ಬಿಜೆಪಿ ಬುದ್ದಿ ಕಲಿಯದಿದ್ದರೆ ಶಾಸಕರನ್ನು ಕಳೆದುಕೊಳ್ಳಬೇಕಾಗುತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

Veerappa-Moilyಬೆಂಗಳೂರು, ಜ.20- ಬಿಜೆಪಿಯವರು ಈಗಲಾದರೂ ಬುದ್ದಿ ಕಲಿತು ಸುಮ್ಮನಾಗದೇ ಹೋದರೆ ಆಪರೇಷನ್ ಕಮಲಕ್ಕೆ ಪ್ರತಿಯಾಗಿ ಬಿಜೆಪಿ ಶಾಸಕರನ್ನು ಕಳೆದುಕೊಳ್ಳುವ ಕಾರ್ಯಾಚರಣೆ ಅನಿವಾರ್ಯವಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸಿಗ ಎಂ.ವೀರಪ್ಪಮೊಯ್ಲಿ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಎಷ್ಟೇ ಪ್ರಯತ್ನಪಟ್ಟರೂ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಸಾಧ್ಯವಿಲ್ಲ. ಸರ್ಕಾರ ಸುಭದ್ರವಾಗಿದೆ. ಅವರು ಆಪರೇಷನ್ ಕಮಲ ಮುಂದುವರೆಸಿದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಅದನ್ನು ನೋಡಿಕೊಂಡು ಸುಮ್ಮನೆ ಕೂರುವುದಿಲ್ಲ. ಪ್ರತಿತಂತ್ರ ಮಾಡಲೇಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಯವರು ಕಾಂಗ್ರೆಸ್ ಶಾಸಕರಿಗೆ ನಾನಾ ರೀತಿ ಆಮಿಷಗಳನ್ನು ಒಡ್ಡಿ ಪಕ್ಷಾಂತರ ಮಾಡಲು ಪ್ರಯತ್ನ ಮಾಡಿದಾಗ ನಮ್ಮ ಶಾಸಕರನ್ನು ನಾವು ರಕ್ಷಿಸಿಕೊಳ್ಳಲು ಒಂದೆಡೆ ಸೇರಿಕೊಳ್ಳಬೇಕಾಗಿದೆ. ಇದು ರೆಸಾರ್ಟ್ ರಾಜಕೀಯ ಅಲ್ಲ. ಬಿಜೆಪಿಯವರು ರೆಸಾರ್ಟ್ ರಾಜಕೀಯ ಮಾಡಿದರು. ನಮ್ಮ ಶಾಸಕರನ್ನು ನಾವು ರಕ್ಷಿಸಿಕೊಳ್ಳುವ ಸಲುವಾಗಿ ರೆಸಾರ್ಟ್‍ಗೆ ಕರೆದುಕೊಂಡು ಹೋಗಿದ್ದೇವೆಯೇ ಹೊರತು ನಾವಾಗಿಯೇ ರೆಸಾರ್ಟ್‍ಗೆ ಹೋಗಿಲ್ಲ ಎಂದರು.

ರಾಷ್ಟ್ರಮಟ್ಟದಲ್ಲಿ ಜಾತ್ಯಾತೀತ ನಿಲುವಿನ ಪಕ್ಷಗಳ ಒಟ್ಟಾದರೆ ಬಿಜೆಪಿ ಹಾರಿ ಹೋಗುವುದು ಖಚಿತ. ನಿನ್ನೆ ಕೋಲ್ಕತ್ತಾದಲ್ಲಿ ನಡೆದ ಸಮಾವೇಶ ರಾಷ್ಟ್ರರಾಜಕಾರಣದಲ್ಲಿ ಗಂಭೀರ ಪ್ರಭಾವ ಬೀರಿದೆ. ಎಲ್ಲಾ ಜಾತ್ಯಾತೀತ ಪಕ್ಷಗಳು ಒಂದುಗೂಡಿವೆ. ಕಾಂಗ್ರೆಸ್ ಕೂಡ ಅದನ್ನು ಬೆಂಬಲಿಸಿದೆ.

ರಾಹುಲ್‍ಗಾಂಧಿ ಅವರು ಭಾಗವಹಿಸದೇ ಇದ್ದರೂ ಅವರ ಪ್ರತಿನಿಧಿಯಾಗಿ ಅಭಿಷೇಕ್ ಸಿಂಘ್ವಿ ಮತ್ತಿತರ ನಾಯಕರು ಭಾಗವಹಿಸಿದ್ದರು. ರಾಜಕೀಯವಾಗಿ ಬಿಜೆಪಿ ಹೊರತು ಪಡಿಸಿ ಎಲ್ಲಾ ಪಕ್ಷಗಳು ಒಟ್ಟಾಗುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಹೇಳಿದರು.

Facebook Comments