ಅಚ್ಚರಿ ಹುಟ್ಟಿಸುವ ಸಿದ್ಧಗಂಗೆಯ ಚರಿತೆ, ಶಿವಕುಮಾರ ಶ್ರೀಗಳ ತಪೋನಿಷ್ಠೆ..!

ಈ ಸುದ್ದಿಯನ್ನು ಶೇರ್ ಮಾಡಿ

shivakumara-swamiji

ಸಿ.ಎಸ್.ಕುಮಾರ್ ಚೇಳೂರು
ವಿಶ್ವರತ್ನ, ರಾಷ್ಟ್ರ ಕಂಡ ಮಹಾತಪಸ್ವಿ, ಅನ್ನ, ಜ್ಞಾನ,ಭಕ್ತಿಯ ದಾಸೋಹದಿಂದ ಲಕ್ಷಾಂತರ ಮನೆಗಳಲ್ಲಿ ಜ್ಯೋತಿ ಬೆಳಗಿಸಿದ ತ್ರಿವಿಧ ದಾಸೋಹಿ, ಸ್ವಾತಂತ್ರ್ಯ ಪೂರ್ವದಲ್ಲಿ ಕರುನಾಡ ತಾಯಿ ಹೆತ್ತ ಶತಮಾನದ ಮಹಾನ್ ಸಂತ. ಸಿದ್ದಗಂಗೆಯ ಸಿದ್ಧಿ ಪುರುಷರಾದ ಡಾ.ಶ್ರೀ ಶಿವಕುಮಾರಸ್ವಾಮೀಜಿಯವರ ಬದುಕೇ ಜೀವನಾದರ್ಶ.

ನಡೆದಾಡುವ ದೇವರು ನೆಲೆಸಿದ ಪುಣ್ಯ ಭೂಮಿಯೆಂದೇ ತುಮಕೂರು ಇದೀಗ ಹೆಸರುವಾಸಿ. ಈ ಕ್ಷೇತ್ರದ ಕೀರ್ತಿಯನ್ನ ವಿಶ್ವಮಟ್ಟಕ್ಕೆ ಕೊಂಡೊಯ್ದ ಹಿರಿಮೆ ನಡೆದಾಡುವ ದೇವರು ಶ್ರೀ ಶಿವಕುಮಾರಸ್ವಾಮೀಜಿಗಳದ್ದು. ಸಿದ್ದಗಂಗಾ ಕ್ಷೇತ್ರಕ್ಕೆ 900 ವರ್ಷಗಳ ಸುದೀರ್ಘ ಇತಿಹಾಸ, ಭವ್ಯ ಪರಂಪರೆ ಇದೆ. ಗೋಸಲ ಸಿದ್ದೇಶ್ವರರಿಂದ ಸಿದ್ದಗಂಗಾ ಕ್ಷೇತ್ರ ಬೆಳಕಿಗೆ ಬಂತು.

ಕಲ್ಯಾಣದ ಕ್ರಾಂತಿಯ ನಂತರ ನಾನಾ ಕಡೆಗೆ ಚೆದುರಿದ ಶರಣರ ಒಂದು ಗುಂಪು ಶಿವಗಂಗೆ, ಸಿದ್ದಗಂಗೆ,ಗೂಳೂರು, ಗುಬ್ಬಿ ಬೇರೆ ಬೇರೆ ಕಡೆ ಸಂಚರಿಸಿ ತಮ್ಮ ಶರಣ ಧರ್ಮ ಸಂಸ್ಕøತಿಯನ್ನು ಉಳಿಸಿ ಬೆಳೆಸುವ ಪ್ರಯತ್ನ ಮಾಡಿದವು.  ಇದರಲ್ಲಿ ಸಿದ್ದಗಂಗಾ ಕ್ಷೇತ್ರಕ್ಕೆ ಆಗಮಿಸಿದವರೇ ಗೋಸಲ ಸಿದ್ದೇಶ್ವರರು.

ಚಾಮರಾಜನಗರ ಜಿಲ್ಲೆ ಹರದನಹಳ್ಳಿಯ ಶೂನ್ಯ ಪೀಠ ಪರಂಪರೆಯ ಗೋಸಲ ಸಿದ್ದೇಶ್ವರರು ಧರ್ಮ ಪ್ರಚಾರಾರ್ಥ ವಿರಕ್ತಗಣಗಳೊಡನೆ ದೇಶಾಟನೆ ಹೊರಟು ಸಿದ್ದಗಂಗೆ ಬೆಟ್ಟದ ತಪ್ಪಲಿಗೆ ಬಂದು ತಪೋನುಷ್ಠಾನ ಮಾಡಿದರು. ಒಮ್ಮೆ ಒಬ್ಬ ವಿರಕ್ತರಿಗೆ ಬಾಯಾರಿಕೆಯಾಗಿ ಕತ್ತಲಲ್ಲಿ ನೀರಿಗಾಗಿ ಪರದಾಡಿದರು.

ವೃದ್ಧ ಯೋಗಿಗಳು ಶಕ್ತಿ ಹೀನರಾಗಿ ಗೋಸಲ ಸಿದ್ದೇಶ್ವರರನ್ನು ಪ್ರಾರ್ಥಿಸಿದರು. ಆಗ ಸಿದ್ದೇಶ್ವರರು ಪ್ರತ್ಯಕ್ಷರಾಗಿ ತಮ್ಮ ಮೊಣಕಾಲಿನಿಂದ ಬಂಡೆಗೆ ಗುದ್ದಿದ್ದಾಗ ಬಂಡೆ ಸೀಳಿಕೊಂಡು ಜಲ ಒಸರಿಸಿತು. ಈ ಸಿದ್ದರ ಪಾದ ಸ್ಪರ್ಶದಿಂದ ಉದ್ಭವವಾದ ಗಂಗೆಯೇ ಸಿದ್ದಗಂಗೆ. ಅಂದಿನಿಂದ ಈ ಕ್ಷೇತ್ರಕ್ಕೆ ಸಿದ್ದಗಂಗೆ ಎಂಬ ಹೆಸರು ಬಂತು. ಇಂದಿಗೂ ಭಕ್ತರು ತಮ್ಮ ಸಂತಾನ ಪ್ರಾಪ್ತಿ, ಇಷ್ಟ ಸಿದ್ದಿಗೆ, ಗಂಗಾ ಪೂಜೆ ಮಾಡಿ ತಮ್ಮ ಮನದ ಮಲಿನತೆಯನ್ನು ಕಳೆದುಕೊಳ್ಳುತ್ತಾರೆ.

ಗೋಸಲ ಸಿದ್ದೇಶ್ವರರಿಂದ ಬೆಳಕಿಗೆ ಬಂದ ಸಿದ್ದಗಂಗೆ ನಂತರ ಮಠವಾಗಿ ಪರಿವರ್ತನೆಯಾಯಿತು. ಗೋಸಲ ಸಿದ್ದೇಶ್ವರರು ಅಲ್ಲಿನ ಭಕ್ತರ ಸಹಾಯದಿಂದ ಬೆಟ್ಟದ ತಪ್ಪಲಿನಲ್ಲಿ ಒಂದು ಮಠ ಕಟ್ಟಿದರು.ಅದೇ ಈಗ ಪ್ರಸ್ತುತ ಇರುವ ಸಿದ್ದಗಂಗಾ ಮಠ. ಈ ಮಠದ ಚರಿತ್ರೆ ಗಮನಿಸಿದಾಗ 1350ರಲ್ಲಿ ನಿರ್ಮಾಣವಾಗಿರಬಹುದು ಎನ್ನಲಾಗುತ್ತದೆ..ನಂತರ ಸಿದ್ದೇಶ್ವರರು ಬಹುಕಾಲ ಇದೇ ಮಠದಲ್ಲಿ ಅನುಷ್ಠಾನಗೊಂಡಿದ್ದರು..

ನಂತರ ಗುಬ್ಬಿಯ ಗೋಸಲ ಚೆನ್ನಬಸವರಾಜೇಂದ್ರರಿಗೆ ಅನುಗ್ರಹ ಮಾಡಿದರು. ಗೋಸಲ ಚೆನ್ನ ಬಸವೇಶ್ವರರಿಂದ ಶ್ರೀ ಸಿದ್ದಲಿಂಗೇಶ್ವರರು ಷಟ್ಸ್ಥಲ ಜ್ಞಾನೋಪದೇಶ ಪಡೆದು ವಚನ ಸಾಹಿತ್ಯ ಪುನರುಜ್ಜೀವನ ಗೊಳಿಸಿದ ಮಹಾಯೋಗಿಗಳಾದರು. ಇವರು ಬೋಳ ಬಸವೇಶ್ವರರಿಗೆ ಅಧಿಕಾರ ವಹಿಸಿಕೊಟ್ಟು 700 ವಿರಕ್ತರು, 3000 ಚರಮೂರ್ತಿಗಳೊಡನೆ ಸಮಸ್ತ ಭಾರತವನ್ನು ಸುತ್ತಿ ಮಠಗಳನ್ನು ಸ್ಥಾಪಿಸಿ ಸಮರ್ಥ ಶಿಷ್ಯರನ್ನು ಅಲ್ಲಿಯೆ ನೆಲೆಗೊಳಿಸಿದ್ದರು.

1470 ರಲ್ಲಿ ಮತ್ತೆ ಸಿದ್ದಗಂಗೆಗೆ ಬಂದು ಅನೇಕ ಪವಾಡಗಳನ್ನು ಮಾಡ ತೊಡಗಿದರು. ನಂತರ ಕುಣಿಗಲïನ ಕಗ್ಗೆರೆಯಲ್ಲಿ ತಪೋನಿಷ್ಠೆ ಕೈಗೊಂಡರು. ನಂತರ ಎಡೆಯೂರಿನಲ್ಲಿ ಶಿವಯೋಗ ಸಮಾಧಿ ಹೊಂದಿದರು. 1470ರ ನಂತರ ಕೆಲವಾರು ವರ್ಷಗಳು ಸಿದ್ದಗಂಗೆಯ ಇತಿಹಾಸದ ದಾಖಲೆಗಳು ಲಭ್ಯವಾಗಿಲ್ಲ. 1850 ರಿಂದ ಮತ್ತೆ ಸಿದ್ದಗಂಗಾ ಮಠದ ಚರಿತ್ರೆ ಶುರುವಾಗುತ್ತದೆ.. ಉತ್ತರ ಕರ್ನಾಟಕದಿಂದ ಗುಬ್ಬಿಗೆ ಬಂದ ಅಟವಿಸ್ವಾಮಿಗಳು ಗೋಸಲ ಚನ್ನಬಸವೇಶ್ವರ ಸಮಾಧಿಯ ಸೇವೆ ಮಾಡಿದರು.

ಅಲ್ಲಿಯೇ ಒಂದು ತೊರೆಯ ಪಕ್ಕದಲ್ಲಿ ಮಠವನ್ನು ಕಟ್ಟಿದ್ದರು. ಅದೇ ಈಗಿನ ತೊರೆ ಮಠ. ಒಮ್ಮೆ ಸಿದ್ದಗಂಗಾ ಕ್ಷೇತ್ರದ ಮಹಿಮೆ ಕೇಳಿ ಅಲ್ಲಿಗೆ ಬಂದು ಗಂಗಾ ಪೂಜೆ ಕೈಗೊಂಡರು. ಸಿದ್ದಲಿಂಗೇಶ್ವರರ ಬಳಿಕ ಅಭಿವೃದ್ದಿ ಕಾಣದ ಸಿದ್ದಗಂಗಾ ಕ್ಷೇತ್ರ ಮತ್ತೆ ಪಾವನ ವಾಯಿತು. ಅಟವಿಸ್ವಾಮಿಗಳು ಅಲ್ಲಿಗೆ ಬರುವ ಭಕ್ತರಿಗೆ ಅನ್ನ, ವಸತಿ ನೀಡಲು ಅನ್ನಸಂತರ್ಪಣೆ ಕಾರ್ಯ ಪ್ರಾರಂಭಿಸಿದ್ದರು.

ಅಂದು ಅವರ ಅಮೃತ ಹಸ್ತದಿಂದ ಹಚ್ಚಿದ ಅಡುಗೆ ಒಲೆ ಇಂದಿಗೂ ನಂದದೆ ಮಠಕ್ಕೆ ಬರುವ ಲಕ್ಷಾಂತರ ಭಕ್ತಾದಿಗಳಿಗೆ ಹಸಿವು ನೀಗಿಸುತ್ತಿದೆ. ಇಲ್ಲಿಂದ ಶುರುವಾಯಿತು ಸಿದ್ದಗಂಗೆಯ ದಾಸೋಹ ವೈಭವ. ಅನ್ನದಾಸೋಹದ ಜೊತೆಗೆ ಅಕ್ಷರ ಸೇರಿ ಜ್ಞಾನ ದಾಸೋಹವೂ ಶುರುವಾಯಿತು. ಸಂಸ್ಕøತ ಅಭ್ಯಾಸ ಮತ್ತು ಪ್ರಾಥಮಿಕ ಹಂತದ ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡಿ ವಿದ್ಯಾರ್ಥಿ ನಿಲಯಗಳು ಪ್ರಾರಂಭಿಸಿದರು. ಅಂದು ಪ್ರಾರಂಭಿಸಿದ ಅನ್ನ, ವಿದ್ಯೆ ವಸತಿ, ಭಕ್ತಿಯ ಜ್ಞಾನ ದಾಸೋಹಗಳು ಇಂದಿಗೂ ಮುಂದುರಿಯುತ್ತಾ ಸಾಗಿದೆ.

ಅಟವಿ ಸ್ವಾಮಿಗಳ ನಂತರ ಉದ್ದಾನ ಶಿವಯೋಗಿಗಳು ಮಠದ ಉತ್ತರಾಧಿಕಾರಿಯಾದರು. ಅಟವಿ ಶ್ರೀಗಳಿಗೆ ಈಗಿನ ಚಿಕ್ಕತೊಟ್ಲುಕರೆ ಮಠದಲ್ಲಿ ಅವರ ಅಪೇಕ್ಷೆಯಂತೆ ಕ್ರಿಯಾ ಸಮಾಧಿಯನ್ನು ಮಾಡಲಾಗಿತ್ತು. ಉದ್ದಾನ ಶಿವಯೋಗಿಗಳ ಮೂಲ ಹೆಸರು ರುದ್ರಪ್ಪಇವರು ಲಕ್ಕೂರು ಗ್ರಾಮದವರು. ಹುಟ್ಟು ಮಹಿಮಾ ಶಾಲಿ, ಯೋಗ ಸಾಧನೆಯಲ್ಲಿ ಮೇರು ವ್ಯಕ್ತಿ, ಕುರಿ ಕಾಯುವುದು ಅವರ ಕಾಯಕ. ಒಂದೆರಡು ಬಾರಿ ಸಿದ್ದಗಂಗೆಗೆ ಬಂದು ಪೂಜೆ ಮಾಡಿಸಿಕೊಂಡು ಹೋಗಿದ್ದರು. ಮನೆಯಲ್ಲಿ ನಡೆದ ಸಣ್ಣ ಘಟನೆಯಿಂದ ಮನೆ ಬಿಟ್ಟು ಬಂದು ಸಿದ್ದಗಂಗೆಯ ಮಠದ ಸೇವೆಯಲ್ಲಿ ನಿರತರಾದರು.

ಅಟವಿ ಸ್ವಾಮಿಗಳ ಅಗ್ನಿ ಪರೀಕ್ಷೆಯಲ್ಲಿ ರುದ್ರಪ್ಪ ಉತ್ತೀರ್ಣರಾದರು. ಮಠಕ್ಕೆ ಹೇಳಿ ಮಾಡಿಸಿದಂತ ವ್ಯಕ್ತಿಯಾಗಿದ್ದರು. ಅಟವಿಸ್ವಾಮಿಗಳು ಶಿಷ್ಯನ ಹೆಗಲ ಮೇಲೆ ಸಂಪೂರ್ಣ ಕಾರ್ಯಭಾರ ವಹಿಸಿ ಸಂನ್ಯಾಸ ದೀಕ್ಷೆ ನೀಡಿ ಉದ್ದಾನ ಶಿವಯೋಗಿಗಳೆಂದು ಹೆಸರು ಬದಲಾಯಿಸಿದರು. ಉದ್ದಾನಪ್ಪನವರು ಬಹಳ ಕೋಪಿಷ್ಟರು ಇಟ್ಟರೆ ಶಾಪ ಕೊಟ್ಟರೆ ವರವೆಂಬಂತೆ ಕಾಣುತ್ತಿದ್ದರು.ಇವರ ಕಾಲದಲ್ಲಿ ಭಕ್ತರ ಸಂಖ್ಯೆ ಹೆಚ್ಚಿತು. ದಾಸೋಹದ ಖರ್ಚು ಹೆಚ್ಚಾಗತೊಡಗಿತು. 1905 ರಲ್ಲಿ ಜಾತ್ರೆ ದÀನಗಳ ಪರಿಷೆ ಆರಂಭಿಸಿದರು. ಮಠಕ್ಕೆ ದವಸ ಧಾನ್ಯ, ತರಕಾರಿ ಊಟದ ಎಲೆ ಪವಾಡ ಸದೃಶ್ಯವಾಗಿ ಹರಿದು ಬರಲು ಪ್ರಾರಂಭಿಸಿತು.ಇಂದಿಗೂ ದಾಸೋಹದ ಖರ್ಚು ವೆಚ್ಚ ಲೆಕ್ಕಹಾಕಿದ್ದಿಲ್ಲ.

ಮಠದ ಉತ್ತರಾಧಿಕಾರಿಯಾಗಿದ್ದ ಮರುಳಾರಾಧ್ಯರ  ಆತ್ಮೀಯ ಸ್ನೇಹಿತ ಯೋಗ್ಯ ದಕ್ಷ, ಪ್ರಾಮಾಣಿಕ ಮಾಗಡಿ ತಾಲ್ಲೂಕಿನ ವೀರಾಪುರದ ಶಿವಣ್ಣನನ್ನು ಗುರುತಿಸಿ ಮಠದ ಉತ್ತರಾಧಿಕಾರಿಯೆಂದು ಘೋಷಣೆಯಾಯಿತು. ಶಿವಣ್ಣನಿಗೆ ಆ ಕ್ಷಣಕ್ಕೆ ಏನೂ ತೋಚಲಿಲ್ಲ, ಮುಗ್ದ ಮಗುವಿನಂತೆ ಗುರುಗಳಿಗೆ ಒಪ್ಪಿಗೆಯೆಂದು ನಮಸ್ಕರಿಸಿದರು. ಉದ್ದಾನ ಶಿವಯೋಗಿಗಳು ಶಿವಣ್ಣ ನನ್ನ ಶ್ರೀಮಾನ್ ನಿರಂಜನ ಪ್ರಣವ ಸ್ವರೂಪಿ ಶ್ರೀ ಶಿವಕುಮಾರಸ್ವಾಮಿಗಳೆಂದು ನಾಮಕರಣ ಮಾಡಿದರು. ಅವರೇ ಡಾ.ಶ್ರೀ ಶಿವಕುಮಾರ ಮಹಾಸ್ವಾಮಿಗಳು.

# ವೀರಾಪುರದ ಮಹಾಯೋಗಿ:
ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ವೀರಾಪುರ ಗ್ರಾಮ ಶ್ರೀಗಳ ಜನ್ಮಸ್ಥಳ. ಇವರ ಮೂಲ ಹೆಸರು ಶಿವಣ್ಣ. ಏಪ್ರಿಲ್ 01-1908 ರಂದು ಹೊನ್ನೆಗೌಡ, ಗಂಗಮ್ಮ ದಂಪತಿಗಳ ಹದಿಮೂರು ಮಕ್ಕಳಲ್ಲಿ ಕಿರಿಯ ಮಗನಾಗಿ ಜನಿಸಿದ ಶಿವಣ್ಣ. ಸರ್ಕಾರಿ ಪ್ರೈಮರಿ ಶಾಲೆ ಹೊರತು ಪಡಿಸಿದರೆ ಯಾವ ಆಧುನಿಕ ಸೌಲಭ್ಯಗಳು ಇರಲಿಲ್ಲ. ಸಂಪ್ರದಾಯಸ್ಥ ಶರಣರ ಕುಟುಂಬದ ವಾತಾವರಣದಲ್ಲಿ ಬೆಳೆದ ಶಿವಣ್ಣ ಪ್ರಾಥಮಿಕ ಶಿಕ್ಷಣವನ್ನು ವೀರಾಪುರ ಸರ್ಕಾರಿ ಶಾಲೆ ಹಾಗೂ ಪಾಲನಹಳ್ಳಿ ಕೂಲಿ ಮಠದಲ್ಲಿ ಮುಗಿಸಿದರು.

ನಂತರ ಓದಿನಲ್ಲಿ ಹೆಚ್ಚು ಆಸಕ್ತಿವಹಿಸಿದ ಶಿವಣ್ಣ 1919 ರಲ್ಲಿ ಲೋಯರ್ ಸೆಕೆಂಡರಿ ಪರೀಕ್ಷೆಯಲ್ಲಿ ತೇರ್ಗಡೆಯಾದರು. ನಂತರ ತುಮಕೂರಿಗೆ ಬಂದು ಸರ್ಕಾರಿ ಶಾಲೆ ಸೇರಿಕೊಂಡರು.  1926ರಲ್ಲಿ ಮೆಟ್ರಿಕ್ಯುಲೇಷನ್ ತೇರ್ಗಡೆಯಾದರು. ಮಹಾಲಿಂಗಸ್ವಾಮಿಗಳು ಸಿದ್ದಗಂಗೆಯ ಪೂರ್ವ ನಿಯೋಜಿತ ಉತ್ತರಾಧಿಕಾರಿಯಾದ್ದರಿಂದ ಸಿದ್ದಗಂಗೆಯ ಪರಿಚಯವಾಯಿತು.

ತುಮಕೂರಿನಲ್ಲಿ ಪ್ಲೇಗ್ ರೋಗ ಹರಡಿದ್ದರಿಂದ ಸಿದ್ದಗಂಗಾ ಮಠಕ್ಕೆ ವಾಸ್ತವ್ಯ ಬದಲಿಸಲು ನಿರ್ಧರಿಸಿದ್ದರು. . ಆದರೆ ಉದ್ಧಾನ ಶಿವಯೋಗಿಗಳು ಇದಕ್ಕೆ ಅನುಮತಿ ನೀಡಲಿಲ್ಲ. ಇದರಿಂದ ಶೆಟ್ಟಿಹಳ್ಳಿಯಲ್ಲಿ ಬಾಡಿಗೆ ಮನೆ ಪಡೆದು ವಾಸವಿದ್ದು ವಿದ್ಯಾಭ್ಯಾಸ ಮುಂದುರೆಸಿದರು. ನಂತರ ಶ್ರೀಮಠದಲ್ಲಿ ಆಶ್ರಯ ಪಡೆದರು. ಸಿದ್ದಗಂಗಾ ಮಠದಲ್ಲಿ ಎಲ್ಲರ ವಿಸ್ವಾಸ ಗಳಿಸಿ ತುಮಕೂರಿನಲ್ಲಿ ನಡೆದ ಎಂಟ್ರೆನ್ಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಬೆಂಗಳೂರಿನ ತೋಟದಪ್ಪನವರ ವಿದ್ಯಾರ್ಥಿ ನಿಲಯದಲ್ಲಿ ಆಶ್ರಯ ಪಡೆದು 1927 ರಲ್ಲಿ ಸೆಂಟ್ರಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುರೆಸಿದರು.

ಉದ್ದಾನ ಶಿವಯೋಗಿಗಳ ಆಧ್ಯಾತ್ಮ ವಿಚಾರಗಳಿಂದ ಪ್ರಭಾವಿತರಾದ ಶಿವಣ್ಣ ಸೆಂಟ್ರಲ್ ಕಾಲೇಜಿನಲ್ಲಿ ಓದಿದ್ದುವಿಜ್ಞಾನ  ವಿಷಯವಾದರೆ, ಜೀವನದಲ್ಲಿ ಅಳವಡಿಸಿಕೊಂಡಿದ್ದು ಆಧ್ಯಾತ್ಮ ವಾಗಿತ್ತು.  ಉದ್ದಾನ ಶಿವಯೋಗಿಗಳ ಆಜ್ಞೆಯಂತೆ  ಶಿವಣ್ಣ ಉತ್ತರಾಧಿಕಾರಿಯಾಗಿ ನೇಮಕವಾದರು. 03-03-1930 ರಂದು ಶ್ರೀಉದ್ದಾನ ಶಿವಯೋಗಿಗಳು ಮಠದ ನಿರಂಜನ ಜಂಗಮಾಧಿಕಾರವನ್ನ ಶ್ರೀಶಿವಕುಮಾರ ಸ್ವಾಮಿಗಳಿಗೆ ಒಪ್ಪಿಸಿ ಆಶೀರ್ವದಿಸಿದರು.

ಅಂದಿನಿಂದ ಇಂದಿನವರೆಗೂ ಶ್ರೀ ಕ್ಷೇತ್ರದ ಮತ್ತು ಸಮಾಜದ ಹಿತಕ್ಕಾಗಿ ಅವಿಶ್ರಾಂತವಾಗಿ ಸದ್ಬೆಳಕು ಕರುಣಿಸುತ್ತಾ,ಸಹಸ್ರಾರು ಮಕ್ಕಳ ಭವಿಷ್ಯವನ್ನು ಬೆಳಗುತ್ತಾ ಮುನ್ನಡೆಸಿದರು. ಶಿವಕುಮಾರ ಮಹಾಸ್ವಾಮಿಗಳು ಮಠದ ಉತ್ತರಾಧಿಕಾರವನ್ನು ವಹಿಸಿಕೊಂಡ ಮೇಲೆ ಭೀಕರ ಬರಗಾಲದಂತಹ ಹಲವಾರು ಕಷ್ಟಗಳು ಎದುರಾದವು. ಈ ವೇಳೆ ಶ್ರೀಗಳು ಕುದುರೆಯೇರಿ ಹಳ್ಳಿ, ಹಳ್ಳಿಗಳಿಗೆ ತೆರಳಿ ಭಿಕ್ಷಾಟನೆ ಮಾಡಿ ಮಕ್ಕಳು ಹಾಗೂ ಬಂದ ಭಕ್ತಾದಿಗಳಿಗೆ ಅನ್ನ ಹಾಕಿ ಸಾಕಿದರು.

Facebook Comments

Sri Raghav

Admin