ಭಾರತದ ಹಲವೆಡೆ ಬಾರೀ ವಿಧ್ವಂಸಕಕ್ಕೆ ಐಸಿಸ್ ಸಂಚು, 9 ಶಂಕಿತರ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

ATS-01

ಮುಂಬೈ, ಜ.23 (ಪಿಟಿಐ)-ವಿಶ್ವದ ಅತ್ಯಂತ ನಿರ್ದಯ ಮತ್ತು ಕ್ರೂರ ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯಾ(ಐಎಸ್‍ಐಎಸ್ ಅಥವಾ ಐಸಿಸ್) ಜೊತೆ ಸಂಪರ್ಕ ಹೊಂದಿ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಗಳನ್ನು ಎಸಗಲು ಸಜ್ಜಾಗಿದ್ದ ಉಗ್ರಗಾಮಿಗಳ ಜಾಲವೊಂದನ್ನು ಮಹಾರಾಷ್ಟ್ರದ ಭಯೋತ್ಪಾದನೆ ನಿಗ್ರಹ ದಳ(ಎಟಿಎಸ್) ಭೇದಿಸಿದೆ.

ಈ ಸಂಬಂಧ ಒಂಭತ್ತು ಉಗ್ರಗಾಮಿಗಳನ್ನು ಬಂಧಿಸಿದ್ದು, ಶಸ್ತ್ರಾಸ್ತ್ರಗಳು, ಹರಿತ ಆಯುಧಗಳು, ರಾಸಾಯನಿಕಗಳು, ಆ್ಯಸಿಡ್ ಬಾಟಲ್‍ಗಳು, ಮೊಬೈಲ್ ಫೋನ್‍ಗಳು, ಸಿಮ್ ಕಾರ್ಡ್‍ಗಳು ಮತ್ತು ಹಾರ್ಡ್ ಡಿಸ್ಕ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತ ಒಂಭತ್ತು ಉಗ್ರರು ಒಂದೇ ಬಣದ ಸದಸ್ಯರಾಗಿದ್ದಾರೆ. ಇವರನ್ನು ಥಾಣೆ ಮತ್ತು ಔರಂಗಾಬಾದ್ ಜಿಲ್ಲೆಗಳಲ್ಲಿ ಸೆರೆ ಹಿಡಿಯಲಾಗಿದೆ.

ಕಳೆದ ಎರಡು ದಿನಗಳಿಂದ ನಡೆಸಿದ ವ್ಯವಸ್ಥಿತ ಕಾರ್ಯಾಚರಣೆಗಳಲ್ಲಿ ಎಟಿಎಸ್ ಈ ಜಾಲವನ್ನು ಪತ್ತೆ ಮಾಡಿ ಮುಂದೆ ನಡೆಯಬಹುದಾಗಿದ್ದ ಭಾರೀ ವಿಧ್ವಂಸಕ ಕೃತ್ಯಗಳ ಸಂಚನ್ನು ವಿಫಲಗೊಳಿಸಿದ್ದಾರೆ.

ಖಚಿತ ಸುಳಿವಿನ ಮೇರೆಗೆ ಎಟಿಎಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಹಲವು ವಾರಗಳಿಂದ ಈ ಒಂಭತ್ತು ಮಂದಿಯ ಚಲನವಲನಗಳ ಮೇಲೆ ತೀವ್ರ ನಿಗಾ ಇಟ್ಟಿದ್ದರು.

ಅಲ್ಲದೇ ಅವರ ಬಗ್ಗೆ ಮಹತ್ವದ ಮಾಹಿತಿಗಳನ್ನು ಕಲೆ ಹಾಕಿದ್ದರು. ಸಂಚೊಂದನ್ನು ರೂಪಿಸಿ ಅದನ್ನು ಕಾರ್ಯಗತಗೊಳಿಸಲು ಈ ತಂಡ ಸಿದ್ಧತೆ ನಡೆಸುತ್ತಿದ್ದಾಗ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಎಟಿಎಸ್ ಅಧಿಕಾರಿಗಳು ಈ ಒಂಭತ್ತು ಉಗ್ರರನ್ನು ತಮ್ಮ ಬಲೆಗೆ ಕೆಡವಿಕೊಂಡರು.

ಥಾಣೆ ಜಿಲ್ಲೆಯೆ ಅಮೃತ್ ನಗರ್, ಕೌಸಾ, ಮೋತಿ ಭಾಗ್, ಮತ್ತು ಅಲ್ಮಾಸ್ ಕಾಲೋನಿ ಹಾಗೂ ಔರಂಗಾಬಾದ್‍ನ ಕಲ್ಸರ್ ಕಾಲೋನಿ, ರಹತ್ ಕಾಲೋನಿ ಮತ್ತು ಡಮ್ಡಿ ಮಹಲ್ ಪ್ರದೇಶಗಳಲ್ಲಿ ಸೋಮವಾರ ಮಧ್ಯರಾತ್ರಿ ಮತ್ತು ಮಂಗಳವಾರ ಮುಂಜಾನೆ ಏಕಕಾಲದಲ್ಲಿ ದಾಳಿ ನಡೆಸಿ ಎಲ್ಲರನ್ನು ಬಂಧಿಸಲಾಗಿದೆ ಎಂದು ಎಟಿಎಸ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆರೋಪಿಗಳನ್ನು ಬಂಧಿಸಿ ನಂತರ ಅವರಿದ್ದ ಸ್ಥಳಗಳಲ್ಲಿ ಶೋಧ ನಡೆಸಿ ಶಸ್ತ್ರಾಸ್ತ್ರಗಳು, ಹರಿತ ಆಯುಧಗಳು, ರಾಸಾಯನಿಕಗಳು, ಆ್ಯಸಿಡ್ ಬಾಟಲ್‍ಗಳು, ಮೊಬೈಲ್ ಫೋನ್‍ಗಳು, ಸಿಮ್ ಕಾರ್ಡ್‍ಗಳು ಮತ್ತು ಹಾರ್ಡ್ ಡಿಸ್ಕ್‍ಗಳನ್ನು ಜಪ್ತಿ ಮಾಡಲಾಗಿದೆ ಎಂದು ಅವರು ವಿವರಿಸಿದ್ದಾರೆ.

ಬಂಧಿತ ಉಗ್ರರನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಮತ್ತಷ್ಟು ಮಾಹಿತಿಗಳು ಬಹಿರಂಗಗೊಂಡಿವೆ. ಕಾರ್ಯಾಚರಣೆಯನ್ನು ಮುಂದುವರಿಸಿರುವ ಎಟಿಎಸ್ ಅಧಿಕಾರಿಗಳು ಇನ್ನಷ್ಟು ಜನರನ್ನು ಬಂಧಿಸುವ ಸಾಧ್ಯತೆ ಇದೆ.  ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ಐಸಿಎಸ್ ಉಗ್ರರ ಜೊತೆ ನಂಟು ಹೊಂದಿದ್ದ 10 ಉಗ್ರರನ್ನು ಎಟಿಸಿ ವಿಶೇಷ ತಂಡ ಬಂಧಿಸಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

Facebook Comments