ಶರಣ ತತ್ವಗಳ ನೈಜ ಪ್ರತಿಪಾದಕರು ಶಿವಕುಮಾರ ಶ್ರೀಗಳು

ಈ ಸುದ್ದಿಯನ್ನು ಶೇರ್ ಮಾಡಿ

Swamiji--02

ಸಿದ್ದಗಂಗಾ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ತಾವು ಅಕ್ಷರ ಕಲಿಕೆ ಆರಂಭಿಸಿದ ದಿನದಿಂದಲೂ ಇಂದಿನ ವರೆಗೂ ಶರಣ ತತ್ವಗಳನ್ನು ಬಿಟ್ಟವರಲ್ಲ. ಬಸವಣ್ಣನವರ ಬದುಕನ್ನೇ ತಮ್ಮ ಜೀವನದ ಮಾರ್ಗದರ್ಶಕವನ್ನಾಗಿ ಮಾಡಿಕೊಂಡ ಶ್ರೀಗಳು.. ಇಂದಿಗೂ ಶರಣ ತತ್ವ ಸಾರಿದವರು.

ಆಡದಲೆ ಮಾಡುವವರು ರೂಢಿಯೊಳಗುತ್ತಮರು ಎಂಬುದನ್ನು ಸಿದ್ಧಗಂಗಾ ಶ್ರೀಗಳು ಸಾರಿದ ತತ್ವ, ಬದುಕುತ್ತಿರುವ ಪರಿ ಇಡೀ ವಿಶ್ವಕ್ಕೇ ಮಾದರಿ. ಸೋಹಂ ಎಂದೆನಿಸದೆ ದಾಸೋಹಂ ಎಂದೆನಿಸಯ್ಯ ಎಂಬ ಬಸವಣ್ಣನವರ ವಚನ ಸಾರವನ್ನು ಚಾಚೂ ತಪ್ಪದೆ ಕಾರ್ಯರೂಪಕ್ಕಿಳಿಸಿದವರಲ್ಲಿ ಶ್ರೀಗಳು ಅಗ್ರಗಣ್ಯರು. ಸಿದ್ಧಗಂಗಾ ಶ್ರೀಗಳು ಈ ನಾಡಿನ ಅಪರೂಪದ ಅಚ್ಚರಿ.

ತ್ರಿವಿಧ ದಾಸೋಹದ ಸಾಕಾರಮೂರ್ತಿ. ಪ್ರೀತಿ-ವಾತ್ಸಲ್ಯದ ಮಹಾಮೇರು. ಬಡವ-ಬಲ್ಲಿದರೆನ್ನದೆ ಎಲ್ಲರನ್ನೂ ಸಮಭಾವದಿಂದ ಕಾಣುವ ಸಮದರ್ಶಿ. ಜಾತಿ, ಮತ ಭೈೀದವಿಲ್ಲದೆ ತ್ರಿವಿಧ ದಾಸೋಹದಿಂದ ಜಗತ್ತಿನ ಜನರನ್ನೇ ಬೆರಗುಗೊಳಿಸಿದ ಶ್ರೀಗಳು, ಲಕ್ಷಾಂತರ ಜನರ ಬದುಕಿನ ನಂದಾದೀಪ. ¾ವಿಶ್ರಾಂತಿಯೆಂದರೆ ಗಂಟೆಗಟ್ಟಲೆ ಹಾಸಿಗೆ ಮೇಲೆ ಮಲಗಿ ನಿದ್ರಿಸುವುದಲ್ಲ.

ಹರಟೆ ಬಿಟ್ಟು ಬೇಸರವಿಲ್ಲದೆ ಹಲವು ಕಾರ್ಯಗಳಲ್ಲಿ ತೊಡಗಿಕೊಳ್ಳುವುದು. ಕೆಲಸದ ಪಲ್ಲಟವೇ ವಿಶ್ರಾಂತಿ ಎನ್ನುತ್ತಿದ್ದರು. ಸಿದ್ಧಗಂಗೆಯಲ್ಲಿ ಸಂಸ್ಕೃತ ಪಾಠ ಶಾಲೆಯಿಂದ ಆರಂಭವಾದ ಶಿಕ್ಷಣ ಯಜ್ಞ ನಿರಂತರವಾಗಿ ಮುಂದುವರಿದಿದೆ. ಸಿದ್ಧಗಂಗಾ ಶಿಕ್ಷಣ ಸಂಸ್ಥೆ ಮಹಾವೃಕ್ಷವಾಗಿ ಬೆಳೆದಿದೆ. ಪ್ರಾಥಮಿಕ ಶಾಲೆಯಿಂದ ಉನ್ನತ ಶಿಕ್ಷಣದವರೆಗೆ ಶೈಕ್ಷಣಿಕ ಅಭಿಯಾನ ಸಾಗಿದೆ.

ಮಠದಲ್ಲಿ ಎಲ್ಲ ಜಾತಿಗೆ ಸೇರಿದ 10 ಸಾವಿರಕ್ಕೂ ಹೆಚ್ಚು ಮಕ್ಕಳು ಆಶ್ರಯ ಪಡೆದಿದ್ದಾರೆ. ಮಠದ ಮಕ್ಕಳಿಗೆ ಮಾತೃಪ್ರೀತಿ ತೋರುವ ಶ್ರೀಗಳು ಶಿಕ್ಷಣದ ಜತೆಗೆ ಸಂಸ್ಕೃ, ಸಂಸ್ಕಾರವನ್ನು ಹೇಳಿಕೊಡುತ್ತಿದ್ದಾರೆ. 130 ವಿದ್ಯಾಸಂಸ್ಥೆಗಳ ಮೂಲಕ ಶೈಕ್ಷಣಿಕ ಅಭಿಯಾನವನ್ನೇ ನಡೆಸುತ್ತಿದ್ದವರು. ಈ ಮೂಲಕ ಐತಿಹಾಸಿಕ ದಾಖಲೆಯನ್ನೇ ನಿರ್ಮಿಸಿದ್ದಾರೆ.

ಒಂದು ತುತ್ತು ಅನ್ನದ ಹಿಂದೆ ಸಾವಿರಾರು ಮಂದಿಯ ಶ್ರಮದ ಶಕ್ತಿಯ ಸಾಗರವೇ ನಿಂತಿದೆ. ಅದನ್ನು ಅರಿತಾಗಲೇ ಮನುಷ್ಯ ಮನುಷ್ಯನಾಗುವುದು ಎಂಬ ಶ್ರೀಗಳ ಮಾತು ಮಠದ ವಿದ್ಯಾರ್ಥಿನಿಲಯಗಳಲ್ಲಿ ಆಶ್ರಯ ಪಡೆದಿರುವ, ಅದರ ನೇತೃತ್ವದಲ್ಲಿ ಕಾರ್ಯಾಚರಿಸುತ್ತಿರುವ ಶಿಕ್ಷಣ ಸಂಸ್ಥೆಗಳಿಂದ ಹೊರಬರುವ ಲಕ್ಷಾಂತರ ವಿದ್ಯಾರ್ಥಿಗಳ ಮನದಾಳಕ್ಕಿಳಿದರೆ ಅದಕ್ಕಿಂತ ದೊಡ್ಡ ಸಾಧನೆ ಇನ್ನೊಂದಿಲ್ಲ.

ಶ್ರೀ ಸಿದ್ಧಗಂಗಾ ಮಠವು ಶರಣತತ್ತ್ವ ಪ್ರಯೋಗ ಶಾಲೆಯಾಗಿದ್ದು, ಶರಣರ ತತ್ತ್ವಾದರ್ಶಗಳು ಶ್ರೀಮಠದ ಎಲ್ಲ ಕಾರ್ಯಗಳಲ್ಲಿಯೂ ಪ್ರತಿಫಲಿತವಾಗುತ್ತವೆ. ಕಾಯಕ, ದಾಸೊಹ, ಸಮಾನತೆಯ ಸಾಮಾಜಿಕ ಕ್ರಿಯಾಶೀಲತೆಯೂ, ಅಷ್ಟಾವರಣ, ಪಂಚಾಚಾರ, ಷಟ್ಸ್ಥಲಗಳ ಧಾರ್ಮಿಕ ಕ್ರಿಯಾಶೀಲತೆಯೂ ಇಲ್ಲಿನ ಚಿರಂತನ ಕಾರ್ಯಗಳಾಗಿದ್ದು ಇಲ್ಲಿ ವಿದ್ಯಾಬ್ಯಾಸ ಮಾಡುವ ವಿದ್ಯಾರ್ಥಿಗಳಿಗೆ, ಮಠಕ್ಕೆ ಬಂದು ಹೋಗುವ ಭಕ್ತಾದಿಗಳಿಗೆ, ಶ್ರೀ ಮಠದಲ್ಲಿ ವೃತ್ತಿ ಮಾಡುವ ಸಕಲರಿಗೂ ಸಿದ್ಧಗಂಗಾಮಠವು ಶರಣತತ್ತ್ವ ಪ್ರಯೋಗಶಾಲೆಯಂತೆ ಕಾಣುವುದರಲ್ಲಿ ಆಶ್ಚರ್ಯವಿಲ್ಲ.

Facebook Comments