ವೈದ್ಯಲೋಕವನ್ನು ವಿಸ್ಮಿತಗೊಳಿಸಿದ ಪವಾಡ ಪುರುಷ..!

ಈ ಸುದ್ದಿಯನ್ನು ಶೇರ್ ಮಾಡಿ

Swamiji--03

ಲೋಕ ಜಂಗಮರಾದ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳದು ಪವಾಡ ಸದೃಶ ಸಾರ್ಥಕ ಬದುಕು. ಕಾಯಕವೇ ಕೈಲಾಸ ಎಂದು ನಂಬಿ ಅದನ್ನು ಕಾಯಾ-ವಾಚಾ-ಮನಸಾ ಅನುಷ್ಠಾನ ಗೊಳಿಸಿದ್ದ ಶ್ರೀಗಳು ಮನುಕುಲಕ್ಕೆ ಮಾದರಿಯಾಗುವಂತಹ ಬದುಕು ನಡೆಸಿದವರು. ವಿಶ್ವದ ಐವರು ದೀರ್ಘಾಯುಷಿಗಳ ಪೈಕಿ ಶ್ರೀಗಳೂ ಒಬ್ಬರು.ಶ್ರೀಗಳ ದೀರ್ಘಾಯುಷ್ಯದ ರಹಸ್ಯವು ಗೌಪ್ಯವಾಗಿ ಉಳಿದಿಲ್ಲ. ಅವರ ಜೀವನವು ತೆರೆದ ಪುಸ್ತಕವಿದ್ದಂತೆ. ಸಜ್ಜನರೆಲ್ಲ ಅದನ್ನು ಅನುಕರಿಸಬಹುದು.

ಶ್ರೀಗಳ ದಿನಚರಿ ಪ್ರತಿದಿನ ಬೆಳಗ್ಗೆ ನಾಲ್ಕು ಗಂಟೆಗೆ ಪ್ರಾರಂಭ. ನಿತ್ಯಕರ್ಮ ಮುಗಿಸಿ ಶುಚಿರ್ಭೂತರಾಗಿ ಅವರು ಮಾಡುವ ಇಷ್ಟಲಿಂಗ ಪೂಜೆಯನ್ನು ನೋಡುವುದೇ ಪುಣ್ಯ. ಪ್ರತಿ ದಿನ ಅವರು ಮಹಾಮೃತ್ಯುಂಜಯನಾದ ಪರಶಿವನ ನಾಮಸ್ಮರಣೆ ಮಾಡುತ್ತಿದ್ದರು. ಶ್ರೀಗಳ ದೀರ್ಘಾಯುಷ್ಯದ ರಹಸ್ಯಗಳ ಪೈಕಿ ಇದೂ ಒಂದು.

ಓಂಕಾರ ಜಪ, ಶಿವನಾಮ ಪಠಣ ಮಾಡುತ್ತಿದ್ದ ಶ್ರೀಗಳು ಅದರ ಬಲದ ಮೇಲೆ ಶತಾಯುಷಿಗಳಾದ ನಂತರವೂ ಎಂದಿನಂತೆ ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ತೊಡಗುತ್ತಿದ್ದರು. ಶ್ರೀಗಳ ಪಾಲಿನ ಪ್ರತ್ಯಕ್ಷ ದೇವರೆಂದರೆ ಮಕ್ಕಳು. ಮಹಾಸ್ವಾಮಿಗಳಿಗೆ ಮಕ್ಕಳೆಂದರೆ ಅಪಾರ ಮಮಕಾರ. ಅವರ ಯೋಗ ಕ್ಷೇಮ ವಿಚಾರಿಸದೆ ದಿನ ಉರುಳುತ್ತಿರಲಿಲ್ಲ.

ಮಕ್ಕಳಿಗೆ ವಿದ್ಯೆ, ಊಟ, ವಸತಿ ನೀಡಿ ತ್ರಿವಿಧ ದಾಸೋಹಿಗಳಾಗಿದ್ದ ಶ್ರೀಗಳು ಇತ್ತೀಚಿನವರೆಗೂ ಊರುಗೋಲಿನ ನೆರವಿಲ್ಲದೆ ನಡೆದಾಡುತ್ತಿದ್ದರು. ಕನ್ನಡಕದ ನೆರವಿಲ್ಲದೆ ಓದುತ್ತಿದ್ದರು. ತಾಮ್ರದ ತಾಯತದ ಮೇಲೆ ತಾವೇ ಸ್ವತಃ ಬೀಜಾಕ್ಷರ ಬರೆದು ಅದನ್ನು ಭಕ್ತರಿಗೆ ಕಟ್ಟುತ್ತಿದ್ದರು. ಮಿತಾಹಾರಿಗಳಾಗಿದ್ದ ಶ್ರೀಗಳನ್ನು ರೋಗರುಜಿನಗಳ ಬಾಧೆ ಕಾಡುತ್ತಿರಲಿಲ್ಲ.

ಇತ್ತೀಚಿನ ವರ್ಷಗಳಲ್ಲಿ ಶ್ರೀಗಳು ವಯೋ ಸಹಜವಾದ ಪಿತ್ತ ಕೋಶ ವ್ಯಾಧಿಗೊಳಗಾಗಿದ್ದರು. ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾದಾಗ ಕೂಡ ಅವರ ದಿನಚರಿ ಯಥಾಪ್ರಕಾರ ನಡೆಯುತ್ತಿತ್ತು. 80 ವರ್ಷ ತುಂಬಿದ ವ್ಯಕ್ತಿಗಳಿಗೆ ಶಸ್ತ್ರ ಚಿಕಿತ್ಸೆ ಮಾಡಲು ವೈದ್ಯರು ಹಿಂದೇಟು ಹಾಕುತ್ತಾರೆ. ವಯೋಮಾನದ ಫಲವಾಗಿ ದೇಹದ ಅಂಗಾಂಗಳು ತುಂಬಾ ಸೂಕ್ಷ್ಮವಾಗಿರುವುದರಿಂದ ಅಂಥವರು ಶಸ್ತ್ರಕ್ರಿಯೆಯನ್ನು ತಡೆದುಕೊಳ್ಳುವುದು ಕಷ್ಟ ಎಂದು ವೈದ್ಯರ ಅಭಿಮತ. ಆದರೆ, ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳು ಇದಕ್ಕೆ ಅತೀತರು.

ನೂರು ವರ್ಷ ದಾಟಿದ ನಂತರವೂ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ದಿನ ಕಳೆಯುವುದರೊಳಗೆ ಚೇತರಿಸಿಕೊಳ್ಳುತ್ತಿದ್ದರು. ಇವರ ಪಿತ್ತಕೋಶಕ್ಕೆ ಒಂದಲ್ಲ ಎರಡಲ್ಲ 18 ಸಲ ಸ್ಟೆಂಟ್ ಅಳವಡಿಸಿದ್ದರು.

ಡಿಸೆಂಬರ್ ತಿಂಗಳಿನಲ್ಲಿ ಶ್ರೀಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಚೆನ್ನೈನ ರೇಲಾ ಆಸ್ಪತ್ರೆಗೆ ದಾಖಲಿಸಿದರು. ಆ ಆಸ್ಪತ್ರೆಯ ಮುಖ್ಯಸ್ಥರಾದ ಮೊಹಮ್ಮದ್ ರೇಲಾ ಅವರು ವಿಶ್ವವಿಖ್ಯಾತ ಪಿತ್ತಕೋಶ ತಜ್ಞರು. ಸಾವಿರಾರು ಶಸ್ತ್ರ ಚಿಕಿತ್ಸೆ ಮಾಡಿರುವ ಅನುಭವಿ. ಅಂಥವರು 111 ವರ್ಷ ವಯಸ್ಸಿನ ಶ್ರೀಗಳಿಗೆ ಶಸ್ತ್ರ ಚಿಕಿತ್ಸೆ ಮಾಡಿ ಇದು ನನ್ನ ವೃತ್ತಿ ಬದುಕಿನ ಮರೆಯಲಾಗದ ಅಪರೂಪದ ಕ್ಷಣ ಎಂದು ಹೇಳಿದರು.

ಶ್ರೀಗಳಿಗೆ ಹಾಕಿದ್ದ ಸ್ಟೆಂಟ್‍ಗಳನ್ನೆಲ್ಲ ಅವರು ತೆಗೆದುಹಾಕಿದರು. ಶಸ್ತ್ರ ಚಿಕಿತ್ಸೆಯ ನಂತರ ಚೇತರಿಸಿಕೊಂಡ ಶ್ರೀಗಳನ್ನು ನೋಡಿದ ಅವರು ಇದೊಂದು ಪವಾಡವೇ ಸರಿ ಎಂದು ಉದ್ಗರಿಸಿದರು. ಶ್ರೀಗಳ ಇಚ್ಛಾನುಸಾರವಾಗಿ ರೇಲಾ ಆಸ್ಪತ್ರೆಯ ವಾರ್ಡ್‍ವೊಂದನ್ನು ಪೂಜಾ ಮಂದಿರವಾಗಿ ಮಾರ್ಪಡಿಸಿದ್ದರು. ಅಲ್ಲಿ ಶ್ರೀಗಳು ಇಷ್ಟಲಿಂಗ ಪೂಜೆ ನೆರವೇರಿಸುತ್ತಿದ್ದರು. ಹದಿಮೂರು ದಿನಗಳ ನಂತರ ಶ್ರೀಗಳು ಚೆನ್ನೈನಿಂದ ತುಮಕೂರಿನ ತಮ್ಮ ಮಠಕ್ಕೆ ಮರಳಿದರು.

ನಡೆದಾಡುವ ದೇವರು ಎಂಬ ಪದಕ್ಕೆ ಅನ್ವರ್ಥ ಅನ್ನುವಹಾಗೆ ಶ್ರೀಗಳು ತುಂಬು ಜೀವನ ನಡೆಸಿದರು. ದೈಹಿಕ ತೃಷೆಗಳನ್ನು ಹತ್ತಿಕ್ಕಿ ಪಾರಮಾರ್ಥಿಕತೆಗೆ ಶರಣಾಗಿದ್ದ ಪೂಜ್ಯರು ಇಚ್ಛಾಮರಣಿ ಎಂದು ಅವರ ಖಾಸಗಿ ವೈದ್ಯರು ಸೇರಿದಂತೆ ಹಲವರು ಹೇಳಿದ್ದಾರೆ. ಅಂತಹ ಮಹಾತ್ಮರು, ಅವರ ಆದರ್ಶಗಳು ಅಮರ.

Facebook Comments