ಹಳ್ಳಿಮೇಷ್ಟ್ರು ಖ್ಯಾತಿಯ ನಟಿ ಮೇಲೆ ಹಲ್ಲೆ ನಡೆಸಿ ಹಣ, ಮೊಬೈಲ್ ಲೂಟಿ…!

ಈ ಸುದ್ದಿಯನ್ನು ಶೇರ್ ಮಾಡಿ

Halli-Mestru--01

ನವದೆಹಲಿ, ಜ.21-ಬಹುಭಾಷಾ ನಟಿ ಹಾಗೂ ಮಾಜಿ ಕ್ರಿಕೆಟ್ ಪಟು ಮನೋಜ್ ಪ್ರಭಾಕರ್ ಪತ್ನಿ ಫರೀನ್ ಪ್ರಭಾಕರ್(ಬಿಂದಿಯಾ) ಮೇಲೆ ದೆಹಲಿಯ ಕುಖ್ಯಾತ ಥಕ್ ಥಕ್ ದರೋಡೆಕೋರರ ತಂಡ ದಾಳಿ ನಡೆಸಿ ನಗದು ಮತ್ತು ಮೊಬೈಲ್ ದೋಚಿ ಪರಾರಿಯಾಗಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ. ಈ ಘಟನೆಯಲ್ಲಿ ಫರೀನ್ ಗಾಯಗೊಂಡಿದ್ದಾರೆ.

ಕನ್ನಡ, ತಮಿಳು, ಮಲೆಯಾಳಂ ಮತ್ತು ಹಿಂದಿ ಸಿನಿಮಾಗಳಲ್ಲಿ ನಟಿಸಿರುವ ಫರೀನ್, ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಮನೋಜ್ ಪ್ರಭಾಕರ್ ಅವರ ಪತ್ನಿ.   ರವಿಚಂದ್ರನ್ ಅಭಿನಯದ ಸೂಪರ್‍ಹಿಟ್ ಹಳ್ಳಿಮೇಷ್ಟು ಮತ್ತು ಡಾ ವಿಷ್ಣುವರ್ಧನ್ ನಟನೆಯ ರಾಯರು ಬಂದರು ಮಾವನ ಮನೆಗೆ ಸಿನಿಮಾದಲ್ಲಿ ಫರೀನ್ ನಾಯಕಿಯಾಗಿ ನಟಿಸಿದ್ದಾರೆ.

ಕನ್ನಡದಲ್ಲಿ ಬಿಂದಿಯಾ ಎಂದೇ ಹೆಸರಾಗಿದ್ದ ಫರೀನ್, ಮಾಧುರಿ ದೀಕ್ಷಿತ್ ತದ್ರೂಪು ಎಂದೂ ಸಹ ಗುರುತಿಸಿಕೊಂಡಿದ್ದರು.  ದಕ್ಷಿಣ ನವದೆಹಲಿಯ ಸರ್ವಪ್ರಿಯ ವಿಹಾರದ ನಿವಾಸಿಯಾದ ಫರೀನ್ ನಿನ್ನೆ ಸಾಕೇತ್ ಪ್ರದೇಶದಲ್ಲಿರುವ ಸೆಲೆಕ್ಟ್ ಸಿಟಿ ವಾಕ್ ಮಾಲ್‍ಗೆ ತೆರಳಿದ್ದಾಗ ಈ ಕೃತ್ಯ ನಡೆದಿದೆ.

ಕಾರು ಚಾಲನೆ ಮಾಡುತ್ತಿದ್ದ ಫರೀನ್ ಸಂಚಾರಿ ಸಿಗ್ನಲ್‍ನಲ್ಲಿ ಕಾರು ನಿಲ್ಲಿಸಿದಾಗ, ವಾಹನವನ್ನು ಸುತ್ತುವರಿದ ನಾಲ್ಕು ಮಂದಿ ದರೋಡೆಕೋರರು ಕಾರನ್ನು ಜಖಂಗೊಳಿಸಲು ಯತ್ನಿಸಿದರು.  ಇದನ್ನು ನಟಿ ಪ್ರಶ್ನಿಸಿದಾಗ ಸರಿಯಾಗಿ ಕಾರು ಚಾಲನೆ ಮಾಡಲು ಬರುವುದಿಲ್ಲ ಎಂದು ಕುಂಟು ನೆಪದಲ್ಲಿ ಜಗಳ ತೆಗೆದು ಆಕೆಯ ವ್ಯಾಲೆಟ್(16,000 ರೂ.ಗಳಿತ್ತು) ಮತ್ತು ದುಬಾರಿ ಮೊಬೈಲ್ ಫೋನ್ ಕಿತ್ತುಕೊಂಡು ಪರಾರಿಯಾಗಲು ಯತ್ನಿಸಿದರು.

ಇದಕ್ಕೆ ಫರೀನ್ ಅಡ್ಡಿಪಡಿಸಿದಾಗ ದರೋಡೆಕೋರರು ಅವರ ಮೇಲೆ ಹಲ್ಲೆ ನಡೆಸಿ ಹತ್ತಿರದಲ್ಲೇ ಇದ್ದ ಕಾರಿನಲ್ಲಿ ಪರಾರಿಯಾದರು ಎಂದು ಉಪ ಪೊಲೀಸ್ ಆಯುಕ್ತ ವಿಜಯ್ ಕುಮಾರ್ ತಿಳಿಸಿದ್ದಾರೆ. ಅಸ್ತಮಾದಿಂದ ಬಳಲುತ್ತಿರುವ ಫರೀನ್ ಅಸ್ವಸ್ಥರಾಗಿ ಕುಸಿದುಬಿದ್ದರು. ಸಮೀಪದಲ್ಲಿದ್ದ ಸೇನಾ ಅಧಿಕಾರಿಯೊಬ್ಬರು ದರೋಡೆಕೋರರ ಕಾರಿನ ಸಂಖ್ಯೆಯನ್ನು ಬರೆದುಕೊಂಡಿದ್ದಾರೆ. ಪೊಲೀಸರಿಗೆ ಸುದ್ದಿ ಮುಟ್ಟಿಸಿದ ಅವರು ನಟಿಗೆ ನೆರವಾದರು.

ಇದು ದೆಹಲಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ದರೋಡೆ, ಸುಲಿಗೆಯಂಥ ಅಪರಾಧಗಳನ್ನು ಎಸಗುತ್ತಿರುವ ಥಕ್ ಥಕ್ ಗ್ಯಾಂಗ್‍ನ ಕೃತ್ಯ ಎಂಬುದು ಸಾಬೀತಾಗಿದೆ.  ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿ ದರೋಡೆಕೋರರ ಪತ್ತೆಗೆ ಮುಂದಾಗಿದ್ದಾರೆ.

 

 

 

 

Facebook Comments

Sri Raghav

Admin