‘ಜನರ ಬ್ಯಾಂಕ್ ಖಾತೆಗಳಿಗೆ 5,80,000 ಕೋಟಿ ರೂ. ಜಮೆ ಮಾಡಿದ್ದೇವೆ’ : ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

Modi--0-1

ವಾರಣಾಸಿ, ಜ.22-ತಮ್ಮ ನೇತೃತ್ವದ ಕೇಂದ್ರ ಸರ್ಕಾರ ವಿವಿಧ ಯೋಜನೆಗಳ ಮೂಲಕ ದೇಶದ ಜನರಿಗೆ 5,80,000 ಕೋಟಿ ರೂ.ಗಳನ್ನು ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ತಾವು ಪ್ರತಿನಿಧಿಸಿರುವ ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ ಇಂದು 15ನೇ ಪ್ರವಾಸಿ ಭಾರತೀಯ ದಿವಸ್ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಎಂದಿನಂತೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಈ ಹಿಂದೆ ಕಾಂಗ್ರೆಸ್ ಸರ್ಕಾರದ ವ್ಯವಸ್ಥೆಯನ್ನು ನಾವು ಬದಲಿಸದೇ ಇದ್ದಿದ್ದರೆ ಜನರನ್ನು ತಲುಪಿದ 5,80,000 ಕೋಟಿ ರೂ.ಗಳಲ್ಲಿ 4,50,000 ಕೋಟಿ ರೂ.ಅನ್ಯರ ಪಾಲಾಗುತ್ತಿತ್ತು ಎಂದು ಅವರು ಹೇಳಿದರು.

ಅನಿವಾಸಿ ಭಾರತೀಯರು(ಎನ್‍ಆರ್‍ಐಗಳು) ಭಾರತದ ರಾಯಭಾರಿಗಳು ಎಂದು ಬಣ್ಣಿಸಿದ ಮೋದಿ, ಇವರು ನಮ್ಮ ದೇಶದ ಸಾಧನೆ-ಸಾಮಥ್ರ್ಯಗಳ ಸಂಕೇತ ಎಂದೂ ಪ್ರಶಂಸಿಸಿದರು. ಭಾರತೀಯ ಮೂಲದವರು ಮಾರಿಷಸ್, ಪೋರ್ಚುಗಲ್ ಮತ್ತು ಐರ್ಲೆಂಡ್‍ನಂಥ ದೇಶಗಳಲ್ಲಿ ಅತ್ಯುನ್ನತ ನಾಯಕತ್ವ ಅಲಂಕರಿಸಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.

ಸಿದ್ದಗಂಗಾ ಶ್ರೀಗಳಿಗೆ ಕಂಬನಿ ಮಿಡಿದ ಪ್ರಧಾನಿ :  ತುಮಕೂರಿನ ಸಿದ್ದಗಂಗಾ ಮಠದ ಶತಾಯುಷಿ , ಕರ್ನಾಟಕ ರತ್ನ ಡಾ.ಶಿವಕುಮಾರ ಸ್ವಾಮೀಜಿಯವರು ನನ್ನನ್ನು ಮಗನಂತೆ ನೋಡಿಕೊಳ್ಳುತ್ತಿದ್ದರು. ಅವರ ಸಮಾಜಸೇವೆ ನಾಗರೀಕ ಸಮಾಜಕ್ಕೆ ಎಂದೆಂದಿಗೂ ಆದರ್ಶಪ್ರಾಯ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.

ವಾರಾಣಸಿಯಲ್ಲಿ ಇಂದು ಆರಂಭವಾದ 15ನೇ ಪ್ರವಾಸಿ ಭಾರತೀಯ ದಿವಸ್ ಕಾರ್ಯಕ್ರಮಕ್ಕೂ ಮುನ್ನ ಸಿದ್ದಗಂಗಾ ಶ್ರೀಗಳಿಗೆ ಸಂತಾಪ ಸೂಚಿಸಿದ ಪ್ರಧಾನಿಯವರು ಶ್ರೀಗಳನ್ನು ನೆನೆದು ಒಂದು ಕ್ಷಣ ಭಾವುಕರಾದರು. ಸಿದ್ದಗಂಗಾ ಮಠದ ಶ್ರೀಗಳು ಭಕ್ತರ ಪಾಲಿನ ನಡೆದಾಡುವ ದೇವರು. ನಾನು ಕರ್ನಾಟಕಕ್ಕೆ ಭೇಟಿ ಮಾಡಿದ ವೇಳೆ ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆಯುತ್ತಿದ್ದೆ. ಅವರು ಲಿಂಗೈಕ್ಯರಾದ ಸುದ್ದಿ ಕೇಳಿ ನನ್ನ ಮನಸ್ಸಿಗೆ ತೀವ್ರ ಆಘಾತವಾಯಿತು ಎಂದು ವಿಷಾಧಿಸಿದರು.

ಸಿದ್ದಗಂಗಾ ಮಠಕ್ಕೆ ನಾನು ಹಲವಾರು ಬಾರಿ ಭೇಟಿ ನೀಡಿದ್ದೇನೆ. ಅವರ ಅನೇಕ ಅನೇಕ ಕಾರ್ಯಗಳಲ್ಲಿ ಭಾಗವಹಿಸುವ ಸೌಭಾಗ್ಯ ನನಗೆ ಸಿಕ್ಕಿತ್ತು. ಶ್ರೀಗಳಿಂದ ಆಶೀರ್ವಾದ ಪಡೆದ ನಾನೇ ಧನ್ಯ.ನನ್ನನ್ನು ಒಬ್ಬ ಮಗನಂತೆ ಕಾಣುತ್ತಿದ್ದರು. ಅವರನ್ನು ಕಳೆದುಕೊಂಡಿರುವುದು ಇಡೀ ನಾಗರೀಕ ಸಮಾಜಕ್ಕೆ ತುಂಬಲಾರದ ನಷ್ಟ ಎಂದು ಹೇಳಿದರು.

ಶತಾಯುಷಿಯಾಗಿದ್ದ ಶ್ರೀಗಳ ಸಮಾಜಸೇವೆ ವಿಶ್ವಕ್ಕೆ ಮಾದರಿ. ಅನ್ನ, ಅಕ್ಷರ ಮತ್ತು ವಸತಿ ನೀಡುವ ಮೂಲಕ ತ್ರಿವಿಧ ದಾಸೋಹಿ ಎನಿಸಿದ್ದ ಶ್ರೀಗಳ ಸೇವೆ ಎಂದೆಂದಿಗೂ ಅಜರಾಮರ. ಅವರ ಆದರ್ಶಗಳನ್ನು ಪಾಲಿಸುವ ಮೂಲಕ ಶ್ರೀಗಳ ಸನ್ಮಾರ್ಗದಲ್ಲೇ ನಡೆದು ಆತ್ಮಕ್ಕೆ ಶಾಂತಿ ಕೋರೋಣ ಎಂದು ಮೋದಿ ಸ್ಮರಿಸಿದರು.

 

Facebook Comments