ಶ್ರೀಗಳ ಸ್ಫೂರ್ತಿಯ ಸೆಲೆಯಾಗಿದ್ದ ಚಿಕ್ಕಬಳ್ಳಾಪುರ ಕೊಡುಗೈ ದಾನಿಗಳು

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಬಳ್ಳಾಪುರ, ಜ.23- ಶತಮಾನದ ಸಂತ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೂ ಚಿಕ್ಕಬಳ್ಳಾಪುರಕ್ಕೂ ಅವಿನಾಭಾವ ನಂಟು. ಕಳೆದ ಮೂರು ದಿನಗಳಿಂದ ಲಕ್ಷಾಂತರ ಮಂದಿ ಶ್ರೀಗಳ ಲಿಂಗೈಕ್ಯದಿಂದ ತೊಳಲಿದ್ದು, ಅಕ್ಷರಶಃ ಮೂರನೆ ದಿನವೂ ಶೋಕಸಾಗರದಲ್ಲಿ ಚಿಕ್ಕಬಳ್ಳಾಪುರ ಮುಳುಗಿದೆ.

ಕಳೆದ ಐದಾರು ದಶಕಗಳಿಂದ ಶ್ರೀಮಠದ ಬಾಂಧವ್ಯ ಇರಿಸಿಕೊಂಡಿದ್ದು, ಮೂರು ದಶಕಗಳಿಂದಲೂ ಸಿದ್ಧಗಂಗಾ ಮಠಕ್ಕೆ ತರಕಾರಿ ಸೇರಿದಂತೆ ದವಸ-ಧಾನ್ಯಗಳನ್ನು ಕೊಡುಗೈದಾತರಿಂದ ಶೇಖರಿಸಿದ ಈ ದವಸ-ಧಾನ್ಯವನ್ನು ಪ್ರತಿ ತಿಂಗಳೂ ಸಿದ್ಧಗಂಗಾಮಠಕ್ಕೆ ಕಳುಹಿಸುತ್ತಿದ್ದ ಚಿಕ್ಕಬಳ್ಳಾಪುರದ ಮಲ್ಲಿಕಾರ್ಜುನ(ಮಲ್ಲಣ್ಣ) ಅವರು ತಮ್ಮ ಹಣ್ಣು ಅಂಗಡಿಯ ಪಕ್ಕದಲ್ಲೇ ಶ್ರೀಗಳ ಭಾವಚಿತ್ರ ಇರಿಸಿ ನಿತ್ಯ ಪೂಜೆಗೈಯುತ್ತಿದ್ದಾರೆ.

ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಬರುವ ತರಕಾರಿ, ಹಣ್ಣು-ಹಂಪಲನ್ನು ಶೇಖರಿಸುತ್ತಿದ್ದ ಮಲ್ಲಣ್ಣ ಅವರು ತಾನೊಬ್ಬ ಮಠಕ್ಕೆ ದವಸ-ಧಾನ್ಯ ನೀಡಿದರೆ ನನಗಷ್ಟೆ ಪ್ರಾಪ್ತಿ ಸಿಗಲಿದೆ. ಎಲ್ಲರಿಗೂ ಶ್ರೀಗಳ ಪ್ರಾಪ್ತಿ ಸಿಗಬೇಕೆಂದು ಕೊಡುಗೈ ದಾನಿಗಳ ಆಸರೆ ಪಡೆದು ಕೂಡಿಟ್ಟ ಅಷ್ಟೂ ದವಸ-ಧಾನ್ಯವನ್ನು ಸಿದ್ಧಗಂಗಾ ಮಠಕ್ಕೆ ಕಳುಹಿಸಿ ಸೇವೆ ಗೈಯುತ್ತಿದ್ದಾರೆ. ಇನ್ನು ಶ್ರೀಗಳ ನಿಷ್ಕಳಂಕವಾದ ಸೇವೆಗೆ ಅನೇಕರು ತಮ್ಮ ಕೊಟ್ಯಂತರ ರೂ.ಗಳ ಆಸ್ತಿಯನ್ನು ಮಠಕ್ಕೆ ದಾನವಾಗಿ ನೀಡಿದ್ದಾರೆ.
ಚಿಕ್ಕಬಳ್ಳಾಪುರ ತಾಲ್ಲೂಕಿನ ಜಾತವಾರದ ಹೊಸಹಳ್ಳಿ ಸಮೀಪದ ಏಳು ಎಕರೆ ಖಾಸಗಿ ಶಾಲೆ ನಡೆಸುತ್ತಿರುವ ಜಮೀನು, ನಗರ್ತಪೇಟೆಯಲ್ಲಿನ ಎರಡು ಮಹಡಿ ಮನೆಗಳು, ದೊಡ್ಡಭಜನೆ ಮನೆ ನಿವಾಸಿ ವಕೀಲ ಲಕ್ಷ್ಮೀಕಾಂತ್ ಎಂಬುವರು ತಮ್ಮ ಮನೆಯನ್ನೇ ದಾನವಾಗಿ ಬರೆದಿದ್ದಾರೆ. ಚಿಕ್ಕಬಳ್ಳಾಪುರ ಸೇರಿದಂತೆ ತಾಲ್ಲೂಕಿನಲ್ಲಿ 35 ಕೋಟಿಗೂ ಅಧಿಕ ಮಠಕ್ಕೆ ಆಸ್ತಿ ದಾನವಾಗಿ ಲಭಿಸಿದೆ. ಇದು ಶ್ರೀಗಳ ಸ್ಪೂರ್ತಿಯ ಸೆಲೆಯೇ ಹೌದು ಎನ್ನುತ್ತಾರೆ ಮಲ್ಲಣ್ಣ.

Facebook Comments