ರೆಸಾರ್ಟ್ ನಲ್ಲಿ ಶಾಸಕರ ಡಿಶುಂ ಡಿಶುಂ ಪ್ರಕರಣ ಕುರಿತು ಸಿಎಂ ಹೇಳಿದ್ದೇನು..?

ಈ ಸುದ್ದಿಯನ್ನು ಶೇರ್ ಮಾಡಿ

CM-Kumaraswamy--01ಬೆಂಗಳೂರು,ಜ.23- ಕಾಂಗ್ರೆಸ್ ಶಾಸಕರ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ಕಾನೂನು ವ್ಯಾಪ್ತಿಯಲ್ಲಿ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಆನಂದ್ ಸಿಂಗ್ ಅವರನ್ನು ಭೇಟಿ ಮಾಡಿ ಪರಿಸ್ಥಿತಿಯನ್ನು ತಿಳಿಗೊಳಿಸಲು ವೈಯಕ್ತಿಕವಾಗಿ ಪ್ರಯತ್ನ ಮಾಡುವುದಾಗಿ ಹೇಳಿದರು.

ಕಾಂಗ್ರೆಸ್ ಶಾಸಕರು ರೆಸಾರ್ಟ್‍ನಲ್ಲಿ ಒಟ್ಟುಗೂಡಿದಾಗ ಸಣ್ಣ ಅಚಾತುರ್ಯ ನಡೆದಿದೆ. ಆ ಘಟನೆಗೆ ಸಂಬಂಧಿಸಿದಂತೆ ಯಾರಿಗೋ ರಕ್ಷಣೆ ನೀಡಿ ಅಧಿಕಾರ ದುರುಪಯೋಗ ಆಗಬಾರದು ಎಂಬ ಉದ್ದೇಶದಿಂದ ಕಾನೂನು ವ್ಯಾಪ್ತಿಯಲ್ಲಿ ಕ್ರಮಕ್ಕೆ ಸೂಚನೆ ನೀಡಲಾಗಿದೆ ಎಂದರು.

ಇಂದು ಶಾಸಕ ಆನಂದ್ ಸಿಂಗ್ ಅವರನ್ನು ಭೇಟಿ ಮಾಡಲಾಗುವುದು. ಈ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ. ಸಿದ್ದಗಂಗಾ ಮಠದ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಶಿವೈಕ್ಯರಾದ ಹಿನ್ನೆಲೆಯಲ್ಲಿ ತಮ್ಮ ಗಮನವನ್ನು ಆ ಕಡೆ ಹರಿಸಲಾಗಿತ್ತು.ಆಗಬಾರದ ಘಟನೆ ಆಗಿದೆ.

ಅದನ್ನು ಯಾವ ರೀತಿ ಸರಿಪಡಿಸಬೇಕು ಎಂಬ ಪ್ರಯತ್ನ ಮಾಡಲಾಗುತ್ತದೆ. ಒಂದು ಕುಟುಂಬದಲ್ಲೇ ಅಣ್ಣತಮ್ಮಂದಿರಲ್ಲೇ ಜಗಳವಾಗುತ್ತದೆ. ಹೀಗಾಗಿ ಅದನ್ನು ಸರಿಪಡಿಸುವ ಪ್ರಯತ್ನ ಮಾಡಲಾಗುವುದು ಎಂದರು.

ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರನ್ನು ಸಿದ್ದಂಗಾ ಮಠದಲ್ಲಿ ತಡೆದ ವಿಚಾರವಾಗಿ ಅಚಾತುರ್ಯ ನಡೆದಿತ್ತು. ಅಧಿಕಾರಿಯ ಲೋಪದೋಷವನ್ನು ಮಹೇಶ್ ಅವರು ಹೇಳಿದ್ದಾರೆ ಅಷ್ಟೇ. ಮಂತ್ರಿಯೊಬ್ಬರಿಗೆ ಅಗೌರವ ತೋರುವ ಕೆಲಸವಾಗಿತ್ತು.

ಆ ಮುಜುಗರವನ್ನು ಗಮನಿಸಿ ಅಧಿಕಾರಿಯೊಂದಿಗೆ ಸಮಾಲೋಚಿಸಿ ಬಗೆಹರಿಸಿರುವುದಾಗಿ ಸಿಎಂ ಇದೇ ಸಂದರ್ಭದಲ್ಲಿ ತಿಳಿಸಿದರು. ನಿನ್ನೆ ಸಮಾಜ ಕಲ್ಯಾಣ ಇಲಾಖೆ ಕಾರ್ಯಕ್ರಮವನ್ನು ನಿಲ್ಲಿಸಲು ಸೂಚನೆ ನೀಡಲಾಗಿತ್ತು.

ಸಮಾಜ ಕಲ್ಯಾಣ ಸಚಿವರು ಕೂಡ ಕಾರ್ಯಕ್ರಮ ಮುಂದೂಡಿರುವುದಾಗಿ ಮಾಹಿತಿ ನೀಡಿದ್ದರು. ಮತ್ತೆ ಸಂಜೆ ಕಾರ್ಯಕ್ರಮ ನಡೆಸಿರುವ ಬಗ್ಗೆ ಮಾಹಿತಿಯನ್ನು ಪಡೆದು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಕುಮಾರಸ್ವಾಮಿ ತಿಳಿಸಿದರು.

Facebook Comments