ಸಿದ್ದಗಂಗಾ ಮಠದತ್ತ ಹರಿದುಬರುತ್ತಿದೆ ಭಾರಿ ಜನಸಾಗರ..!

ಈ ಸುದ್ದಿಯನ್ನು ಶೇರ್ ಮಾಡಿ

Siddagaga--01

ತುಮಕೂರು, ಜ.22-ಶತಮಾನದ ಶ್ರೇಷ್ಟ ಸಂತ ಡಾ.ಶ್ರೀ ಶಿವಕುಮಾರಸ್ವಾಮೀಜಿಗಳ ಅಂತಿಮ ದರ್ಶನಕ್ಕೆ ಲಕ್ಷಾಂತರ ಜನ ಸಾಗರೋಪಾದಿಯಲ್ಲಿ ಶ್ರೀಮಠದತ್ತ ಹರಿದು ಬಂದರು.  ನಿನ್ನೆ ಸಂಜೆಯಿಂದ ಶ್ರೀಗಳ ಲಿಂಗೈಕ್ಯ ಕಾಯದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಹಗಲು-ರಾತ್ರಿ ಪೂರ್ತಿ ಜನ ಬಿಡುವಿಲ್ಲದಂತೆ ಮಠದತ್ತ ಆಗಮಿಸಿ ಅಂತಿಮ ದರ್ಶನ ಪಡೆಯುತ್ತಿದ್ದಾರೆ.

ಮುಂಜಾಗ್ರತಾ ಕ್ರಮವಾಗಿ ತುಮಕೂರಿನೊಳಗೆ ಭಾರೀ ವಾಹನಗಳ ಸಂಚಾರ ನಿಷೇಧಿಸಿ ಸಾರ್ವಜನಿಕರಿಗಾಗಿ ಸ್ಥಳಾವಕಾಶ ಕಲ್ಪಿಸಲಾಗಿದೆ. ಆದರೆ ರಾಜ್ಯದ ಮೂಲೆ ಮೂಲೆಗಳಿಂದಷ್ಟೇ ಅಲ್ಲದೆ, ದೇಶದ ವಿವಿಧೆಡೆಗಳಿಂದಲೂ ಜನಸಾಗರ ಹರಿದು ಬರುತ್ತಿರುವುದರಿಂದ ಸ್ಥಳಾವಕಾಶದ ಅಭಾವ ಎದ್ದು ಕಾಣುತ್ತಿದೆ.

ವ್ಯವಸ್ಥಿತವಾಗಿ ಬ್ಯಾರಿಕೇಡ್‍ಗಳನ್ನು ನಿರ್ಮಿಸಿ ಅತ್ಯಂತ ವ್ಯವಸ್ಥಿತವಾಗಿ ಸರದಿ ಸಾಲಿನಲ್ಲಿ ಜನ ಸಾಗಲು ಪೊಲೀಸರು ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಆದರೂ ವಜ್ರಮಹೋತ್ಸವ ಕಟ್ಟಡದ ಮುಂಭಾಗದಲ್ಲಿನ ಮೈದಾನದಲ್ಲಿ ನೂಕು ನುಗ್ಗಲು ಉಂಟಾಗಿತ್ತು.

ಹಿಂದೆಂದೂ ಕಾಣದಷ್ಟು ಜನಸ್ತೋಮ ಶ್ರೀಗಳ ಅಂತಿಮ ದರ್ಶನಕ್ಕಾಗಿ ಆಗಮಿಸಿತ್ತು. ಬೆಂಗಳೂರಿನ ಯಶವಂತಪುರದಿಂದ 4 ವಿಶೇಷ ರೈಲುಗಳನ್ನು ವ್ಯವಸ್ಥೆ ಮಾಡಲಾಗಿತ್ತು. ಕೆಎಸ್‍ಆರ್‍ಟಿಸಿ ಕೂಡ ವಿಶೇಷ ಬಸ್ ವ್ಯವಸ್ಥೆ ಮಾಡಿತ್ತು. ರಾಜ್ಯದ ವಿವಿಧ ಮೂಲೆಗಳಿಂದ ಜನ ಆಗಮಿಸಲು ಕೆಲವು ವಿಶೇಷ ಬಸ್ ಸೌಕರ್ಯ ಕಲ್ಪಿಸಲಾಗಿದೆ. ತುಮಕೂರು ಜಿಲ್ಲೆಯ ಹಳ್ಳಿ ಹಳ್ಳಿಗೂ ಸಾರಿಗೆ, ಖಾಸಗಿ ಬಸ್‍ಗಳು ಸಂಚರಿಸಿದ್ದು, ಜನರ ಆಗಮನಕ್ಕೆ ಅನುಕೂಲ ಕಲ್ಪಿಸಿವೆ.

ಇಷ್ಟೇ ಅಲ್ಲದೆ, ಕೆಲವು ಖಾಸಗಿ ವಾಹನಗಳ ಮಾಲೀಕರು ಕೂಡ ಉಚಿತ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ. ಅಂತಿಮ ದರ್ಶನಕ್ಕಾಗಿ ಆಗಮಿಸಿದ ಭಕ್ತರಿಗೆ ಬಹಳಷ್ಟು ಹೊಟೇಲ್‍ಗಳು ಉಚಿತ ಊಟ, ತಿಂಡಿ ವ್ಯವಸ್ಥೆ ಮಾಡಿವೆ. ಅಲ್ಲಲ್ಲಿ ಸಾರ್ವಜನಿಕರೇ ಖುದ್ದಾಗಿ ಭಕ್ತರಿಗೆ ಕುಡಿಯುವ, ನೀರು, ಮಜ್ಜಿಗೆ, ಪಾನಕದ ವ್ಯವಸ್ಥೆ ಕಲ್ಪಿಸಿ ದಣಿವಾರಿಸುವ ಪ್ರಯತ್ನ ನಡೆಸಿದ್ದಾರೆ.

ಶ್ರೀಗಳ ಅಂತಿಮ ದರ್ಶನ ಪಡೆದವರೆಲ್ಲರೂ ದುಃಖಭರಿತ ಭಾವೋದ್ವೇಗದಿಂದ ಉಮ್ಮಳಿಸುವುದು, ದುಃಖಿಸುವ ದೃಶ್ಯ ಹೃದಯ ಹಿಂಡುವಂತಿತ್ತು.  ಶ್ರೀಮಠದ ವಿದ್ಯಾರ್ಥಿಗಳ ದುಃಖ ಮುಗಿಲುಮುಟ್ಟಿತ್ತು. ನಡೆದಾಡುವ ದೇವರ ಅಂತಿಮ ದರ್ಶನಕ್ಕೆ ಸುಮಾರು 5 ಕಿಲೋ ಮೀಟರ್‍ಗಳವರೆಗೂ ಜನ ಸರದಿ ಸಾಲಿನಲ್ಲಿ ನಿಂತಿದ್ದರು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸುಮಾರು 20 ಸಾವಿರಕ್ಕೂ ಹೆಚ್ಚು ಮಂದಿ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು.

ವಾಹನಗಳ ಸಂಚಾರವನ್ನು ನಿರ್ಬಂಧಿಸಿದ್ದರಿಂದ ಶಿವಮೊಗ್ಗ-ಬೆಂಗಳೂರು ಮಾರ್ಗದ ಬಸ್‍ಗಳು ದಾಬಸ್‍ಪೇಟೆ, ಹೊನ್ನುಡಿಕೆ ಮಾರ್ಗವಾಗಿ ಸಂಚರಿಸುತ್ತಿದ್ದವು. ಇನ್ನು ಉತ್ತರ ಕರ್ನಾಟಕ ಭಾಗಕ್ಕೆ ಸಂಚರಿಸುವ ಬಸ್‍ಗಳನ್ನು ದಾಬಸ್‍ಪೇಟೆ ಬಳಿಯೇ ಮಾರ್ಗ ಬದಲಾವಣೆ ಮಾಡಲಾಗಿತ್ತು.

ಶ್ರೀಗಳ ಅಂತಿಮ ದರ್ಶನಕ್ಕಾಗಿ ಆಗಮಿಸುವ ಭಕ್ತರ ವಾಹನಗಳಿಗೂ ದೂರದ ಸ್ಥಳದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಅಂತಿಮ ದರ್ಶನಕ್ಕೆಂದು ನಿನ್ನೆಯಿಂದ ಆಗಮಿಸಿರುವ ಬಹಳಷ್ಟು ಭಕ್ತರು ಮರಳಿ ವಾಪಸ್ ಹೋಗದೆ ಅಂತಿಮ ವಿಧಿವಿಧಾನಕ್ಕಾಗಿ ಕಾಯುತ್ತ ಕುಳಿತಿದ್ದರಿಂದ ಜನರ ಜಮಾವಣೆ ಹೆಚ್ಚಾಗಿತ್ತು.

ಶ್ರೀಮಠದ ಆವರಣ ಕ್ಯಾತ್ಸಂದ್ರ, ಹಳೇ ಎಚ್‍ಎಂಟಿ, ಬಂಡೆ ಮಠ, ಬಡ್ಡಿಹಳ್ಳಿ, ಬಟವಾಡಿ ಸೇರಿದಂತೆ ಸುತ್ತೆಲ್ಲ ಜನಸಾಗರವೇ ತುಂಬಿ ತುಳುಕುತ್ತಿತ್ತು. ಬಹಳಷ್ಟು ಮಂದಿ ನಿನ್ನೆ ರಾತ್ರಿಯಿಂದಲೂ ಉಪವಾಸವಿದ್ದೇ ಶ್ರೀಗಳ ಅಂತಿಮ ದರ್ಶನ ಪಡೆದಿದ್ದು, ನಡೆದಾಡುವ ದೇವರ ಮೇಲಿನ ಭಕ್ತಿಗೆ ಸಾಕ್ಷಿಯಾಗಿತ್ತು.

#  ಇಂದು ಬೆಂಗಳೂರು-ತುಮಕೂರು ಹೈವೆ ಟೋಲ್ ಪ್ರವೇಶ ಉಚಿತ
ತುಮಕೂರು, ಜ.22- ಸಿದ್ಧಗಂಗಾ ಶ್ರೀಗಳು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಶ್ರೀಗಳಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಬೆಂಗಳೂರಿನಿಂದ -ತುಮಕೂರಿನ ಕ್ಯಾತಸಂದ್ರದ ತನಕ ಇಂದು ಬೆಳಗ್ಗೆ 5 ರಿಂದ ಮಧ್ಯರಾತ್ರಿ 12 ಗಂಟೆವರೆಗೂ ಎಲ್ಲ ಟೋಲ್ ಗೇಟ್ ತೆರೆದಿರುವಂತೆ ಎನ್‍ಎಚ್‍ಎಐ ಸೂಚನೆ ನೀಡಿದೆ.
ಇನ್ನು ಎನ್‍ಎಚ್‍ಎಐ ಸೂಚನೆ ಹಿನ್ನೆಲೆಯಲ್ಲಿ ಎಲ್ಲ ಟೋಲ್ ಗಳನ್ನು ತೆರೆದಿದ್ದು, ಶ್ರೀ ಮಠಕ್ಕೆ ಭಕ್ತರು ಆಗಮಿಸುವುದಕ್ಕೆ ಸುಲಭವಾಗಿದೆ ಎಂದು ಭಕ್ತರು ಹೇಳಿದ್ದಾರೆ.

Facebook Comments

Sri Raghav

Admin

3 thoughts on “ಸಿದ್ದಗಂಗಾ ಮಠದತ್ತ ಹರಿದುಬರುತ್ತಿದೆ ಭಾರಿ ಜನಸಾಗರ..!

Comments are closed.