ಒಂದು ಗಿಡ ನೆಡಲು 640ರೂ. ವೆಚ್ಚ..! ಹೇಗಿದೆ ನೋಡಿ ಬಿಬಿಎಂಪಿಯ ‘ಹಸಿರು ಪ್ರೇಮ’

ಈ ಸುದ್ದಿಯನ್ನು ಶೇರ್ ಮಾಡಿ

planting-a-plantಬೆಂಗಳೂರು, ಜ.22- ಕಾಂಕ್ರೀಟ್ ನಾಡಾಗುತ್ತಿರುವ ಬೆಂಗಳೂರನ್ನು ಮತ್ತೆ ಉದ್ಯಾನನಗರಿಯನ್ನಾಗಿ ಮಾಡಲು ಬಿಬಿಎಂಪಿ ಪಣ ತೊಟ್ಟಿದೆ. ಆದರೆ, ಇದಕ್ಕಾಗಿ ದುಂದುವೆಚ್ಚ ಮಾಡಲು ಮುಂದಾಗಿರುವ ಕ್ರಮ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಅಭಿವೃದ್ಧಿ ಕಾಮಗಾರಿಗಳಿಗಾಗಿ ನಗರದಲ್ಲಿರುವ ಗಿಡ-ಮರಗಳಿಗೆ ಕೊಡಲಿ ಹಾಕಿದ ನಂತರ ಉದ್ಯಾನನಗರಿ ಬೆಂಗಳೂರು ಕಾಂಕ್ರಿಟ್ ನಾಡಾಗಿ ಪರಿವರ್ತನೆಯಾಗಿತ್ತು.  ಮತ್ತೆ ಬೆಂಗಳೂರನ್ನು ಉದ್ಯಾನನಗರಿಯನ್ನಾಗಿ ಮಾಡಲು ಶಾಲಾ-ಕಾಲೇಜು ಆವರಣ, ರಸ್ತೆ ಬದಿ ಸರ್ಕಾರಿ ಹಾಗೂ ಮಿಲಿಟರಿ ಪ್ರದೇಶಗಳಲ್ಲಿ ಲಕ್ಷಾಂತರ ಗಿಡ ನೆಡಲು ಪಾಲಿಕೆ ಪಣ ತೊಟ್ಟಿತ್ತು.

ಆದರೆ, ತಾಂತ್ರಿಕ ಕಾರಣಗಳಿಂದ ಕಳೆದ ಎರಡು ವರ್ಷಗಳಿಂದ ಗಿಡ ನೆಡುವ ಕಾರ್ಯಕ್ಕೆ ಚಾಲನೆ ದೊರೆತಿರಲಿಲ್ಲ.
ಹೀಗಾಗಿ ಪ್ರಸಕ್ತ ಸಾಲಿನಲ್ಲಿ ಎರಡೂವರೆ ಲಕ್ಷ ಗಿಡ ನೆಡಲು ಪಾಲಿಕೆ ಮನಸ್ಸು ಮಾಡಿದೆ. ಆದರೆ, ಒಂದು ಗಿಡ ನೆಡಲು 640ರೂ. ಖರ್ಚು ಮಾಡುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಈಗಾಗಲೇ ಬಿಬಿಎಂಪಿಯಿಂದ ನೆಟ್ಟಿರುವ ಗಿಡಗಳ ಸಂರಕ್ಷಣೆ ಮಾಡದೆ ಶೇ.75ರಷ್ಟು ಗಿಡಗಳು ನಾಶವಾಗಿವೆ. ಈ ಬಾರಿ ಅಂತಹ ಸಮಸ್ಯೆ ಮತ್ತೆ ತಲೆದೋರದಂತೆ ಗಿಡ ನೆಡುವ ಗುತ್ತಿಗೆದಾರರಿಗೆ ಮೂರು ವರ್ಷಗಳ ನಿರ್ವಹಣೆಗೆ ನೀಡಲಾಗುತ್ತಿದೆ.

ಒಂದು ಗಿಡ ನೆಡಲು 640ರೂ.ಗಳಾದರೆ ಗಿಡಗಳನ್ನು ಮೂರು ವರ್ಷಗಳ ಕಾಲ ಸಂರಕ್ಷಣೆ ಮಾಡಲು ಒಂದು ಗಿಡಕ್ಕೆ 1290ರೂ.ಗಳನ್ನು ನೀಡಲಾಗುತ್ತಿದೆ. ಒಟ್ಟಾರೆ ಕಾಂಕ್ರಿಟ್ ನಾಡನ್ನು ಹಸಿರುಮಯಗೊಳಿಸಲು ಮುಂದಾಗಿರುವ ಬಿಬಿಎಂಪಿ ಎರಡೂವರೆ ಲಕ್ಷ ಗಿಡ ನೆಡಲು 50 ಕೋಟಿ ರೂ. ಖರ್ಚು ಮಾಡುತ್ತಿದೆ.

ಎಂಟು ವಲಯಗಳ ಶಾಲಾ-ಕಾಲೇಜು, ಸರ್ಕಾರಿ ಜಮೀನಿನಲ್ಲಿ ಎರಡೂವರೆ ಲಕ್ಷ ಸಸಿ ನೆಡಲು ಕೆಲವೇ ದಿನಗಳಲ್ಲಿ ಟೆಂಡರ್ ಕರೆಯಲಾಗುತ್ತಿದೆ ಎಂದು ಬಿಬಿಎಂಪಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಚೋಳರಾಜಣ್ಣ ತಿಳಿಸಿದ್ದಾರೆ.

ವಲಯವಾರು ಸಸಿ ನೆಡುವ ಕಾರ್ಯಕ್ಕೆ ಗುತ್ತಿಗೆ ಪಡೆಯುವ ಗುತ್ತಿಗೆದಾರರು ಅಗತ್ಯವಿರುವ ಅರ್ಹತೆ ಹೊಂದಿರಬೇಕು. ಒಂದು ಬಾರಿ ಗಿಡ ನೆಡುವ ಕಾರ್ಯ ಆರಂಭಿಸಿದರೆ ಯಾವುದೇ ಕಾರಣಕ್ಕೂ ಅವುಗಳನ್ನು ನಿಲ್ಲಿಸುವಂತಿಲ್ಲ. ಮೂರು ವರ್ಷಗಳ ಕಾಲ ಅದೇ ಗುತ್ತಿಗೆದಾರರೇ ಗಿಡಗಳ ಸಂರಕ್ಷಣೆ ಮಾಡಬೇಕು ಎಂಬ ಕೆಲ ಷರತ್ತುಗಳನ್ನು ವಿಧಿಸಲಾಗುತ್ತಿದೆ ಎನ್ನುತ್ತಾರೆ ಅವರು.

ಈ ಹಿಂದೆ ಕೂಡ ಲಕ್ಷಾಂತರ ಸಸಿ ಬೆಳೆಸಲಾಗುವುದು ಎಂದು ಹೇಳಿಕೆ ನೀಡಿ ಅದರಲ್ಲಿ ವಿಫಲವಾಗಿರುವ ಬಿಬಿಎಂಪಿ ಇದೀಗ ಮತ್ತೆ 50 ಕೋಟಿ ಖರ್ಚು ಮಾಡಿ ಗಿಡ ಬೆಳೆಸಲು ಮುಂದಾಗುತ್ತಿದೆ.

ಈ ಬಾರಿಯಾದರೂ ಸಾರ್ವಜನಿಕರ ತೆರಿಗೆ ಹಣ ಪೋಲಾಗದಂತೆ ಎಚ್ಚರ ವಹಿಸುವರೋ ಅಥವಾ ಕೆರೆಯಲ್ಲಿ ಹುಣಸೆಹಣ್ಣು ಹಿಂಡಿದಂತೆ ಮಾಡುವರೋ ಕಾಲವೇ ನಿರ್ಧರಿಸಲಿದೆ.

Facebook Comments