ರಾಷ್ಟ್ರಮಟ್ಟದಲ್ಲಿ ಕೀರ್ತಿ ಪತಾಕೆ ಹಾರಿಸಿದ ತುಮಕೂರಿನ ಅಂಗನವಾಡಿ ಕಾರ್ಯಕರ್ತೆ

ಈ ಸುದ್ದಿಯನ್ನು ಶೇರ್ ಮಾಡಿ

Women--01

ಅಂಗನವಾಡಿ ಕೇಂದ್ರ ಎಂದರೆ ನಿರ್ಲಕ್ಷ್ಯ ತೊರುತ್ತ ಖಾಸಗಿ ಪ್ಲೇಹೋಂಗಳಿಗೆ ಮಕ್ಕಳನ್ನು ಸೇರಿಸುವ ಪೋಷಕರಿಗೆ ನಮ್ಮ ಅಂಗನವಾಡಿ ಕೇಂದ್ರ ಯಾವುದರಲ್ಲೂ ಕಡಿಮೆ ಇಲ್ಲ ಎಂಬುದನ್ನು ತೋರಿಸಿ ರಾಷ್ಟ್ರಮಟ್ಟದಲ್ಲಿ ಕೀರ್ತಿ ಪತಾಕೆ ಹಾರುವಂತೆ ಮಾಡಿದ ಸಾಧಕಿ ತುಮಕೂರು ಜಿಲ್ಲೆಯ ಕೆ.ಮಹದೇವಮ್ಮ.

ಒಂದು ಅಂಗನವಾಡಿ ಕೇಂದ್ರ ಹೇಗಿರಬೇಕು ಎಂಬುದನ್ನು ಇಡೀ ಜಿಲ್ಲೆಗೆ ತೋರಿಸಿ ಕೊಡುವ ಮೂಲಕ ಶಿರಾ ತಾಲೂಕು ಗೌಡಗೆರೆ ಹೋಬಳಿಯ ತಾವರೆಕೆರೆ ವೃತ್ತದ ಮಾರನಗೆರೆ ಅಂಗನವಾಡಿ ಕೇಂದ್ರ ಮಾದರಿಯಾಗಿದೆ.

ನಿಜಕ್ಕೂ ಇಲ್ಲಿನ ಅಂಗನವಾಡಿ ಕೇಂದ್ರದಲ್ಲಿ 26 ಮಕ್ಕಳಿದ್ದಾರೆ. ಸರ್ಕಾರ ಮಕ್ಕಳ ಆರೋಗ್ಯ ಹಾಗೂ ಪೌಷ್ಠಿಕತೆ ಉದ್ದೇಶದಿಂದ ಶಿಶು ಅಭಿವೃದ್ಧಿ ಇಲಾಖೆ ಮೂಲಕ ಅಂಗನವಾಡಿ ಕೇಂದ್ರ ತೆರೆದು ಮಕ್ಕಳಿಗೆ ಸಮಗ್ರ ಆಹಾರ ಪೂರೈಕೆ ಸೇರಿದಂತೆ ಹಲವು ಯಶಸ್ವಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ.

ಇದು ಯಶಸ್ವಿಯಾಗಬೇಕಾದರೆ ಅಂಗನವಾಡಿಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಯಕರ್ತೆಯರಿಗೆ ಸಾಮಾಜಿಕ ಹಿತಾಸಕ್ತಿ ಇರಬೇಕು. ಆಗ ಸರ್ಕಾರದ ಕಾರ್ಯಕ್ರಮಗಳು ಕೂಡ ಯಶಸ್ವಿಯಾಗುತ್ತವೆ. ಇದನ್ನು ಕಾರ್ಯಕರ್ತೆ ಕೆ.ಮಹದೇವಮ್ಮ ಯಶಸ್ವಿಯಾಗಿ ನಿರ್ವಹಿಸಿಕೊಂಡು ಬರುತ್ತಿದ್ದಾರೆ.

ಇದಕ್ಕೆ ಇವರಿಗೆ ಸಂದಿರುವ ರಾಷ್ಟ್ರ ಪ್ರಶಸ್ತಿ ಸಾಕ್ಷಿಯಾಗಿದೆ. ಗೌಡಗೆರೆ ಹೋಬಳಿಯ ಮಾರನಗೆರೆ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಕೆ.ಮಹದೇವಮ್ಮಗೆ ಅತ್ಯುತ್ತಮ ಅಂಗನವಾಡಿ ಕಾರ್ಯಕರ್ತೆ ಎಂಬ ಕಾರಣಕ್ಕೆ ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಿರುವುದು ತುಮಕೂರು ಜಿಲ್ಲೆಯಲ್ಲಿಯೇ ಪ್ರಥಮ ಎನ್ನಬಹುದು.

ಗರ್ಭಿಣಿಯರಿಗೆ ಪೌಷ್ಠಿಕ ಆಹಾರ ಮನೆ ಮುಂದೆ ಸಿಗುವಂತೆ ಅರಿವು ಮೂಡಿಸಿದ ಪರಿಸರ ಪ್ರೇಮಿ ಈಕೆ. ಅಂಗನವಾಡಿ ಕರ್ತವ್ಯ ಮುಗಿದ ಮೇಲೆ ಸರ್ಕಾರ ನೀಡುವಂತಹ ಆಹಾರ ಪದಾರ್ಥದ ಕವರ್‍ಗಳು ಖಾಲಿಯಾದ ಮೇಲೆ ಆ ಪ್ಲಾಸ್ಟಿಕ್ ಕವರ್‍ಗಳಲ್ಲಿ ಮಣ್ಣು ತುಂಬಿ ನುಗ್ಗೆ, ಕರಿಬೇವು, ಪಪ್ಪಾಯಿ ಸೇರಿದಂತೆ ಹಲವು ರೀತಿಯ ಸಸಿಗಳನ್ನು ಬೆಳೆಸಿ ಮಕ್ಕಳ ತಾಯಂದಿರಿಗೆ, ಗ್ರಾಮದ ಮಹಿಳೆಯರಿಗೆ ಕೊಡುವ ಮೂಲಕ ಸಸಿ ಬೆಳೆಸುವ ಕಾರ್ಯವನ್ನೂ ಸಹ ಮಾಡುತ್ತಿರುವ ಇವರ ಪರಿಸರ ಕಾಳಜಿ ಮೆಚ್ಚುವಂಥದ್ದು.

ಇದಲ್ಲದೆ ಗ್ರಾಮದ ಸ್ವಚ್ಛತೆ, ಶೌಚಾಲಯ ನಿರ್ಮಾಣ, ಸ್ತ್ರೀಶಕ್ತಿ ಸಂಘಗಳ ಪ್ರಗತಿಗೆ ಪರಿಣಾಮಕಾರಿಯಾಗಿ ಜನರಲ್ಲಿ ಅರಿವು ಮೂಡಿಸಿ ಮಹಿಳೆಯರನ್ನು ಸಾವಲಂಬಿಗಳನ್ನಾಗಿಸುವ ಕಾರ್ಯವನ್ನೂ ಈಕೆ ಮಾಡುತ್ತಿದ್ದಾರೆ.

ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆ ನೀಡಿದ ಅಂಗನವಾಡಿ ಕಾರ್ಯಕರ್ತೆ ಹೊಣೆಗಾರಿಕೆಯನ್ನು ಮಕ್ಕಳ ಸರ್ವತೋಮುಖ ಕಲಿಕೆ ಹಾಗೂ ಸರ್ಕಾರದ ಯೋಜನೆಗಳ ಸಂಪೂರ್ಣ ಸದ್ಬಳಕೆ ಮಾಡುವುದರ ಜತೆಗೆ ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ಈ ಸೇವೆಗೆ ಅತ್ಯುತ್ತಮ ಅಂಗನವಾಡಿ ಕಾರ್ಯಕರ್ತೆ ಪ್ರಶಸ್ತಿ ಲಭಿಸಿರುವುದು ಅಭಿನಂದನಾರ್ಹ.

ಶಿರಾ ತಾಲೂಕಿನ ಕುಗ್ರಾಮವಾದ ಮಾರನಗೆರೆ ಕೇವಲ 60 ಮನೆಗಳಿರುವ ಪುಟ್ಟಗ್ರಾಮ. ಇಲ್ಲಿನ ಅಂಗನವಾಡಿಯಲ್ಲಿ ಕಾರ್ಯಕರ್ತೆಯಾಗಿರುವ ಕೆ.ಮಹದೇವಮ್ಮ ಅವರು ಬಿಎ ಪದವಿ ಪಡೆದಿದ್ದು, 32 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಆರಂಭದಲ್ಲಿ ಮಾಸಿಕ ಭತ್ಯೆ ಕೇವಲ 250 ರೂ. ಪಡೆಯುತ್ತಿದ್ದ ಇವರು ಈಗಲೂ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇವರ ನಿಸ್ಪೃಹ ಸೇವೆಯನ್ನು ಕೇಂದ್ರ ಸರ್ಕಾರ ಗುರುತಿಸಿದೆ. ರಾಷ್ಟ್ರ ಪ್ರಶಸ್ತಿ ಜತೆಗೆ 50 ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರವನ್ನು ದೆಹಲಿಯಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮೇನಕಾ ಗಾಂಧಿ ನೀಡಿದ್ದಾರೆ. ಇದಲ್ಲದೆ, ರಾಜ್ಯ ಸರ್ಕಾರ ಕೂಡ ಉತ್ತಮ ಅಂಗನವಾಡಿ ಕಾರ್ಯಕರ್ತೆ ಎಂಬ ಪ್ರಶಸ್ತಿಗೆ ಕೆ.ಮಹದೇವಮ್ಮ ಆಯ್ಕೆ ಮಾಡಿರುವುದು ಪ್ರಾಮಾಣಿಕ ಸೇವೆಗೆ ಸಂದ ಗೌರವವಾಗಿದೆ ಎಂಬುದು ಸಾರ್ವಜನಿಕರ ಆಭಿಪ್ರಾಯವಾಗಿದೆ.

ಶಿಶು ಅಭಿವೃದ್ಧಿ ಯೋಜನೆಗಳ ಸಮಗ್ರ ನಿರ್ವಹಣೆ: ಅಂಗನವಾಡಿ ಕಾರ್ಯಕರ್ತೆ ಕೆ.ಮಹದೇವಮ್ಮ ಅವರು ಅಂಗನವಾಡಿ ಕರ್ತವ್ಯವನ್ನು ವಿಧೇಯತೆಯಿಂದ ಉತ್ತಮವಾಗಿ ನಿರ್ವಹಿಸುತ್ತ ಬಂದಿದ್ದಾರೆ. ಅಂಗನವಾಡಿ ಕೇಂದ್ರದಲ್ಲಿ ಶಾಲಾ ಪೂರ್ವ ಶಿಕ್ಷಣಕ್ಕೆ ಸಂಬಂಧಿಸಿದಂತೆ 42 ವಿಷಯಗಳನ್ನು ಒಳಗೊಂಡಂತೆ ಗೋಡೆ ಬರಹ, ಮಕ್ಕಳ ದಿನಾಚರಣೆ, ಬಾಲಮೇಳ, ಮಕ್ಕಳ ಹುಟ್ಟುಹಬ್ಬ, ಮಕ್ಕಳಿಗೆ ವ್ಯಾಯಾಮ ಮಾಡಿಸುವುದು, ಕ್ರೀಡಾ ಚಟುವಟಿಕೆ, ಪರಿಸರದ ಬಗ್ಗೆ ಬೋಧನೆ, ಭಾಷಾ ಬೆಳವಣಿಗೆ, ಅಕ್ಷರಾಭ್ಯಾಸ, ಕ್ರಿಯಾತ್ಮಕ ಚಟುವಟಿಕೆ, ಎಲ್ಲಾ ರಾಷ್ಟ್ರೀಯ ಹಾಗೂ ನಾಡ ಹಬ್ಬಗಳ ಆಚರಣೆ, ತಾಯಂದಿರ ಸಭೆ, ಪೌಷ್ಠಿಕ ಶಿಬಿರ, ಸಮನ್ವಯ ಸಮಿತಿ ಸಭೆ, ಸ್ತ್ರೀಶಕ್ತಿ ಸಂಘಗಳ ಸಭೆಗಳನ್ನು ಪ್ರತಿ ತಿಂಗಳು ನಿರ್ವಹಿಸಿದ್ದಾರೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸೇವೆಗಳು ಹಾಗೂ ಉದ್ದೇಶಗಳು ಯಶಸ್ವಿಯಾಗಲು ಕಾರ್ಯ ನಿರ್ವಹಿಸಿದ್ದಾರೆ ಎಂದು ಮಹಿಳಾ ಮತ್ತುಮಕ್ಕಳ ಅಭಿವೃದ್ಧಿ ಅಧಿಕಾರಿ ಎ.ಎಂ.ಬಸವರಾಜು ಹೇಳುತ್ತಾರೆ.

ಕೆ.ಮಹದೇವಮ್ಮ ಅವರ ಶಿಶು ಮತ್ತು ಗರ್ಭಿಣಿಯರ ಆರೈಕೆ ಜತೆಗೆ ಮಾತೃ ಹೃದಯದ ಸೇವೆ ಇತರರಿಗೆ ಮಾದರಿ. ಇಲಾಖೆ ನೀಡಿದ ಆಹಾರದ ಪ್ಯಾಕೆಟ್ ವ್ಯರ್ಥವಾಗಬಾರದೆಂದು ಅದರಲ್ಲಿ ಮಣ್ಣು ತುಂಬಿ ಸಸಿ ನೆಟ್ಟು ಗರ್ಭಿಣಿ ಮತ್ತು ಬಾಣಂತಿಯರಿಗೆ ಹಂಚುವುದು ಇವರಿಗೆ ಪೌಷ್ಠಿಕ ಆಹಾರದ ಬಗ್ಗೆ ಇರುವ ಕಾಳಜಿ ತೊರಿಸುತ್ತದೆ. ಅವರಿಗೆ ರಾಷ್ಟ್ರಪ್ರಶಸ್ತಿ ದೊರೆತಿರುವುದು ಸಂತೋಷ ತಂದಿದೆ. ಇದು ಶಿರಾ ತಾಲೂಕಿಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಸಾರ್ವಜನಿಕರು ಕೂಡ ಸಂತಸ ವ್ಯಕ್ತಪಡಿಸಿದ್ದು, ಇವರು ಇತರೆ ಅಂಗನವಾಡಿ ಕಾರ್ಯಕರ್ತೆಯರಿಗೆ ಮಾದರಿಯಾಗಿದ್ದಾರೆ ಎನ್ನುತ್ತಾರೆ.

Facebook Comments