ಸುಪ್ರೀಂ ನ್ಯಾಯಾಂಗ ಪ್ರಕ್ರಿಯೆಯಲ್ಲಿ ನಡೆಯಿತೊಂದು ಅಪರೂಪದ ವಿದ್ಯಮಾನ

ಈ ಸುದ್ದಿಯನ್ನು ಶೇರ್ ಮಾಡಿ

cbiನವದೆಹಲಿ, ಜ.21- ಭಾರತದ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಂಗ ಪ್ರಕ್ರಿಯೆಯಲ್ಲಿ ಅಪರೂಪದ ವಿದ್ಯಮಾನವೊಂದು ಇಂದು ನಡೆದಿದೆ. ಕೇಂದ್ರೀಯ ತನಿಖಾ ದಳ (ಸಿಬಿಐ)ದ ಹಂಗಾಮಿ ನಿರ್ದೇಶಕರಾಗಿ ಎಂ.ನಾಗೇಶ್ವರ ರಾವ್ ನೇಮಕ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯೊಂದರ ವಿಚಾರಣೆ ನಡೆಸದೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗಯ್ ದೂರ ಉಳಿದ ಪ್ರಕರಣ ಇದಾಗಿದೆ.

ಕಾರಣ: ಸಿಬಿಐನ ನೂತನ ಮುಖ್ಯಸ್ಥರ ಆಯ್ಕೆ ಸಮಿತಿಯಲ್ಲಿ ತಾವು ಭಾಗವಹಿಸಬೇಕಾದ ಕಾರಣದಿಂದ ಅವರು ಈ ಅರ್ಜಿಯ ವಿಚಾರಣೆ ನಡೆಸದೆ ದೂರ ಉಳಿದರು.

ನಾಗೇಶ್ವರ ರಾವ್ ಅವರನ್ನು ಸಿಬಿಐ ಹಂಗಾಮಿ ಮುಖ್ಯಸ್ಥರನ್ನಾಗಿ ನೇಮಕ ಮಾಡಿರುವುದನ್ನು ಪ್ರಶ್ನಿಸಿ ಎನ್‍ಜಿಒ ಸಂಸ್ಥೆಯೊಂದು ಸಲ್ಲಿಸಿದ್ದ ವಿಚಾರಣೆ ಇಂದು ಸುಪ್ರೀಂಕೋರ್ಟ್‍ನಲ್ಲಿ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠದ ಮುಂದೆ ವಿಚಾರಣೆಗೆ ಬಂದಿತು.

ಆದರೆ ಸಿಬಿಐ ಹೊಸ ನಿರ್ದೇಶಕರ ಆಯ್ಕೆ ಸಮಿತಿಯಲ್ಲಿ ಪ್ರಧಾನಮಂತ್ರಿ, ಅತಿ ದೊಡ್ಡ ವಿರೋಧ ಪಕ್ಷದ ನಾಯಕರು ಮತ್ತು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಥವಾ ಅವರಿಂದ ನಿಯೋಜಿಸಲ್ಪಡುವ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರೊಬ್ಬರು ಇದರಲ್ಲಿ ಇರುತ್ತಾರೆ.

ಹೀಗಾಗಿ ಮುಂದಿನ ಆಯ್ಕೆ ಸಮಿತಿಯಲ್ಲಿ ತಾವು ಪಾಲ್ಗೊಳ್ಳಬೇಕಿರುವುದರಿಂದ ಈ ಪ್ರಕರಣದ ವಿಚಾರಣೆ ನಡೆಸುವುದು ಸಮಂಜಸವಲ್ಲ ಎಂಬ ಕಾರಣ ನೀಡಿ ಈ ಪ್ರಕರಣದ ವಿಚಾರಣೆಯಿಂದ ಅವರು ದೂರ ಉಳಿದರು.

ಈ ಪೀಠದಲ್ಲಿರುವ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಕಾಮನ್ ಕಾಸ್ ಎಂಬ ಎನ್‍ಜಿಒ ಸಂಸ್ಥೆ ಸಲ್ಲಿಸಿರುವ ಈ ಕುರಿತ ಅರ್ಜಿಯ ವಿಚಾರಣೆ ಮುಂದುವರೆಸಿದ್ದಾರೆ.

Facebook Comments