ದಯಾಮರಣಕ್ಕೆ ಮನವಿ ಸಲ್ಲಿಸಲು ಮಂಡ್ಯ ಡಿಸಿ ಕಚೇರಿಗೆ ಪಾದಯಾತ್ರೆ

ಈ ಸುದ್ದಿಯನ್ನು ಶೇರ್ ಮಾಡಿ

krpಕೆ.ಆರ್.ಪೇಟೆ, ಜ.21-ಹೇಮಾವತಿ ಅಣೆಕಟ್ಟು ನಿರ್ಮಾಣದಿಂದ ಸಂತ್ರಸ್ಥರಾದ 118 ಮಂದಿ ರೈತ ಕುಟುಂಬಗಳ ಸದಸ್ಯರು ತಮಗೆ ಮಂಜೂರಾಗಿರುವ ಬಿ.ಬಿ.ಕಾವಲು ಗ್ರಾಮದ ಸರ್ವೆ ನಂ.1ರ ಭೂಮಿಯನ್ನು ಅರಣ್ಯ ಇಲಾಖೆಯಿಂದ ಬಿಡಿಸಿಕೊಡುವಂತೆ ಒತ್ತಾಯಿಸಿ 10 ದಿನಗಳಿಂದ ನಡೆಸುತ್ತಿದ್ದ ಹೋರಾಟವನ್ನು ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಹಿಂಪಡೆದರೂ ದಯಾಮರಣಕ್ಕೆ ಮನವಿ ಸಲ್ಲಿಸಲು ಮಂಡ್ಯ ಡಿ.ಸಿ.ಕಚೇರಿವರೆಗೆ ಪಾದಯಾತ್ರೆ ಕೈಗೊಂಡಿದ್ದಾರೆ.

ಹಾಸನ ಜಿಲ್ಲೆಯ ಗೂರೂರಿನ ಅಣೆಕಟ್ಟೆಯನ್ನು 1970ರಲ್ಲಿ ಕಟ್ಟುವ ಸಂದರ್ಭದಲ್ಲಿ ಮುಳುಗಡೆಯಾಗಿದ್ದ ಆಲೂರು ತಾಲ್ಲೂಕಿನ ಸಮಸೋಗೆ, ಹುಲುಕುಂದ, ನೆಲ್ಲಿಗೆರೆ, ಗರಿಘಟ್ಟ, ಶೆಟ್ಟಿಹಳ್ಳಿ, ಕಲ್ಲಹಳ್ಳಿ, ನೆಲಹುರಳಿ ಗ್ರಾಮಗಳು ಸೇರಿದಂತೆ 70ರಿಂದ 80ಗ್ರಾಮಗಳ ಸಾವಿರಾರು ಮಂದಿ ನಿರಾಶ್ರಿತರಾದರು.

ಈ ಪೈಕಿ 118 ಮಂದಿ ಸಂತ್ರಸ್ಥರಿಗೆ ತಲಾ 4ಎಕರೆ 20ಗುಂಟೆಯಂತೆ ಕೆ.ಆರ್.ಪೇಟೆ ತಾಲೂಕಿನ ಬೆಳ್ಳಿ ಬೆಟ್ಟದ ಕಾವಲು ಗ್ರಾಮದ ಸರ್ವೆ ನಂ.1ರಲ್ಲಿ 520ಎಕರೆ ಜಮೀನನ್ನು ಹಾಸನ ವಿಶೇಷ ಭೂಸ್ವಾಧೀನಾಧಿಕಾರಿಗಳು ಕಂದಾಯ ಭೂ ನಿಯಮದ ಪ್ರಕಾರ ಮೀಸಲಿಟ್ಟು ಆದೇಶ ಹೊರಡಿಸಿದ್ದರು.

ಭೂಸ್ವಾಧೀನಾಧಿಕಾರಿಗಳು ಆದೇಶ ಹೊರಡಿಸಿ 20ವರ್ಷಗಳಾದರೂ ಕಂದಾಯ ಇಲಾಖೆಯು ಸಂತ್ರಸ್ಥರಿಗೆ ಸದರಿ ಜಮೀನನ್ನು ಅವರ ವಶಕ್ಕೆ ನೀಡುವಲ್ಲಿ ವಿಳಂಭ ಧೋರಣೆ ಅನುಸರಿಸಿದೆ. ಕೆಲವು ಸಂತ್ರಸ್ಥರು ತಮ್ಮ ಜಮೀನನ್ನು ಸ್ವಾಧೀನಕ್ಕೆ ತಗೆದುಕೊಂಡು ವ್ಯವಸಾಯವನ್ನು ಕೂಡ ಮಾಡಿದ್ದಾರೆ. ಮತ್ತೆ ಕೆಲವು ಸಂತ್ರಸ್ಥರು ಸಿಕ್ಕಷ್ಟು ಬೆಲೆಗೆ ಜಮೀನನ್ನು ಮಾರಿ ಕೈತೊಳೆದುಕೊಂಡಿದ್ದಾರೆ.

ಮತ್ತೆ ಹಲವಾರು ರೈತರು ತಮಗೆ ಮಂಜೂರಾದ ಭೂಮಿಗೆ ಕಾಲ ಕಾಲಕ್ಕೆ ರೈತರು ಕಂದಾಯ ಪಾವತಿ ಮಾಡುತ್ತಾ ಬರುತ್ತಿದ್ದಾರೆ ಅಲ್ಲದೆ ಸಂತ್ರಸ್ಥರು ತಮ್ಮ ಹೆಸರಿಗೆ ಆರ್.ಟಿ.ಸಿ. ಮಾಡಿಸಿಕೊಂಡಿದ್ದಾರೆ. ಸ್ಕೆಚ್ ಮಾಡಿಕೊಡಲಾಗಿದೆ. ಆದರೆ ಅರಣ್ಯ ಇಲಾಖೆ ರೈತರ ಜಮೀನಿನಲ್ಲಿ ಸಸಿಗಳನ್ನು ನೆಟ್ಟು ಸಂತ್ರಸ್ಥರ ಭೂಮಿಯನ್ನು ವಶಪಡಿಸಿಕೊಂಡು ಸಂತ್ರಸ್ಥ ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಕಳೆದ 10ದಿನಗಳಿಂದ ಅರಣ್ಯ ಇಲಾಖೆಯ ಸಂತ್ರಸ್ಥ ರೈತ ವಿರೋಧಿ ಈ ಧೋರಣೆಯನ್ನು ಖಂಡಿಸಿ ಸಂತ್ರಸ್ಥರು ಅನಿರ್ಧಿಷ್ಠಾವಧಿ ಹೋರಾಟ ಆರಂಭಿಸಿದ್ದರು. ಈ ಸಂಬಂಧ ತಹಸೀಲ್ದಾರ್ ಎಂ.ಶಿವಮೂರ್ತಿ ಅವರು ಸ್ಥಳಕ್ಕೆ ಭೇಟಿ ನೀಡಿ ಅವರ ಮನವಿ ಆಲಿಸಿ ಕಾನೂನಿನ ವ್ಯಾಪ್ತಿಯಲ್ಲಿ ಸಮಸ್ಯೆ ಬಗೆಹರಿಸುತ್ತೇವೆ ಎಂದು ಹೇಳಿದರೂ ಸಹ ಹೋರಾಟಗಾರರು ತಮ್ಮ ಧರಣಿ ಕೈಬಿಟ್ಟಿರಲಿಲ್ಲ.

ಈ ನಡುವೆ ಹೋರಾಟಗಾರರು ಗ್ರಾಮಠಾಣಾ ಜಾಗದಲ್ಲಿ ಅರಣ್ಯ ಇಲಾಖೆ ಬೆಳೆದಿರುವ ಮರಗಳನ್ನು ಕಡಿದು ಮನೆ ನಿರ್ಮಿಸಿ ಊರು ಕಟ್ಟುವುದಾಗಿ ಮಾಧ್ಯಮಗಳ ಮೂಲಕ ಹೇಳಿಕೆ ಕೊಟ್ಟಿದ್ದರು. ಹಾಗಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಪೊಲೀಸರಿಗೆ ಹಾಗೂ ತಹಸೀಲ್ದಾರ್ ಅವರಿಗೆ ದೂರು ನೀಡಿ ರೈತರು ಧರಣಿ ಮಾಡುತ್ತಿರುವ ಜಾಗ ಹಾಗೂ ಭೂಸ್ವಾಧೀನವಾಗಿರುವ ಜಾಗ ಅರಣ್ಯ ಇಲಾಖೆಯ ವಶದಲ್ಲಿದ್ದು ಅತಿಕ್ರಮ ಪ್ರವೇಶ ಮಾಡಿ ತೊಂದರೆ ಉಂಟು ಮಾಡುತ್ತಿರುವ ಹೋರಾಟಗಾರರನ್ನು ತೆರವುಗೊಳಿಸಲು ದೂರು ನೀಡಿದ್ದರು.

ಈ ದೂರು ದಾಖಲಿಸಿಕೊಂಡ ಸರ್ಕಲ್ ಇನ್ಸ್‍ಪೆಕ್ಟರ್ ಸುಧಾಕರ್ ಮತ್ತು ತಹಸೀಲ್ದಾರ್ ಎಂ.ಶಿವಮೂರ್ತಿ ಅವರು ಪ್ರತಿಭಟನಾಕಾರರನ್ನು ಮನವೊಲಿಸಲು ಪ್ರಯತ್ನಿಸಿದರು ಆದರೆ ರೈತರು ಬಗ್ಗದೇ ಇದ್ದಿದ್ದರಿಂದ ನಿಷೇಧಾಜ್ಞಾ ಜಾರಿಗೊಳಿಸಿ ಪ್ರತಿಭಟನೆ ನಿಲ್ಲಿಸಲಾಗಿತ್ತು. ಅಲ್ಲದೆ ಹೋರಾಟ ಮಾಡುತ್ತಿದ್ದ ಸುಮಾರು 15ಮಂದಿಯನ್ನು ಬಂಧಿಸಿ ಬಿಡುಗಡೆ ಮಾಡಲಾಗಿತ್ತು.

ಇದೀಗ ತಾಲೂಕು ಆಡಳಿತ ಹಾಗೂ ಪೊಲೀಸ್ ಅಧಿಕಾರತಿಗಳು ಹಾಗೂ ಅರಣ್ಯ ಇಲಾಖೆಯ ಧೋರಣೆಯನ್ನು ಖಂಡಿಸಿ ಮಂಡ್ಯ ಜಿಲ್ಲಾಧಿಕಾರಿಗಳನ್ನು ಬೇಟಿ ಮಾಡಿ ದಯಾಮರಣ ಕೋರಲು ರೈತರು ಮಂಡ್ಯದತ್ತ ಪ್ರಯಾಣ ಬೆಳೆಸಿದ್ದಾರೆ.

 

Facebook Comments