100 ದಿನಗಳಲ್ಲಿ ಮೋದಿ ದುರಾಡಳಿತದಿಂದ ಮುಕ್ತಿ : ರಾಹುಲ್
ನವದೆಹಲಿ, ಜ.21- ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಅಸಮರ್ಥ ಹಾಗೂ ದಬ್ಬಾಳಿಕೆಯ ಸರ್ಕಾರದಿಂದ ತುಳಿತಕ್ಕೊಳಗಾದ ಎಲ್ಲರಿಗೂ ಇನ್ನೂ 100 ದಿನಗಳೊಳಗೆ ಮುಕ್ತಿ ಸಿಗಲಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಬಿಜೆಪಿ ಸರ್ಕಾರದ ದಬ್ಬಾಳಿಕೆ ಹಾಗೂ ಅಸಮರ್ಥತೆಯಿಂದ ತುಳಿತಕ್ಕೊಳಗಾದ ರೈತರು, ದೀನ ದಲಿತರು, ನಿರುದ್ಯೋಗಿಗಳೆಲ್ಲರಿಗೂ ಇನ್ನೂ 100 ದಿನಗಳೊಳಗೆ ಮುಕ್ತಿ ಸಿಗಲಿದೆ ಎಂದು ಅವರು ತಿಳಿಸಿದ್ದಾರೆ.
ಕೊಲ್ಕತ್ತಾದಲ್ಲಿ ನಡೆದ ವಿರೋಧ ಪಕ್ಷಗಳ ಮೈತ್ರಿ ಕುರಿತು ಪ್ರಧಾನಿ ಮೋದಿ ಟೀಕೆ ಬೆನ್ನಲ್ಲೇ ರಾಹುಲ್ ಗಾಂಧಿ ಈ ರೀತಿಯ ಹೇಳಿಕೆ ನೀಡಿದ್ದಾರೆ.
ಸಂಕಷ್ಟದಲ್ಲಿರುವ ರೈತರು, ತುಳಿತಕ್ಕೊಳಗಾದ ದಲಿತರು, ಆದಿವಾಸಿಗಳು, ಉದ್ಯೋಗವಿಲ್ಲದೆ ಪರಾದಾಡುತ್ತಿರುವ ನಿರುದ್ಯೋಗಿಗಳು, ಸಣ್ಣ ವ್ಯಾಪಾರಸ್ಥರು ಇನ್ನೂ 100 ದಿನಗಳೊಳಗೆ ದಬ್ಬಾಳಿಕೆ ಹಾಗೂ ಅಸಮರ್ಥತೆಯ ಆಳ್ವಿಕೆಯಿಂದ ಮುಕ್ತರಾಗಲಿದ್ದಾರೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಕೋಲ್ಕತ್ತಾದಲ್ಲಿ ಟಿಎಂಸಿ ನಿನ್ನೆ ಆಯೋಜಿಸಿದ್ದ ಪ್ರತಿಪಕ್ಷಗಳ ಒಕ್ಕೂಟ ಭಾರತ ಸಮಾವೇಶ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದರು. ತಮ್ಮನ್ನು ರಕ್ಷಿಸಿಕೊಳ್ಳಲು ಅವರೆಲ್ಲಾ ಒಂದಾಗಿದ್ದಾರೆ ಎಂದು ನರೇಂದ್ರ ಮೋದಿ ಹೇಳಿದ್ದರು.