ಸ್ವಚ್ಛತೆ ಕಾಪಾಡದ ಹೋಟೆಲ್‍ಗಳಿಗೆ ಬೀಗ ಜಡಿದ ಡಿಸಿ

ಈ ಸುದ್ದಿಯನ್ನು ಶೇರ್ ಮಾಡಿ

hotalಚಿತ್ರದುರ್ಗ ಜ.23-ಸ್ವಚ್ಛತೆ ಕಾಪಾಡದ ಎರಡು ಹೋಟೆಲ್‍ಗಳಿಗೆ ಬೀಗ ಹಾಕುವಂತೆ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಆದೇಶಿಸಿದ್ದಾರೆ. ಹೋಟೆಲ್‍ನಲ್ಲಿ ಕೆಲಸ ಮಾಡುವ ಕೆಲಸಗಾರರಿಗೆ ಸೂಕ್ತ ಮಲಗಲು ವ್ಯವಸ್ಥೆ ಮಾಡುವಂತೆ ಕಟ್ಟುನಿಟ್ಟಾಗಿ ಸೂಚನೆ ನೀಡಿದ್ದಾರೆ.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಮ್ಮಿಕೊಂಡಿದ್ದ ಸ್ವಚ್ಚತಾ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ದಿಢೀರ್ ಎಂದು ಗಾಂಧಿ ವೃತ್ತದಲ್ಲಿದ್ದ ಹೋಟೆಲ್ ದೀಪಾ ಮತ್ತು ಚನ್ನಗಿರಿ(ಕೃಷ್ಣಾಭವನ್) ಹೋಟೆಲ್‍ಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಅವರು, ಸ್ವಚ್ಛತೆ ಕಾಪಾಡದಿರುವ ಬಗ್ಗೆ ಮಾಲೀಕರನ್ನು ತರಾಟೆಗೆ ತೆಗೆದುಕೊಂಡರು.

ಶುದ್ಧವಾದ ನೀರು ಇಟ್ಟಿಲ್ಲ, ಹೋಟೆಲ್ ಆವರಣದಲ್ಲಿ ಇಷ್ಟೊಂದು ಗಲೀಜು ತುಂಬಿದೆ. ಇದರ ಮಧ್ಯೆ ವ್ಯವಹಾರ ಮಾಡುತ್ತಿರಾ ಎಂದು ಖಾರವಾಗಿ ಪ್ರಶ್ನಿಸಿದರು.
ಆಗ ಮಾಲೀಕರು ಇನ್ನು ಮುಂದೆ ಸ್ವಚ್ಛತೆ ಕಾಪಾಡುತ್ತೇನೆ ಎಂದು ಹೇಳಿದರೂ ಅದಕ್ಕೆ ಕಿವಿಗೊಡದ ಜಿಲ್ಲಾಧಿಕಾರಿ ಈ ಎರಡು ಹೋಟೆಲ್‍ಗಳನ್ನು ತಕ್ಷಣವೇ ಬಂದ್ ಮಾಡುವಂತೆ ಸ್ಥಳದಲ್ಲಿಯೇ ಮೌಖಿಕವಾಗಿ ಆದೇಶಿಸಿದರು.

ಹೊಟೇಲ್‍ನ ಪ್ರತಿ ವಸ್ತು ಶುಚಿಯಾಗಿರಬೇಕು, ಗ್ರಾಹಕರಿಗೆ ಶುದ್ಧ ಕುಡಿಯುವ ನೀರು ಕೊಡಬೇಕು ಅಥವಾ ಬಿಸಿನೀರು ಕೊಡಬೇಕು, ಪರವಾನಗಿ ಪಡೆಯುವಾಗ ನೀಡಲಾಗಿರುವ ಷರತ್ತುಗಳನ್ನು ಪಾಲಿಸಬೇಕೆಂದು ಸೂಚಿಸಿ ಇದ್ಯಾವುದನ್ನೂ ಪಾಲಿಸದ ಹಿನ್ನೆಲೆಯಲ್ಲಿ ಸದ್ಯಕ್ಕೆ ಹೋಟೆಲ್‍ಗಳಿಗೆ ಬೀಗ ಹಾಕುವಂತೆ ಪೌರಾಯುಕ್ತರಿಗೆ ಸೂಚನೆ ನೀಡಿದರು.

ಇದೇ ರೀತಿ ಚನ್ನಗಿರಿ ಹೋಟೆಲ್‍ನಲ್ಲಿ ಮಾಲೀಕರನ್ನು ತರಾಟೆಗೆ ತೆಗದುಕೊಂಡರು.ಕೆಲಸಗಾರರಿಗೆ ಕನಿಷ್ಠ ಸೌಲಭ್ಯ ನೀಡದೆ ದುಡಿಸಿಕೊಳ್ಳುವುದು ಅಪರಾಧ. ಮಲಗಲು ಸೂಕ್ತ ಜಾಗ ನೀಡಿ ಮೂಲಭೂತ ಸೌಲಭ್ಯವನ್ನು ನೀಡಬೇಕು ಎಂದು ಖಡಕ್ ಎಚ್ಚರಿಕೆ ನೀಡಿದರು.

ಬೀದಿಯಲ್ಲಿ ಫಾಸ್ಟ್ ಪುಡ್, ಚಹಾ ಮಾರುತ್ತಿದ್ದ ಅಂಗಡಿ ಮಾಲೀಕರಿಗೆ ಧೂಳು ಬರದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಿದರು.ಇದೇ ಸಂದರ್ಭದಲ್ಲಿ ಸುಮಾರು ಐದಾರು ಕೆ.ಜಿ. ಅಷ್ಟು ಪ್ಲಾಸ್ಟಿಕ್ ಕವರ್‍ಗಳನ್ನು ವಶಪಡಿಸಿಕೊಂಡು ವ್ಯಾಪಾರಿಗಳಿಗೆ ದಂಡ ಹಾಕುವಂತೆ ತಾಕೀತು ಮಾಡಿದರು.

ನ್ಯಾಯಾಧೀಶರಾದ ಎಸ್.ಆರ್.ದಿಂಡಲಕೊಪ್ಪ, ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಅರುಣ್, ಪರಿಸರ ಇಂಜಿನಿಯರ್ ಜಾಫರ್, ಆರೋಗ್ಯ ನಿರೀಕ್ಷಕರಾದ ಬಾಬುರೆಡ್ಡಿ, ಕಾಂತರಾಜ್, ಭಾರತಿ ಮತ್ತಿತರರು ಭಾಗವಹಿಸಿದ್ದರು.

Facebook Comments