ಎನ್‍ಡಿಎ ಪ್ರಚಾರ ಸಭೆಯಲ್ಲಿ ಪ್ರಧಾನಿ ಜೊತೆ ವೇದಿಕೆ ಹಂಚಿಕೊಂಡ ನಿತೀಶ್

ಈ ಸುದ್ದಿಯನ್ನು ಶೇರ್ ಮಾಡಿ

Nitishಪಾಟ್ನಾ, ಜ.21- ಬಿಹಾರ ರಾಜಕೀಯ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಎನ್‍ಡಿಎ ಪ್ರಚಾರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ವೇದಿಕೆ ಹಂಚಿಕೊಳ್ಳಲಿದ್ದಾರೆ. ನಿನ್ನೆ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಸ್ವತಃ ನಿತೀಶ್‍ಕುಮಾರ್ ಅವರೇ ಈ ಘೋಷಣೆ ಮಾಡಿದ್ದಾರೆ.

ಮುಖ್ಯಮಂತ್ರಿಗಳ ಈ ಘೋಷಣೆ ಹಲವರ ಹುಬ್ಬೇರಿಸಿದೆ. ಮೋದಿ ಹಾಗೂ ನಿತೀಶ್ ಹಲವು ಸರ್ಕಾರಿ ಕಾರ್ಯಕ್ರಮಗಳಲ್ಲಿ ವೇದಿಕೆ ಹಂಚಿಕೊಂಡಿದ್ದರೂ, ರಾಜಕೀಯ ವೇದಿಕೆ ಹಂಚಿಕೊಳ್ಳುತ್ತಿರುವುದು ಇದೇ ಮೊದಲು.

ಏಕೆಂದರೆ ಇಬ್ಬರ ನಡುವೆ ರಾಜಕೀಯವಾಗಿ ಸ್ನೇಹಸಂಬಂಧ ಇಲ್ಲ. 2013ರಲ್ಲಿ ಎನ್‍ಡಿಎ ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಿದಾಗ, ನಿತೀಶ್ ಎನ್‍ಡಿಎ ತೆಕ್ಕೆಯಿಂದ ಹೊರಹೋಗಿದ್ದರು.

ಇದಕ್ಕೂ ಮುನ್ನ 2002ರ ಗುಜರಾತ್ ಗಲಭೆ ಬಳಿಕ, ಬಿಹಾರದಲ್ಲಿ ಮೋದಿ ಜತೆ ಪ್ರಚಾರಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಬಿಜೆಪಿಯ ಕೇಂದ್ರೀಯ ನಾಯಕತ್ವಕ್ಕೆ ನಿತೀಶ್ ಸ್ಪಷ್ಟಪಡಿಸಿದ್ದರು.

ಇದಕ್ಕೆ ಅನುಗುಣವಾಗಿ 2005 ಮತ್ತು 2010ರ ವಿಧಾನಸಭಾ ಚುನಾವಣೆ ಹಾಗೂ 2009ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಸಭೆಯಲ್ಲಿ ನಿತೀಶ್ ಕಾಣಿಸಿಕೊಂಡಿರಲಿಲ್ಲ. ನಿತೀಶ್ ಅವರು ಲಾಲೂ ನೇತೃತ್ವದ ಮಹಾಮೈತ್ರಿಗೆ ಸೇರಿದ ಬಳಿಕ ಮೋದಿ ಹಾಗೂ ಕುಮಾರ್ ನಡುವೆ ಪ್ರಚಾರದ ವೇಳೆ ವಾಕ್ಸಮರವೇ ನಡೆದಿತ್ತು.

Facebook Comments