ಮತ್ತೆ ಬ್ಯಾಲೆಟ್ ಪೇಪರ್ ಬಳಕೆ ಸಾಧ್ಯವೇ ಇಲ್ಲ ; ಸಿಇಸಿ ಅರೋರಾ ಸ್ಪಷ್ಟನೆ

ಈ ಸುದ್ದಿಯನ್ನು ಶೇರ್ ಮಾಡಿ

Sunil-Auroraನವದೆಹಲಿ, ಜ.24- ಮುಂಬರುವ ಲೋಕಸಭೆ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಬದಲಿಗೆ ಮತಪತ್ರಗಳನ್ನು ಬಳಸುವಂತೆ ಪ್ರತಿಪಕ್ಷಗಳು ಒತ್ತಾಯಿಸುತ್ತಿರುವಾಗಲೇ ಇವಿಎಂ ಬಳಕೆಯಿಂದ ದೂರ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯ ಚುನಾವಣಾ ಆಯುಕ್ತ ಸಿಇಸಿ ಸುನಿಲ್ ಅರೋರಾ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ.

ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಇವಿಎಂಗಳ ಬದಲಿಗೆ ಮತಪತ್ರಗಳನ್ನು ಬಳಸಲು ಸಾಧ್ಯವೇ ಇಲ್ಲ. ಮತ್ತೆ ಬ್ಯಾಲೆಟ್ ಪೇಪರ್‍ಗಳನ್ನು ಬಳಸುವ ಮಾತೇ ಇಲ್ಲ ಎಂದು ಪುನರುಚ್ಚರಿಸಿದರು.

ಇವಿಎಂಗಳ ಕಾರ್ಯಕ್ಷಮತೆ ಬಗ್ಗೆ ಪ್ರತಿಪಕ್ಷಗಳು ಆಗಾಗ ಅನುಮಾನ ಮತ್ತು ಗೊಂದಲಗಳನ್ನು ಸೃಷ್ಟಿಸುತ್ತಲೇ ಬಂದಿವೆ. ಇದಕ್ಕೆ ಆಯೋಗದಿಂದ ಪ್ರಾತ್ಯಕ್ಷಿಕೆ ಮೂಲಕ ಸ್ಪಷ್ಟ ಉತ್ತರ ನೀಡಲಾಗಿದೆ.

ಈಗ ಮತ್ತೆ ಮತಪತ್ರಗಳನ್ನು ಬಳಸಬೇಕೆಂಬ ಕೂಗು ಕೇಳಿ ಬರುತ್ತಿದೆ. ಇಷ್ಟಾದರೂ ಚುನಾವಣೆಗಳಲ್ಲಿ ಮತ್ತೆ ಮತ ಪತ್ರಗಳನ್ನು ಬಳಸುವ ಪ್ರಶ್ನೆಯೇ ಉದ್ಬವಿಸುವುದಿಲ್ಲ. ಇವಿಎಂ ಬಳಕೆ ಆಭಾದಿತ ಎಂದು ಅರೋರಾ ತಿಳಿಸಿದರು.

ಈ ವಿಷಯದಲ್ಲಿ ವಿರೋಧ ಪಕ್ಷಗಳು ಮತ್ತು ಯಾವುದೇ ಸಂಘ-ಸಂಸ್ಥೆಗಳ ಸಲಹೆ ಮತ್ತು ಅಭಿಪ್ರಾಯಗಳನ್ನು ನಾವು ಸ್ವೀಕರಿಸುತ್ತೇವೆ. ಅಂದ ಮಾತ್ರಕ್ಕೆ ನಾವು ಮತ್ತೆ ಮತಪತ್ರ ಉಪಯೋಗಿಸುವತ್ತ ಸಗುವುದಿಲ್ಲ ಎಂಬ ಮಾತನ್ನು ನಾನು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸುತ್ತೇನೆ ಎಂದು ಮುಖ್ಯ ಚುನಾವಣಾ ಆಯುಕ್ತರು ಹೇಳಿದರು.

ಬಿಜೆಪಿ ಪ್ರಚಂಡ ಗೆಲುವಿಗೆ ಕಾರಣವಾದ 2014ರ ಲೋಕಸಭಾ ಚುನಾವಣೆಯಲ್ಲಿ ಇವಿಎಂಗಳನ್ನು ಹ್ಯಾಕ್ ಮಾಡಲಾಗಿದೆ ಎಂಬ ಹ್ಯಾಕರ್ ಒಬ್ಬ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ 2019ರ ಲೋಕಸಭಾ ಚುನಾವಣೆಯಲ್ಲಿ ಮತಪತ್ರಗಳನ್ನು ಬಳಸಬೇಕೆಂದು ಪ್ರತಿಪಕ್ಷಗಳು ಒತ್ತಾಯಿಸಿರುವ ಸಂದರ್ಭದಲ್ಲೇ ಮುಖ್ಯ ಚುನಾವಣಾ ಆಯುಕ್ತರು ಮತ ಪತ್ರ ಬಳಸಲು ಸಾಧ್ಯವಿಲ್ಲ ಎಂಬ ಮಾತನ್ನು ಪುನರುಚ್ಚರಿಸಿ ಸ್ಪಷ್ಟಪಡಿಸಿದ್ದಾರೆ.

Facebook Comments