ನಡೆದಾಡುವ ದೇವರ ಆರೋಗ್ಯದಲ್ಲಿ ಇನ್ನಷ್ಟು ಚೇತರಿಕೆ, ನಿಟ್ಟುಸಿರುಬಿಟ್ಟ ಭಕ್ತರು..!

ಈ ಸುದ್ದಿಯನ್ನು ಶೇರ್ ಮಾಡಿ

Siddaganga-Swamiji--01

ತುಮಕೂರು,ಜ.20-ಸಿದ್ದಗಂಗಾ ಶ್ರೀಗಳ ಆರೋಗ್ಯ ದಿನೆ ದಿನೇ ಸುಧಾರಿಸುತ್ತಿದ್ದು, ಶ್ರೀಮಠಕ್ಕೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಡಾ.ಪರಮೇಶ್ವರ್ ವೈದ್ಯರ ತಂಡದಿಂದ ಚಿಕಿತ್ಸೆ ಮುಂದುವರೆದಿದೆ. ಸ್ವಂತ ಶಕ್ತಿಯಿಂದ ಶ್ರೀಗಳು ಉಸಿರಾಟ ಮಾಡುವುದು ದಿನೆ ದಿನೇ ಹೆಚ್ಚಾಗುತ್ತಿದೆ. ಶ್ರೀಗಳ ಆರೋಗ್ಯದಲ್ಲಿ ಆಗುತ್ತಿರುವ ಬದಲಾವಣೆ ನಿಜಕ್ಕೂ ಅದ್ಭುತ ಎಂದು ವೈದ್ಯರು ಹೇಳುತ್ತಿದ್ದಾರೆ.ಅರ್ಧ ಗಂಟೆ ಉಸಿರಾಡಲು ಕಷ್ಟ ಪಡುತ್ತಿದ್ದ ಸ್ವಾಮೀಜಿ ಈಗ 3ರಿಂದ 4 ಗಂಟೆಗಳ ಕಾಲ ಸ್ವಂತ ಉಸಿರಾಟ ಮಾಡುತ್ತಿದ್ದಾರೆ.

ಶ್ರೀಗಳ ದೇಹದಲ್ಲಿ ಅಲ್ಬುಮಿನ್ ಪ್ರೋಟೀನ್ ಪ್ರಮಾಣ ಹೆಚ್ಚಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ, ಶ್ರೀಗಳ ಶ್ವಾಸಕೋಶದಲ್ಲಿ ಮತ್ತೆ ನೀರು ಸೇರಿಕೊಳ್ಳುತ್ತಿದೆ. ಇದರಿಂದ ವೈದ್ಯರು ಸ್ವಲ್ಪ ಆತಂಕಕ್ಕೀಡಾಗಿದ್ದಾರೆ.

ಹಳೆ ಮಠದಲ್ಲಿ ಕಿರಿಯ ಶ್ರೀಗಳ ನೆರವಿನೊಂದಿಗೆ ಇಷ್ಟಲಿಂಗ ಪೂಜೆ ನೆರವೇರಿಸಿದ್ದಾರೆ. ಮಂತ್ರ, ಭಜನೆ , ವಚನ ಗಾಯನ ಗಳನ್ನು ಶ್ರೀಗಳಿಗೆ ಕೇಳಿಸುವ ಮೂಲಕ ಶಿಷ್ಯರು ಚಿಕಿತ್ಸೆಗೆ ಸಹಾಯ ಮಾಡುತ್ತಿದ್ದಾರೆ. ಶ್ರೀಗಳು ಗುಣಮುಖರಾಗಲೆಂದು ನಾಡಿನಾದ್ಯಂತ ಭಕ್ತರು ಪ್ರಾರ್ಥನೆ ಮಾಡುತ್ತಿದ್ದಾರೆ.ಮಠಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿದೆ. ಪೊಲೀಸ್ ಭದ್ರತೆಯನ್ನು ಕೂಡ ಹೆಚ್ಚಿಸಲಾಗಿದೆ.

ಗಣ್ಯರ ಭೇಟಿ: ಬಾಳೇಹೊನ್ನೂರು ಮಠದ ರಂಭಾಪುರಿ ಶ್ರೀಗಳು, ನಂಜಾವಧೂತ ಸ್ವಾಮೀಜಿ, ಸುಪ್ರೀಂಕೋರ್ಟ್ ನ್ಯಾಯಾಧೀಶರಾದ ಮೋಹನ್ ಎಂ.ಶಾಂತನಗೌಡ, ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಮುಂತಾದವರು ಮಠಕ್ಕೆ ಭೇಟಿ ನೀಡಿ ಶ್ರೀಗಳ ಆರೋಗ್ಯ ವಿಚಾರಿಸಿದರು.

ನಡೆದಾಡುವ ದೇವರು ಸಿದ್ದಗಂಗಾಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತಿರುವುದಾಗಿ ವೈದ್ಯರು ಹೇಳಿದ್ದಾರೆ. ಶ್ರೀಗಳ ಜೀವನ ನಮಗೆ ಮಾರ್ಗದರ್ಶನವಾಗಿದೆ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ. ಶ್ರೀಗಳ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನೇಕ ಬಾರಿ ಬಂದು ಶ್ರೀಗಳ ಆಶೀರ್ವಾದ ಪಡೆದಿದ್ದೇನೆ. ಶ್ರೀಗಳು ಮಲಗಿಕೊಂಡು ಉಸಿರಾಟ ಮಾಡುವಾಗ ಅದನ್ನು ನೋಡಿ ತುಂಬಾ ಸಂಕಟವಾಯಿತು ಎಂದರು.

ಈ ನಾಡಿಗೆ ಶ್ರೀಗಳ ಕೊಡುಗೆ ಅಪಾರ. ಕೋಟಿ ಕೋಟಿ ಭಕ್ತರ ಆರಾಧ್ಯ ದೈವ ಅವರು. ಮಕ್ಕಳಿಗೆ ವಿದ್ಯಾಭ್ಯಾಸದಿಂದ ಹಿಡಿದು ಅನೇಕ ಸೇವೆಗಳನ್ನು ಮಾಡಿದ್ದಾರೆ. ಅವರು ಹಾಕಿಕೊಟ್ಟಿರುವ ಜೀವನದಲ್ಲಿ ನಾವು ನಾಲ್ಕು ಹೆಜ್ಜೆ ನಡೆದರೆ ಸಾಕು ಎಂದು ಹೇಳಿದರು.ಶ್ರೀಗಳ ಆರೋಗ್ಯ ಸುಧಾರಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು.

Facebook Comments