ಕಡಿದ ಗಿಡಗಳನ್ನು ಸುಟ್ಟುಹಾಕುವ ಕಾರ್ಯ ಪ್ರಗತಿಯಲ್ಲಿದೆ.

ಉದ್ಯಾನ ವ್ಯಾಪ್ತಿಯ 8 ವಲಯಗಳಲ್ಲಿ 300ಕ್ಕೂ ಹೆಚ್ಚು ಫೈರ್ ವಾಚರ್‍ಗಳು ಜನವರಿ ತಿಂಗಳಿನಿಂದ ಕಾರ್ಯ ಪ್ರವೃತ್ತರಾಗಲಿದ್ದಾರೆ. ಅವರಿಗೆ ತಿಂಡಿ, ಊಟ ಹಾಗೂ ಕುಡಿಯಲು ನೀರಿನ ವ್ಯವಸ್ಥೆಯನ್ನು ಅರಣ್ಯ ಇಲಾಖೆ ಕಲ್ಪಿಸಿದೆ. ಫೆಬ್ರವರಿ ತಿಂಗಳಾಂತ್ಯದವರೆಗೂ ಫೈರ್‍ವಾಚರ್‍ಗಳನ್ನಾಗಿ ಕಾಡಂಚಿನ ಭಾಗದ ಹಳ್ಳಿಗಳ ಜನರು ಮತ್ತು ಹಾಡಿಗಳ ಗಿರಿಜನರನ್ನೇ ವಾಚರ್‍ಗಳಾಗಿ ಇಲಾಖೆ ಬಳಸಿಕೊಳ್ಳಲಿದೆ.

ಬೆಂಕಿ ಅವಘಡ ಸಂಭವಿಸಿದಲ್ಲಿ ಹುಣಸೂರು, ಎಚ್.ಡಿ.ಕೋಟೆ ಹಾಗೂ ವಿರಾಜಪೇಟೆ ತಾಲೂಕುಗಳ ಅಗ್ನಿಶಾಮಕ ಠಾಣೆಯ ಒಂದೊಂದು ಫೈರ್‍ಇಂಜಿನ್ ಬಳಸಿಕೊಳ್ಳುವ ಅಗತ್ಯವಿದ್ದು, ಜನವರಿ ತಿಂಗಳಿನಿಂದ ಮೂರು ಫೈರ್‍ಇಂಜಿನ್‍ಗಳು ಕಾರ್ಯಸನ್ನದ್ಧವಾಗಲಿದೆ.

ಮಿನಿ ಫೈರ್ ಇಂಜಿನ್: ಅರಣ್ಯ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುವ ವೇಳೆ ಸಣ್ಣಪುಟ್ಟ ಬೆಂಕಿ ಕಿಡಿ ಕಾಣಿಸಿಕೊಂಡಲ್ಲಿ ಬೈಕಿನಲ್ಲಿ ಸ್ಪ್ರೇಯರ್ಸ್ ಮತ್ತು ನೀರಿನ ಕ್ಯಾನ್‍ಗಳನ್ನು ತುಂಬಿಕೊಂಡು ಅಲ್ಲೇ ನೀರು ಚಿಮುಕಿಸಿ ನಂದಿಸುವ ವಿಶೇಷ ಪ್ರಯತ್ನಕ್ಕೂ ಇಲಾಖೆ ಸಜಗಿದೆ. ಸಿಬ್ಬಂದಿ ಬಳಿ ಸ್ಪ್ರೇಯರ್ಸ್, ಬ್ಲೋಯರ್ಸ್, ಕ್ರಾಪ್ ಕಟ್ಟರ್ ಮುಂತಾದ ಸಲಕರಣೆಗಳು ಇರಲಿವೆ.
ಉದ್ಯಾನವನದ ವೀರನಹೊಸಳ್ಳಿ ವಲಯದಲ್ಲಿ 10 ಸದಸ್ಯರನ್ನು ಒಳಗೊಂಡ ರಿಸರ್ವ್ ಟೀಮ್(ಕ್ಷಿಪ್ರ ಕಾರ್ಯ ಪಡೆ) ರಚಿಸಲಾಗಿದ್ದು, ಕಾಡ್ಗಿಚ್ಚಿನ ಮಾಹಿತಿ ದೊರೆತ ಕ್ಷಣದಲ್ಲೇ ಇವರು ಸ್ಥಳಕ್ಕೆ ತೆರಳಿ ಬೆಂಕಿ ನಂದಿಸುವ ಕಾರ್ಯ ನಡೆಸಲಿದ್ದಾರೆ.

ವಾಕಿಟಾಕಿ: ರಾಷ್ಟ್ರೀಯ ಉದ್ಯಾನದಲ್ಲಿ ಬೆಂಕಿ ಪತ್ತೆ ಮಾಡಲು 32 ವಾಚ್ ಟವರ್ ಗಳನ್ನು 40ರಿಂದ 80 ಅಡಿ ಎತ್ತರದಲ್ಲಿ ನಿರ್ಮಿಸಲಾಗಿದೆ. ಪ್ರತಿ ಟವರ್ ನಲ್ಲಿ 2 ಸಿಬ್ಬಂದಿ ವಾಕಿ ಟಾಕಿಯೊಂದಿಗೆ ದಿನದ 24 ಗಂಟೆ ಕರ್ತವ್ಯ ನಿರ್ವಹಿಸಲಿದ್ದಾರೆ.ಪ್ರತಿಯೊಂದು ವಲಯಕ್ಕೂ ಒಂದು ಅಗ್ನಿಶಾಮಕ ದಳದಿಂದ ಫೈರ್ ಎಂಜಿನ್ ನಿಯೋಜಿಸಲಾಗಿದೆ.

ಈ ಬಾರಿ ವಿಶೇಷವಾಗಿ ಅರಣ್ಯದಂಚಿನ ರೈತಾಪಿ ವರ್ಗ ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಕಾಡಿನ ಪ್ರವಾಸದಿಂದ ಅರಿವು ಮೂಡಿಸಿ ಅದರ ಪ್ರಾಮುಖ್ಯತೆ ತಿಳಿಸಿದ್ದೇವೆ. ಅರಣ್ಯದಂಚಿನ 40 ಗ್ರಾಮಗಳಲ್ಲಿ ಬೀದಿ ನಾಟಕ ಪ್ರದರ್ಶನದಿಂದ ಸಾರ್ವಜನಿಕರಿಗೆ ಅರಿವು ಮೂಡಿಸುವ ಪ್ರಯತ್ನ ನಡೆದಿದೆ.

ಉದ್ಯಾನವನ ವೀಕ್ಷಣೆಗೆ ಬರುವ ನಾಗರಿಕರು ಕೂಡ ಇಲಾಖೆ ರೂಪಿಸಿರುವ ಇ-ಗಸ್ತು ಸೇರಿದಂತೆ ವಿವಿಧ ನಿಯಮ ಪಾಲಿಸಿದಲ್ಲಿ ಅವಘಡಗಳನ್ನು ತಡೆಗಟ್ಟಲು ಸಾಧ್ಯವಿದೆ. ಸ್ಥಳೀಯರು ಮತ್ತು ಕಾಡಂಚಿನ ಭಾಗದ ಗ್ರಾಮಗಳ ಜನರು ಇಲಾಖೆಯೊಂದಿಗೆ ಕೈಜೋಡಿಸಿದರೆ ಕಾಡಿಗೆ ಬೆಂಕಿ ಬೀಳದಂತೆ ಎಚ್ಚರಿಕೆ ವಹಿಸಬಹುದು.

385 ಹುದ್ದೆಗಳಲ್ಲಿ 117 ಹುದ್ದೆ ಖಾಲಿ ಇವೆ. ಅರಣ್ಯ ವೀಕ್ಷಕ ಹುದ್ದೆ 23, ಸಹಾಯಕ ವಲಯ ಸಂರಕ್ಷಣಾಧಿಕಾರಿ 8, ವಾಚರ್ 37, ಕಚೇರಿ ಸಿಬ್ಬಂದಿ ಖಾಲಿ ಇದೆ ಎಂದು ನಾಗರಹೊಳೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಆರ್.ಪ್ರಸನ್ನಕುಮಾರ್ ತಿಳಿಸಿದ್ದಾರೆ.

Facebook Comments