‘ಸಿದ್ದಗಂಗಾ ಶ್ರೀಗಳಿಗೆ ‘ಭಾರತ ರತ್ನ’ದ ಜತೆ ‘ನೋಬೆಲ್ ಪ್ರಶಸ್ತಿ’ ನೀಡಬೇಕು’

ಈ ಸುದ್ದಿಯನ್ನು ಶೇರ್ ಮಾಡಿ

MB-Patil--01

ಬೆಂಗಳೂರು, ಜ.23-ಸಿದ್ದಗಂಗಾ ಶ್ರೀಗಳ ಸೇವೆ ವಿಶ್ವದಲ್ಲೇ ಅತ್ಯುಷ್ಕøಷ್ಟವಾಗಿದ್ದು, ಅವರಿಗೆ ಭಾರತ ರತ್ನದ ಜತೆ ನೋಬೆಲ್ ಪ್ರಶಸ್ತಿ ನೀಡಬೇಕು ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಒತ್ತಾಯಿಸಿದ್ದಾರೆ.

ವಿಧಾನಸೌಧದಲ್ಲಿಂದು ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಿದ್ದಗಂಗಾ ಮಠದ ಡಾ.ಶ್ರೀ ಶಿವಕುಮಾರಸ್ವಾಮೀಜಿಯವರ ಕ್ರಿಯಾ ಸಮಾಧಿ ವೇಳೆ ಶಾಂತಿ ಕಾಪಾಡಿದ ಸಾರ್ವಜನಿಕರು, ಭಕ್ತರಿಗೆ ಕೃತಜ್ಞತೆ ಸಲ್ಲಿಸಿದರು.

ಭದ್ರತೆಗಾಗಿ ಡಿಜಿಪಿ, ಎಡಿಜಿಪಿ, ಐಜಿಪಿ ಸೇರಿದಂತೆ 7 ಮಂದಿ ಎಸ್ಪಿಗಳು, ನಾಲ್ಕು ಮಂದಿ ಪೊಲೀಸ್ ಮುಖ್ಯಾಧಿಕಾರಿಗಳು, 29ಮಂದಿ ಡಿವೈಎಸ್‍ಪಿಗಳು, 92 ಮಂದಿ ಸರ್ಕಲ್ ಇನ್ಸ್‍ಪೆಕ್ಟರ್‍ಗಳು, 174 ಪಿಎಸ್‍ಐಗಳು, 552 ಮಂದಿ ಎಎಸ್‍ಐಗಳು, 3774 ಮಂದಿ ಪೊಲೀಸ್ ಸಿಬ್ಬಂದಿಗಳು, 600 ಗೃಹ ರಕ್ಷಕದಳದವರು ಸೇರಿದಂತೆ 5,205 ಮಂದಿ ಪೊಲೀಸರು, 20ಡಿಎಆರ್ ತುಕಡಿಗಳು, ಕೆಎಸ್‍ಆರ್‍ಪಿ ತುಕಡಿಗಳು, ಸ್ಕೌಟ್ಸ್ ಮತ್ತು ಗೈಡ್ಸ್ ಕಾರ್ಯಕರ್ತರು ಭದ್ರತಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದರು.

ಡಿಜಿಯಿಂದ ಕಾನ್‍ಸ್ಟೇಬಲ್‍ವರೆಗೂ ಎಲ್ಲರೂ ಉತ್ತಮ ಸೇವೆ ಸಲ್ಲಿಸಿದ್ದಾರೆ. ಸುಮಾರು 15 ಲಕ್ಷ ಮಂದಿಗೆ ಭದ್ರತೆ ಒದಗಿಸಲಾಗಿದೆ. ಶ್ರೀ ಮಠದ ಭಕ್ತರು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಉತ್ತಮ ಸಹಕಾರ ನೀಡಿದ್ದಾರೆ ಎಂದು ಸಚಿವರು ಕೃತಜ್ಞತೆ ಸಲ್ಲಿಸಿದರು.

ಶ್ರೀಗಳು 90 ವರ್ಷ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ, ಅನ್ನದಾಸೋಹದ ಮೂಲಕ ಲಕ್ಷಾಂತರ ಮಂದಿಯ ಜೀವನ ರೂಪಿಸಿದ್ದಾರೆ. ಅವರ ಲಿಂಗೈಕ್ಯ ನಾಡಿಗೆ ತುಂಬಲಾರದ ನಷ್ಟ ಉಂಟು ಮಾಡಿದೆ.

ಶ್ರೀಗಳ ನಿಸ್ವಾರ್ಥ ಸೇವೆ ಮನುಕುಲಕ್ಕೆ ಮಾದರಿಯಾಗಿದೆ. ಸ್ವಾತಂತ್ರ್ಯಾ ನಂತರ ಶಿಕ್ಷಣದ ಅಗತ್ಯತೆ ಹೆಚ್ಚಾಗಿದ್ದ ಕಾಲದಲ್ಲಿ ಶ್ರೀಗಳು ವಸತಿ ಸಹಿತ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಸಾವಿರಾರು ಮಂದಿಗೆ ನೆರವಾಗಿದ್ದಾರೆ ಎಂದರು.ಈಗ ವಿವಿಧ ಹಾಸ್ಟೆಲ್‍ಗಳು ಶಿಕ್ಷಣದ ಸೇವೆ ನೀಡುತ್ತಿವೆ. ಆದರೆ, ಆಗಿನ ಕಾಲದಲ್ಲಿ ಅದ್ಯಾವುದೂ ಇರಲಿಲ್ಲ. ಶ್ರೀಗಳು ಸ್ಥಾಪಿಸಿದ ಶಿಕ್ಷಣ ಸಂಸ್ಥೆ ಲಕ್ಷಾಂತರ ಮಂದಿಯ ಜೀವನ ರೂಪಿಸಿದೆ ಎಂದು ಹೇಳಿದರು.

ಮದರ್ ತೆರೆಸಾ ಅವರಿಗೆ ಸೇವಾ ಕ್ಷೇತ್ರದಲ್ಲಿ ನೋಬೆಲ್ ಕೊಡಲಾಗಿದೆ. ಸಿದ್ದಗಂಗಾ ಶ್ರೀಗಳು ಭಾರತ ರತ್ನ ಮತ್ತು ನೋಬೆಲ್ ಎರಡಕ್ಕೂ ಅರ್ಹರಿದ್ದಾರೆ. ಕೇಂದ್ರ ಸರ್ಕಾರ ಇದನ್ನು ಪರಿಗಣಿಸಬೇಕು. ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ಸೇರಿದಂತೆ ಎಲ್ಲರಿಗೂ ಶ್ರೀಗಳ ಸೇವೆಯ ಬಗ್ಗೆ ಮಾಹಿತಿ ಇದೆ. ಹಾಗಾಗಿ ಕೂಡಲೇ ಪ್ರಶಸ್ತಿಯನ್ನು ಘೋಷಣೆ ಮಾಡಬೇಕು ಎಂಬುದು ಜನಸಾಮಾನ್ಯರ ಆಶಯವಾಗಿದೆ ಎಂದು ಸಚಿವರು ತಿಳಿಸಿದರು.

ನಮ್ಮ ಸರ್ಕಾರ ಈ ಬಗ್ಗೆ ನಿರ್ಧಾರ ತೆಗೆದುಕೊಂಡು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಿದೆ. ನಾವು ಇದರಲ್ಲಿ ರಾಜಕಾರಣ ಮಾಡಲು ಇಚ್ಚಿಸುವುದಿಲ್ಲ. ಬಿಜೆಪಿಯವರನ್ನೂ ಒಳಗೊಂಡಂತೆ ಎಲ್ಲರೂ ಸೇರಿ ಶ್ರೀಗಳಿಗೆ ಗೌರವ ಸೂಚಿಸಬೇಕಿದೆ ಎಂದು ಹೇಳಿದರು. ಪ್ರಧಾನಿಯವರು ಮಠಕ್ಕೆ ಆಗಮಿಸಿ ಶ್ರೀಗಳ ದರ್ಶನ ಪಡೆಯದೆ ಇರುವ ಬಗ್ಗೆ ನಾನು ಯಾವುದೇ ಹೇಳಿಕೆ ನೀಡಲು ಬಯಸುವುದಿಲ್ಲ. ಸದ್ಯಕ್ಕೆ ಎಲ್ಲವೂ ಸುಖಾಂತ್ಯವಾಗಿ ನಡೆದಿದೆ. ಈ ವಿಷಯದಲ್ಲಿ ವಿವಾದ ಮಾಡಲು ಬಯಸುವುದಿಲ್ಲ ಎಂದರು.

ಸಮಾಜ ಕಲ್ಯಾಣ ಇಲಾಖೆ ಸಂವಿಧಾನದ ಸಂಭಾಷಣೆಗಳು ಕಾರ್ಯಕ್ರಮ ಆಯೋಜಿಸಿದ್ದರ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಮೌನಾಚರಣೆಗೆ ಧಕ್ಕೆಯಾಗದಂತೆ ಕಾರ್ಯಕ್ರಮದ ನಿರ್ಧಾರ ತೆಗೆದುಕೊಳ್ಳುವಂತೆ ತಾವು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್‍ಖರ್ಗೆ ಅವರಿಗೆ ಹೇಳಿದ್ದಾಗಿ ತಿಳಿಸಿದರು.

ರಾಘವೇಂದ್ರ ಔರಾದ್ಕರ್ ಸಮಿತಿ ವರದಿ ಜಾರಿ:
ಡಾ.ಶ್ರೀ ಶಿವಕುಮಾರಸ್ವಾಮಿಯವರ ಕ್ರಿಯಾಸಮಾಧಿ ವೇಳೆ ಪೊಲೀಸರು ಕೆಲಸ ಮಾಡಿದ ರೀತಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಮಾಧಾನಹೊಂದಿದ್ದಾರೆ.

ಪೊಲೀಸ್ ಸಿಬ್ಬಂದಿಗಳ ವೇತನ ಹೆಚ್ಚಳ ಸಂಬಂಧಪಟ್ಟಂತೆ ರಾಘವೇಂದ್ರ ಔರಾದ್ಕರ್ ಸಮಿತಿ ನೀಡಿರುವ ವರದಿಯನ್ನು ಜಾರಿಗೊಳಿಸುವುದಾಗಿ ಭರವಸೆ ನೀಡಿದ್ದಾರೆ. ಈಗಾಗಲೇ ಬಜೆಟ್ ಪೂರ್ವ ಚರ್ಚೆಗಳು ಆರಂಭಗೊಂಡಿದ್ದು ಅಲ್ಲಿ ವೇತನ ಪರಿಷ್ಕರಣೆ ಬಗ್ಗೆ ಚರ್ಚಿಸಲಾಗುವುದು. ಮುಂದಿನ ಬಜೆಟ್ ಮಂಡನೆಯಲ್ಲಿ ಸಮಿತಿಯ ಬಹುತೇಕ ಶಿಫಾರಸುಗಳನ್ನು ಒಪ್ಪಿಕೊಂಡು ಜಾರಿ ಮಾಡಲು ಸರ್ಕಾರ ಸಿದ್ಧವಿದೆ ಎಂದು ಸಚಿವರು ಭರವಸೆ ನೀಡಿದರು.

Facebook Comments