ಮನು ಮರ್ಡರ್ ಕೇಸ್ ನಲ್ಲಿ 12 ಮಂದಿ ಅರೆಸ್ಟ್..!

ಈ ಸುದ್ದಿಯನ್ನು ಶೇರ್ ಮಾಡಿ

Manu--01

ತುಮಕೂರು, ಜ.23-ವಿವಾಹಿತನಾಗಿದ್ದರೂ ಯುವತಿಯೊಬ್ಬಳನ್ನು ಪ್ರೀತಿಸಿ ಕರೆದೊಯ್ದು ವಿವಾಹವಾಗಿದ್ದ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ 12 ಮಂದಿಯನ್ನು ಕೊರಟಗೆರೆ ಠಾಣೆ ಪೋಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಬಸವೇಶ್ವರನಗರದ ಧರ್ಮೇಂದ್ರ(46), ರಾಜಾಜಿನಗರದ ತಿಮ್ಮರಾಜು(35), ಕಾಮಾಕ್ಷಿಪಾಳ್ಯದ ಬಸವರಾಜು(48), ಮಂಜುನಾಥ (25), ಕುಮಾರ (32), ಚಂದ್ರ(45), ಲೋಕೇಶ್(27), ಪುರುಷೋತ್ತಮ (30), ನೆಲಮಂಗಲದ ಜಗದೀಶ(30), ಶಿವಕುಮಾರ್(23), ಕೆಂಪಹನುಮಯ್ಯ(26), ತುಮಕೂರಿನ ಶ್ರೀನಿವಾಸ(20) ಬಂಧಿತ ಆರೋಪಿಗಳು.

ಜ.7 ರಂದು ರಾತ್ರಿ ಕೊರಟಗೆರೆ ತಾಲೂಕು ಸಿ.ಎನ್.ದುರ್ಗ ಹೋಬಳಿ, ಜಟ್ಟಿ ಅಗ್ರಹಾರ ಗ್ರಾಮದ ಸಮೀಪ ಎಂ.ಎನ್.ಜೆ ಕ್ರಷರ್‍ಗೆ ಹೋಗುವ ರಸ್ತೆಯಲ್ಲಿ ಸುಮಾರು 30 ರಿಂದ 35ವರ್ಷದ ವ್ಯಕ್ತಿಯನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದ ಬಗ್ಗೆ ಕೊರಟಗೆರೆ ಠಾಣೆ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಕೊಲೆಯಾದ ವ್ಯಕ್ತಿಯ ಬಗ್ಗೆ ಮಾಹಿತಿ ಕಲೆ ಹಾಕಿದಾಗ ತುಮಕೂರು ತಾಲೂಕಿನ ಬಳ್ಳಗೆರೆ ಗ್ರಾಮದ ಮನು ಎಂದು ಪೋಲೀಸರು ಪತ್ತೆ ಹಚ್ಚಿ ಕೊಲೆ ಆರೋಪಿಗಳಿಗಾಗಿ ಎರಡು ತಂಡ ರಚಿಸಿ ತನಿಖೆ ಕೈಗೊಂಡು ಮೊದಲು ಆರು ಮಂದಿಯನ್ನು ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ದಾಬಸ್‍ಪೇಟೆ ಬಳಿ ಬಂಧಿಸಿ, ಇವರು ನೀಡಿದ ಹೇಳಿಕೆ ಮೇರೆಗೆ ಕಾಮಾಕ್ಷಿಪಾಳ್ಯದ ಆರು ಮಂದಿಯನ್ನು ತುಮಕೂರು ತಾಲೂಕಿನ ಅಣ್ಣಯ್ಯಪಾಳ್ಯದಲ್ಲಿ ಬಂಧಿಸಲಾಗಿದೆ ಎಂದು ಐಜಿಪಿ ದಯಾನಂದ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಪೋಲೀಸರು ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಎರಡು ಲಾಂಗ್, ಡ್ರ್ಯಾಗರ್, ಕ್ವಾಲೀಸ್ ವಾಹನ, ಸ್ವಿಫ್ಟ್ ಕಾರನ್ನು ವಶಪಡಿಸಿಕೊಂಡಿರುವುದಾಗಿ ಅವರು ಹೇಳಿದರು.

ಕೊಲೆ ಪ್ರಕರಣದ ಆರೋಪಿಗಳು ಅಪರಾಧ ಹಿನ್ನೆಲೆ ಉಳ್ಳವರಾಗಿದ್ದು, ಇವರ ಪೈಕಿ ಧರ್ಮೇಂದ್ರ ಅಲಿಯಾಸ್ ಧರಣಿ ವಿರುದ್ಧ ಯಲಹಂಕ ಠಾಣೆ, ಕಾಮಾಕ್ಷಿಪಾಳ್ಯ, ಕ್ಯಾತ್ಸಂದ್ರ, ಕೆ.ಆರ್.ಪೇಟೆ ಠಾಣೆಗಳಲ್ಲಿ ವಿವಿಧ ಪ್ರಕರಣಗಳು ದಾಖಲಾಗಿದ್ದು, ಮಾಗಡಿ ರಸ್ತೆ ಪೋಲೀಸ್ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದಾನೆ.

ಆರೋಪಿ ತಿಮ್ಮರಾಜು ಮತ್ತು ಬಸವರಾಜು ವಿರುದ್ಧ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ. ಈ ಎಲ್ಲಾ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಜ.31ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ಆರೋಪಿಗಳಾದ ಬಸವರಾಜು, ಕುಮಾರ ಮತ್ತು ಪುರುಷೋತ್ತಮನನ್ನು ಹೆಚ್ಚಿನ ವಿಚಾರಣೆಗಾಗಿ ಪೋಲೀಸರು ವಶಕ್ಕೆ ಪಡೆದಿದ್ದಾರೆ. ಮೃತ ಮನು ಸಹ ಈ ಹಿಂದೆ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದು, ಆತನ ವಿರುದ್ಧವೂ ಕೂಡ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ರೌಡಿಶೀಟ್ ಇರುತ್ತದೆ.

ಪ್ರಕರಣದ ಗಂಭೀರತೆ ಪರಿಗಣಿಸಿ ಮುಂದಿನ ತನಿಖೆಯನ್ನು ಮಧುಗಿರಿ ಠಾಣೆಯ ಡಿವೈಎಸ್ಪಿ ಅವರಿಗೆ ವಹಿಸಲಾಗಿದೆ. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಕೋನ ವಂಶಿಕೃಷ್ಣ, ಎಎಸ್‍ಪಿ ಶೋಭಾರಾಣಿ ಉಪಸ್ಥಿತರಿದ್ದರು.

25 ಸಾವಿರ ಬಹುಮಾನ: ಈ ಪ್ರಕರಣದಲ್ಲಿ ಅತಿ ಶೀಘ್ರವಾಗಿ ಹಾಗೂ ಚಾಣಾಕ್ಷತನದಿಂದ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ ತನಿಖಾ ತಂಡಕ್ಕೆ ಕೇಂದ್ರ ವಲಯದ ಐಜಿಪಿ ದಯಾನಂದ್ ಅವರು 25 ಸಾವಿರ ರೂ. ನಗದು ಬಹುಮಾನ ಘೋಷಿಸಿದ್ದಾರೆ.

Facebook Comments

Sri Raghav

Admin