ಸಿದ್ದಗಂಗಾ ಶ್ರೀಗಳ ಸ್ಥಿತಿ ಚಿಂತಾಜನಕ, ಭಕ್ತರಲ್ಲಿ ಆತಂಕ, ಮಠದ ಸುತ್ತ ಹೈಅಲರ್ಟ್..!

ಈ ಸುದ್ದಿಯನ್ನು ಶೇರ್ ಮಾಡಿ

Siddaganga-Swamiji--01

ಬೆಂಗಳೂರು,ಜ.21- ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿರುವ ತ್ರಿವಿದ ದಾಸೋಹಿ, ಅಭಿನವ ಬಸವಣ್ಣ, ನಡೆದಾಡುವ ದೇವರು ತುಮಕೂರಿನ ಸಿದ್ದಗಂಗಾ ಮಠದ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯ ಏರುಪೇರಾಗಿದ್ದು, ಭಕ್ತರಲ್ಲಿ ಆತಂಕ ಮನೆ ಮಾಡಿದೆ.

ಇಂದು ಬೆಳಗ್ಗೆ ಇದ್ದಕ್ಕಿದಂತೆ ಶ್ರೀಗಳ ಪ್ರೋಟೀನ್ ಅಂಶ ಕಡಿಮೆಯಾಗಿ ಅವರ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದೆ ಎಂದು ಮಠದ ಆಪ್ತ ವೈದ್ಯ ಡಾ.ಪರಮೇಶ್ ತಿಳಿಸಿದ್ದಾರೆ. ಶ್ರೀಗಳು ಇನ್ನು ನೂರು ಕಾಲ ಬಾಳಲಿ ಎಂದು ನಾಡಿನಾದ್ಯಂತ ಭಕ್ತರು ಪ್ರಾರ್ಥನೆ, ಪೂಜೆ, ಹೋಮ, ಹವನದಲ್ಲಿ ತೊಡಗಿದ್ದಾರೆ.

ಶ್ರೀಗಳ ಆರೋಗ್ಯದಲ್ಲಿ ವ್ಯತ್ಯಾಸವಾಗುತ್ತಿದ್ದಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ವಿಧಾನಸಭೆಯ ಪ್ರತಿಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಗೃಹ ಸಚಿವ ಎಂ.ಬಿ.ಪಾಟೀಲ್ ಸೇರಿದಂತೆ ನಾಡಿನ ವಿವಿಧ ಮಠಗಳ ಮಠಾಧೀಶರು, ಗಣ್ಯರು ಮಠಕ್ಕೆ ದೌಡಾಯಿಸಿದ್ದಾರೆ.

ಸದ್ಯಕ್ಕೆ ಸಿದ್ದಗಂಗಾ ಮಠದಲ್ಲಿ ನೀರವ ಮೌನ ಆವರಿಸಿದ್ದು, ಶೀಗಳ ಆರೋಗ್ಯಕ್ಕಾಗಿ ವಿದ್ಯಾರ್ಥಿಗಳು ಪ್ರಾರ್ಥಿಸುತ್ತಿದ್ದಾರೆ. ವಿವಿಧ ಭಾಗಗಳಿಂದ ಅಪಾರ ಸಂಖ್ಯೆಯ ಗಣ್ಯರು ಮತ್ತು ಭಕ್ತರು ಮಠಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಬಿಗಿಭದ್ರತೆ ಕೈಗೊಳ್ಳಲಾಗಿದೆ.

ಐಜಿಪಿ ದಯಾನಂದ್ ನೇತೃತ್ವದಲ್ಲಿ ಬೆಂಗಳೂರು ಗ್ರಾಮಾಂತರ, ಚಿಕ್ಕಮಂಗಳೂರು, ಶಿವಮೊಗ್ಗ, ದಾವಣಗೆರೆ, ತುಮಕೂರು, ಚಿತ್ರದುರ್ಗ, ರಾಮನಗರ, ಹಾಸನ ಸೇರಿದಂತೆ ಒಟ್ಟು 10 ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳು, ಡಿವೈಎಸ್ಪಿ, ಇನ್‍ಸ್ಪೆಕ್ಟರ್, ಸಬ್‍ಇನ್‍ಸ್ಪೆಕ್ಟರ್ ಸೇರಿದಂತೆ ವಿವಿಧ ಶ್ರೇಣಿಯ ಅಧಿಕಾರಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ.

ನಿನ್ನೆ ಸಂಜೆವರೆಗೂ ಸ್ವಾಮೀಜಿಯವರ ಆರೋಗ್ಯ ಸಹಜ ಸ್ಥಿತಿಯಲ್ಲಿತ್ತು. ಇಂದು ಮುಂಜಾನೆ ಅವರ ಶ್ವಾಸಕೋಶ, ರಕ್ತದೊತ್ತಡ, ಹೃದಯ ಬಡಿತ, ಉಸಿರಾಟದಲ್ಲಿ ಏರುಪೇರಾಗಿ ಪ್ರೋಟೀನ್ ಅಂಶ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಶ್ರೀಗಳ ಆರೋಗ್ಯ ಸುಧಾರಣೆಗೆ ಎಲ್ಲ ಪ್ರಯತ್ನಗಳನ್ನು ಮುಂದುವರೆಸಲಾಗಿದೆ. ನುರಿತ ವೈದ್ಯರ ತಂಡ ಯಾವುದೇ ಕ್ಷಣದಲ್ಲೂ ಮಠಕ್ಕೆ ಆಗಮಿಸಬಹುದು. ಆದರೂ ಶ್ರೀಗಳ ಆರೋಗ್ಯ ಸ್ಥಿತಿ ಕುರಿತಂತೆ ಸದ್ಯದ ಪರಿಸ್ಥಿತಿಯಲ್ಲಿ ಏನನ್ನು ಹೇಳಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿರುವುದರಿಂದ ಆತಂಕ ನಿರ್ಮಾಣವಾಗಿದೆ.

ಮೂಲಗಳ ಪ್ರಕಾರ ಶ್ರೀಗಳ ಆಪ್ತ ವೈದ್ಯ ಡಾ.ಪರಮೇಶ್ ನೇತೃತ್ವದ ತಂಡ ಶ್ರೀಗಳಿಗೆ ಚಿಕಿತ್ಸೆ ಮುಂದುವರೆಸಿದ್ದು, ಬೆಳಗ್ಗಿನ ಜÁವ ಸುಮಾರು 4 ಗಂಟೆಗೆ ಶ್ರೀಗಳಿಗೆ ರಕ್ತದ ಒತ್ತಡ ಮತ್ತು ಉಸಿರಾಟದಲ್ಲಿ ಕೊಂಚ ಏರುಪೇರು ಕಂಡು ಬಂದಿದೆ. ಕೂಡಲೇ ಅವರಿಗೆ ಚಿಕಿತ್ಸೆ ನೀಡಲಾಯಿತಾದರೂ ಮತ್ತೆ ಅವರ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದೆ.

ಈಗ ಶ್ರೀಗಳಿಗೆ ಕೃತಕ ಉಸಿರಾಟ ನೀಡಲಾಗುತ್ತಿದೆ. ಆದರೆ ಶ್ರೀಗಳಿಗಳಿಗೆ ನಿಶ್ಯಕ್ತಿ ಹೆಚ್ಚಾಗಿದ್ದು, ನಿನ್ನೆ ಆರ್ಯುವೇದಿಕ್ ಚಿಕಿತ್ಸೆ ನೀಡಲಾಗಿದೆ. ಈಗ ತೀವ್ರ ಉಸಿರಾಟದ ತೊಂದರೆಯಿಂದ ಶ್ರೀಗಳು ಬಳಲುತ್ತಿದ್ದಾರೆ.

ಕೆಲ ದಿನಗಳ ಹಿಂದೆ ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿತ್ತು. ತಮ್ಮನ್ನು ನೋಡಲು ಬಂದ ಭಕ್ತರನ್ನು ಕಣ್ತೆರೆದು ವೀಕ್ಷಿಸಿದ್ದರು. ಅಷ್ಟೇ ಅಲ್ಲದೆ ಕಿರಿಯ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ಶ್ರೀಗಳ ಪಾದ ಸ್ಪರ್ಶಿಸಿ ನಮಸ್ಕರಿಸಿದ ವೇಳೆ ಕಣ್ಣು ತೆರೆದು ಮುಗುಳ್ನಕ್ಕಿದ್ದರು. ಕಿರಿಯ ಶ್ರೀಗಳ ಸಹಾಯದೊಂದಿಗೆ ಇಷ್ಟಲಿಂಗ ಪೂಜೆಯಲ್ಲಿ ಶಿವಕುಮಾರ ಸ್ವಾಮೀಜಿಗಳು ಭಾಗಿಯಾಗಿದ್ದಾರೆ.

ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರು ಆರೋಗ್ಯವಾಗಿದ್ದಾರೆ. ಭಕ್ತರು ಚಿಂತೆಪಡುವ ಅಗತ್ಯವಿಲ್ಲ ಎಂದು ಸಿದ್ದಗಂಗಾ ಮಠದ ಆಡಳಿತ ಮಂಡಳಿ ತನ್ನ ಫೇಸ್‍ಬುಕ್ ಪುಟದಲ್ಲಿ ಹೇಳಿಕೊಂಡಿದೆ.

# ಗಣ್ಯರ ದಂಡು:
ಇನ್ನು ಶ್ರೀಗಳ ಆರೋಗ್ಯ ಸ್ಥಿತಿ ಏರುಪೇರಾಗಿರುವ ಹಿನ್ನೆಲೆಯಲ್ಲಿ ಇಂದು ಸಿದ್ದಗಂಗಾ ಮಠಕ್ಕೆ ಎಚ್.ಡಿ.ಕುಮಾರಸ್ವಾಮಿ ತಮ್ಮ ಅಧಿಕೃತ ಕಾರ್ಯಕ್ರಮಗಳನ್ನು ರದ್ದುಪಡಿಸಿದ್ದಾರೆ.  ಹಾವೇರಿ ಜಿಲ್ಲೆ ಹಿರೇಕೆರೂರಿಗೆ ತೆರಳಬೇಕಾಗಿದ್ದ ಅವರು ಕಾರ್ಯಕ್ರಮವನ್ನು ರದ್ದುಗೊಳಿಸಿ ಮೈಸೂರಿನಿಂದ ನೇರವಾಗಿ ಮಠಕ್ಕೆ ಆಗಮಿಸುವರು.  ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಗೃಹ ಸಚಿವ ಎಂ.ಬಿ.ಪಾಟೀಲ್, ಸಚಿವರು, ಶಾಸಕರು ಸೇರಿದಂತೆ ಅನೇಕ ಗಣ್ಯರು ಮಠಕ್ಕೆ ಆಗಮಿಸಿದ್ದಾರೆ.

Facebook Comments

Sri Raghav

Admin