ಅನಂತದೆಡೆಗೆ ನಡೆದುಹೋದ ದೇವರು, ಶೋಕಸಾಗರದಲ್ಲಿ ಭಕ್ತಸಾಗರ

ಈ ಸುದ್ದಿಯನ್ನು ಶೇರ್ ಮಾಡಿ

Siddaga-Swamiji--01

ತುಮಕೂರು,ಜ.21- ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಕಾಯಕ ಯೋಗಿ, ಶತಾಯುಷಿ ತುಮಕೂರಿನ ಸಿದ್ದಗಂಗಾ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ಶಿವಕುಮಾರ ಸ್ವಾಮೀಜಿ (111)ಶಿವ ಸಾಯುಜ್ಯ ಹೊಂದಿದ್ದಾರೆ.

ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರ ಮಟ್ಟದಲ್ಲಿರುವ ಕೋಟ್ಯಂತರ ಭಕ್ತರನ್ನು ಶ್ರೀಗಳು ಅಗಲಿದ್ದಾರೆ. ಕೆಲವು ದಿನಗಳಿಂದ ಅಸ್ವಸ್ಥರಾಗಿದ್ದ ಡಾ.ಶಿವಕುಮಾರ ಸ್ವಾಮೀಜಿಯವರಿಗೆ ಹಳೆಯ ಮಠದಲ್ಲಿ ಚಿಕಿತ್ಸೆ ನೀಡುತ್ತಿದ್ದರೂ ಫಲಕಾರಿಯಾಗದೆ ಇಂದು ಬೆಳಗ್ಗೆ 11.44 ಗಂಟೆಗೆ ಇಹಲೋಕ ತ್ಯಜಿಸಿದ್ದಾರೆ ಎಂದು ಮಠದ ಆಡಳಿತ ಮಂಡಳಿ ಅಧಿಕೃತ ಪ್ರಕಟಣೆ ಹೊರಡಿಸಿದೆ.

ನಾಳೆ ಸಂಜೆ 4.30 ಶ್ರೀಗಳ ಅಂತಿಮ ಸಂಸ್ಕಾರ ನಡೆಯಲಿದೆ. ಶ್ರೀಗಳ ನಿಧನದ ಗೌರವಾರ್ಥ ಇಂದು ಮತ್ತು ನಾಳೆ ಸಂಸ್ಥೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ತುಮಕೂರು ಶ್ರೀ ಮಠದ ಆವರಣದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ನಾಡಿನ ಜನತೆಯ ಪಾಲಿಗೆ ನಡೆದಾಡುವ ದೇವರಾದ ಸಿದ್ದಗಂಗಾಶ್ರೀಗಳಿಗೆ ಉತ್ತಮ ಗೌರವ ಕೊಡಬೇಕಾಗಿದೆ.

ಹಲವಾರು ಮಠಾಧೀಶರು, ಕಿರಿಯ ಸ್ವಾಮೀಜಿಗಳು, ರಾಜ್ಯ, ದೇಶದೆಲ್ಲೆಡೆಯಿಂದ ಹಲವಾರು ಗಣ್ಯರು ಅಂತಿಮ ದರ್ಶನಕ್ಕೆ ಆಗಮಿಸಲಿದ್ದಾರೆ. ನಾಳೆ ಮಧ್ಯಾಹ್ನ ಮೂರು ಗಂಟೆಯವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಶಾಂತ ರೀತಿಯಾಗಿ ಅಂತಿಮ ದರ್ಶನ ಪಡೆಯಬೇಕೆಂದು ಮನವಿ ಮಾಡಿದರು. ಶ್ರೀಗಳ ಗೌರವಾರ್ಥ ನಾಳೆ ಸರ್ಕಾರಿ ರಜೆ ಘೋಷಿಸಲಾಗಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಸಿದ್ದಗಂಗಾ ಶ್ರೀಗಳು ಎಲ್ಲರಿಗೂ ಮಾರ್ಗದರ್ಶಕರಾಗಿದ್ದರು. ಅವರು ಪವಾಡ ಪುರುಷರು. ನಾಡಿನ, ದೇಶದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರ ಅಗಲಿಕೆಯ ವಿಷಯವನ್ನು ಅತ್ಯಂತ ನೋವಿನಿಂದ ಹೇಳುತ್ತಿದ್ದೇನೆ ಎಂದರು. ಅನಾರೋಗ್ಯಕ್ಕೊಳಗಾಗಿದ್ದ ಶ್ರೀಗಳಿಗೆ ಹಲವು ದಿನಗಳಿಂದ ಉತ್ತಮ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಅದು ಫಲಕಾರಿಯಾಗಲಿಲ್ಲ. ಇಂದು ಬೆಳಗ್ಗೆ ಶ್ರೀಗಳು ವಿಧಿವಶವಾಗಿರುವುದನ್ನು ವೈದ್ಯರು ಅಧಿಕೃತವಾಗಿ ತಿಳಿಸಿದರು ಎಂದರು.

# ನಾಳೆ ಸರ್ಕಾರಿ ರಜೆ ಘೋಷಣೆ
ತುಮಕೂರು ಸಿದ್ದಗಂಗಾ ಶ್ರೀಗಳು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಮೂರು ದಿನಗಳ ಶೋಕಾಚರಣೆ ಘೋಷಿಸಲಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಮಠದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀಗಳ ಗೌರವಾರ್ಥ ನಾಳೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ನಾಳೆ ಸಂಜೆ ಅಂತ್ಯಸಂಸ್ಕಾರವನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗುವುದು ಎಂದರು. ಶ್ರೀಗಳ ಸೇವೆ ಅಜರಾಮರ. ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಅವರ ಕೊಡುಗೆ ಅನನ್ಯವಾಗಿದೆ ಎಂದು ಸ್ಮರಿಸಿದರು.

# ದೇವೇಗೌಡರ ಸಂತಾಪ
ಬೆಂಗಳೂರು, ಜ.21-ಕಲಿಯುಗದ ನಡೆದಾಡುವ ದೇವರು ಡಾ.ಶ್ರೀ ಶಿವಕುಮಾರಸ್ವಾಮೀಜಿಯವರ ಅಗಲಿಕೆಯಿಂದ ಮನಸ್ಸಿಗೆ ತೀವ್ರ ನೋವುಂಟಾಗಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸಂತಾಪ ಸೂಚಿಸಿದ್ದಾರೆ. ನಮ್ಮೆಲ್ಲರ ಆರಾಧ್ಯ ದೈವ ಶ್ರೀ ಶಿವಕುಮಾರಸ್ವಾಮೀಜಿಯವರು ಈ ಜಗತ್ತು ಕಂಡ ಜ್ಞಾನ ಭಂಡಾರ.

ಶ್ರೀ ಸಿದ್ದಗಂಗಾ ವಿದ್ಯಾಸಂಸ್ಥೆಯ ಸಂಸ್ಥಾಪಕರೂ ಆದ ಶ್ರೀಗಳ ಸಾನಿಧ್ಯದಲ್ಲಿ ಬೆಳೆದ ಅನೇಕ ವಿದ್ಯಾರ್ಥಿಗಳು ಇಂದು ಉನ್ನತ ಮಟ್ಟಕ್ಕೆ ಬೆಳೆದಿದ್ದಾರೆ. ಸ್ವಾಮೀಜಿಯವರು ಈ ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡಿದ್ದಾರೆ. ಅವರ ಆದರ್ಶ ನಮ್ಮೊಡನೆ ಅಜರಾಮರವಾಗಿರುತ್ತದೆ ಎಂದು ತಿಳಿಸಿದರು. ಶ್ರೀಗಳು ಜನಿಸಿದ ಪುಣ್ಯಭೂಮಿಯಲ್ಲಿ ನಾವೆಲ್ಲ ಜನಿಸಿರುವುದು ನಮ್ಮ ಅದೃಷ್ಟ. ಅವರು ಹಾಕಿಕೊಟ್ಟಿರುವ ಮಾರ್ಗದರ್ಶನದಲ್ಲಿ ನಾವೆಲ್ಲ ಮುಂದೆ ಸಾಗಬೇಕಾಗಿದೆ ಎಂದು ಹೇಳಿದರು.

# ಅಭಿನವ ಬಸವಣ್ಣನ ಯುಗಾಂತ್ಯ :
ತುಮಕೂರು,ಜ.21- ಸಿದ್ದಗಂಗಾ ಶ್ರೀಗಳು ಲಿಂಗೈಕ್ಯರಾಗಿರುವುದು ಎರಡನೇ ಅಭಿನವ ಬಸವಣ್ಣನವರ ಯುಗಾಂತ್ಯವಾದಂತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಶೋಕ ವ್ಯಕ್ತಪಡಿಸಿದರು. ಮಠದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವ ಶ್ರೀಗಳು ಇಂದು ನಮ್ಮನ್ನು ಅಗಲಿರುವುದು ಅತೀವ ದುಃಖ ತಂದಿದೆ. ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ಕೊಡಿಸಲು ಎಲ್ಲರೂ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇವೆ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದರು.

Facebook Comments

Sri Raghav

Admin