ಒಂದು ಕಾಲದಲ್ಲಿ ಚಿಂದಿ ಆಯುತ್ತಿದ್ದ ವ್ಯಕ್ತಿ ಈಗ ಮೇಯರ್..!!

ಈ ಸುದ್ದಿಯನ್ನು ಶೇರ್ ಮಾಡಿ

Mayor--01

ಚಂಡಿಗಢ, ಜ.21-ಪರಿಶ್ರಮ, ನಂಬಿಕೆ ಮತ್ತು ಅದೃಷ್ಟ ಈ ಮೂರು ಇದ್ದರೆ ಉನ್ನತ ಸ್ಥಾನಕ್ಕೇರಬಹುದು ಎಂಬುದಕ್ಕೆ ಬಿಜೆಪಿ ನಾಯಕ ರಾಜೇಶ್ ಕಾಲಿಯಾ(46) ಸ್ಪಷ್ಟ ನಿದರ್ಶನವಾಗಿ ನಿಲ್ಲುತ್ತಾರೆ.  ಪಂಜಾಬ್‍ನ ಚಂಡಿಗಢ ಮಹಾನಗರ ಪಾಲಿಕೆಗೆ ನೂತನ ಮೇಯರ್ ಆಗಿ ಆಯ್ಕೆಯಾಗಿರುವ ಇವರು ಹಿಂದೊಮ್ಮೆ ತುತ್ತು ಅನ್ನಕ್ಕಾಗಿ ಕಷ್ಟಪಡುವ ಚಿಂದಿ ಆಯುವ ಕೆಲಸ ಮಾಡುತ್ತಿದ್ದರು..!

ಚಂಡೀಗಢ ಮಹಾನಗರ ಪಾಲಿಕೆಗೆ ಇವರು ಮೇಯರ್ ಆಗಿ ಚುನಾಯಿತರಾಗಿದ್ದಾರೆ. 27 ಮತಗಳ ಪೈಕಿ 16 ಮತಗಳು ರಾಜೇಶ್ ಪರವಾಗಿ ಚಲಾವಣೆಯಾಗಿವೆ. ವಾಲ್ಮೀಕಿ ಸಮುದಾಯಕ್ಕೆ ಸೇರಿದ ಇವರು ಕಷ್ಟ ಸಹಿಷ್ಣುತೆಯ ನಾಯಕರೆನಿಸಿದ್ದಾರೆ.

ಇವರ ತಂದೆ ಕುಂದನ್ ಲಾಲ್ ಪೌರ ಕಾರ್ಮಿಕರು. ಇವರ ಸಹೋದರರಲ್ಲಿ ಒಬ್ಬರು ಈಗಲೂ ಜಾಡಮಾಲಿ ವೃತ್ತಿಯಲ್ಲಿದ್ದಾರೆ. ರಾಜೇಶ್ ಕೂಡ ಶಾಲೆ ನಂತರ ಜೀವನೋಪಾಯಕ್ಕಾಗಿ ಬೀದಿ ಬೀದಿ ಅಲೆದು ಕಸ ಮತ್ತು ಚಿಂದಿಗಳನ್ನು ಆಯುತ್ತಾ ಚಿಲ್ಲರೆ ಕಾಸು ಸಂಪಾದನೆ ಮಾಡುತ್ತಿದ್ದರು.

ಕಡು ಕಷ್ಟದ ಬದುಕು ನಡೆಸುತ್ತಿದ್ದ ಇವರು ಅನೇಕ ಎಡರುತೊಡರುಗಳನ್ನು ಎದುರಿಸಿ ಹಂತ ಹಂತವಾಗಿ ಮಹಾಪೌರರ ಹುದ್ದೆಗೇರಿದರು. ಹರ್ಯಾಣದ ನೋನಿಪಟ್ ಜಿಲ್ಲೆಯ ಅಹುಲಾನಾ ಗ್ರಾಮದ ಬುಡಕಟ್ಟು ಕಾಲಿಯಾ ಮನೆತನಕ್ಕೆ ಸೇರಿದ ಇವರು 1977ರಲ್ಲಿ ಚಂಡೀಗಢಕ್ಕೆ ವಲಸೆ ಬಂದು ಪುಟ್ಟ ಗುಡಿಸಿನಲ್ಲಿ ತಮ್ಮ ಸಹೋದರರೊಂದಿಗೆ ನೆಲೆಸಿ ಓದಿನ ಜೊತೆ ಚಿಂದಿ ಆಯುವ ಕೆಲಸ ಮಾಡುತ್ತಿದ್ದರು.

1984ರಲ್ಲಿ ಆರ್‍ಎಸ್‍ಎಸ್ ಮೂಲಕ ಬಿಜೆಪಿ ಸೇರ್ಪಡೆಯಾದರು. ರಾಮ ಮಂದಿರ ನಿರ್ಮಾಣ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದರು.
ಇವರ ಸಾಮಥ್ರ್ಯ ಕಂಡು ಬಿಜೆಪಿ ಕಾಲಿಯಾರನ್ನು ಪರಿಶಿಷ್ಟ ಜಾತಿ ಮೋರ್ಚಾ ಅಧ್ಯಕ್ಷ ಸ್ಥಾನದಲ್ಲಿ ಕೂರಿಸಿತು. 2011ರಲ್ಲಿ ನಗರಪಾಲಿಕೆ ಚುನಾವಣೆಗೆ ಸ್ಪರ್ಧಿಸಿ ಸೋತರು. ಆದರೂ ದೃತಿಗೆಡದೇ ಮರಳಿ ಯತ್ನವ ಮಾಡಿ 2016ರಲ್ಲಿ ಕಾರ್ಪೊರೇಟರ್  ಆದರು. ಈಗ ಮೇಯರ್ ಆಗಿರುವುದಕ್ಕೆ ಅಪಾರ ಸಂಸತ ವ್ಯಕ್ತಪಡಿಸಿದ್ದಾರೆ.

ಬಿಜೆಪಿಯ ತತ್ತ್ವಾದರ್ಶಗಳಿಗೆ ಮಾರು ಹೋದ ರಾಜೇಶ್ ಪ್ರಧಾನಿ ನರೇಂದ್ರ ಮೋದಿ ಅವರ ಅಪ್ಪಟ ಅಭಿಮಾನಿ. ಚಹಾ ಮಾರುವ ವ್ಯಕ್ತಿಯೊಬ್ಬರು ದೇಶದ ಅತ್ಯುನ್ನತ ಹುದ್ದೆ ಅಲಂಕರಿಸಿದ ಸಾಧನೆಯನ್ನು ತಮ್ಮ ಗೆಳೆಯರೊಂದಿಗೆ ಅಗಾಗ ಹೇಳುತ್ತಿದ್ದ ಇವರಿಗೆ ತಾವು ಮುಂದೆ ಮಹಾಪೌರರಾಗುವ ಲವಲೇಶ ಸುಳಿವು ಸಹ ಇರಲಿಲ್ಲ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇವೆಲ್ಲವೂ ಸಾಧ್ಯ ಎಂಬುದಕ್ಕೆ ರಾಜೇಶ್ ಕಾಲಿಯಾ ಉತ್ತಮ ಉದಾಹರಣೆ ಅಲ್ಲವೇ..?

Facebook Comments

Sri Raghav

Admin