ಅತಿ ಹೆಚ್ಚು ಚೆಕ್‍ಡ್ಯಾಂ ನಿರ್ಮಿಸುವ ಗ್ರಾಪಂಗಳಿಗೆ 1 ಕೋಟಿ ನಗದು ಬಹುಮಾನ..!

ಈ ಸುದ್ದಿಯನ್ನು ಶೇರ್ ಮಾಡಿ

DK-Shivakumar--01

ಬೆಂಗಳೂರು,ಜ.24-ಅಂತರ್ಜಲ ಅಭಿವೃದ್ಧಿಗೆ ಪೂರಕವಾಗಿ ಅತಿ ಹೆಚ್ಚು ಚೆಕ್‍ಡ್ಯಾಂ, ಇಂಗು ಗುಂಡಿಗಳನ್ನು ನಿರ್ಮಿಸುವ ಗ್ರಾಮಪಂಚಾಯ್ತಿಗಳಿಗೆ ಒಂದು ಕೋಟಿ ರೂ. ನಗದು ಬಹುಮಾನ ನೀಡುವುದಾಗಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಘೋಷಿಸಿದ್ದಾರೆ.

ಕೃಷಿ ವಿವಿಯ ಆವರಣದಲ್ಲಿ ಡಾ.ಬಾಬು ರಾಜೇಂದ್ರಪ್ರಸಾದ್ ಅಂತಾರಾಷ್ಟ್ರೀಯ ಸಮಾವೇಶ ಭವನದಲ್ಲಿ ಕೇಂದ್ರ ಮತ್ತು ಜಲಸಂಪನ್ಮೂಲ ಇಲಾಖೆಗಳು ಏರ್ಪಡಿಸಿದ್ದ ಅಂತರ್ಜಲ ಶೋಷಿತ ಪ್ರದೇಶಗಳಲ್ಲಿ ನೀರಿನ ಸಂರಕ್ಷಣೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ನರೇಗ ಯೋಜನೆಯನ್ನು ಬಳಸಿಕೊಂಡು ಅತಿ ಹೆಚ್ಚು ಹೆಚ್ಚು ಚೆಕ್‍ಡ್ಯಾಂ, ಇಂಗು ಗುಂಡಿಗಳನ್ನು ನಿರ್ಮಿಸಬೇಕಿದೆ ಎಂದರು.

ಅಂತರ್ಜಲ ಮಟ್ಟ ದಿನೇದಿನೇ ಕುಸಿಯುತ್ತಿದ್ದು, ಮುಂದಿನ ದಿನಗಳಲ್ಲಿ ನೀರು ಮತ್ತು ಅಧಿಕಾರಕ್ಕಾಗಿ ವಿಶ್ವದ ಮೂರನೇ ಯುದ್ಧ ಎದುರಾಗುವ ಆತಂಕವಿದೆ. ಪ್ರತಿ ಹನಿ ನೀರನ್ನು ಉಳಿಸಿ ಸಂರಕ್ಷಿಸುವ ಅಗತ್ಯವಿದೆ. ಆ ಕಾರಣಕ್ಕಾಗಿ ಇಂಗು ಗುಂಡಿಗಳು ಹಾಗೂ ಚೆಕ್‍ಡ್ಯಾಂ ನಿರ್ಮಾಣ ಹೆಚ್ಚಾಗಬೇಕು.

ರಾಜ್ಯದ 30 ಜಿಲ್ಲೆಗಳಲ್ಲೂ ಪ್ರತಿ ಜಿಲ್ಲೆಯ ಎರಡು ಗ್ರಾಪಂಗಳನ್ನು ಆಯ್ಕೆ ಮಾಡಿಕೊಂಡು ಒಂದು ಕೋಟಿ ರೂ. ನಗದು ಬಹುಮಾನ ನೀಡಲಾಗುವುದು . ಇದಕ್ಕೆ 60 ಕೋಟಿ ರೂ. ಮೀಸಲಿಡಲಾಗುತ್ತದೆ.

ಗ್ರಾಪಂ ಹೆಚ್ಚು ಚೆಕ್‍ಡ್ಯಾಂ ನಿರ್ಮಿಸುತ್ತವೆಯೋ ಅವು ಬಹುಮಾನಕ್ಕೆ ಪಾತ್ರರಾಗುತ್ತಾರೆ. ಬಹುಮಾನದ ಹಣವನ್ನು ಅಂತರ್ಜಲದ ಅಭಿವೃದ್ಧಿಗೆ ಬಳಸಿಕೊಳ್ಳಬಹುದಾಗಿದೆ. ಖಾಸಗಿ, ಸರ್ಕಾರಿ ಜಮೀನು ಸೇರಿದಂತೆ ಯವುದೇ ಜಮೀನಿನಲ್ಲಿ ನಿರ್ಮಿಸಿದ್ದರೂ ಪರಿಗಣನೆಗೆ ತೆಗೆದುಕೊಳ್ಳುವುದಾಗಿ ಹೇಳಿದರು.

ಉ.ಕರ್ನಾಟಕ, ಹಳೇಮೈಸೂರು ಭಾಗ ಮತ್ತು ಮಲೆನಾಡು ಪ್ರದೇಶಗಳಲ್ಲಿ ನೀರಾವರಿಯ ಮೂಲಗಳಿವೆ. ಹಲವಾರು ನದಿಗಳಿವೆ. ಆದರೆ ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ಆರು ಜಿಲ್ಲೆಗಳಿಗೆ ಯಾವುದೇ ನೀರಾವರಿ ಮೂಲ ಇಲ್ಲ.

ರಾಮನಗರಕ್ಕೆ ಬೆಂಗಳೂರಿನ ಕೊಳಚೆ ನೀರು ದೊರೆಯುತ್ತಿರುವುದರಿಂದ ಕೆಲ ಭಾಗಗಳ ಅಂತರ್ಜಲ ಮಟ್ಟಕ್ಕೆ ಅನುಕೂಲವಾಗಿದೆ. ಕೋಲಾರ, ಚಿಕ್ಕಬಳ್ಳಾಪುರ ಜನ ನೀರಿನ ವಿಷಯದಲ್ಲಿ ಸಾಕಷ್ಟು ಬವಣೆ ಅನುಭವಿಸಿದ್ದಾರೆ.

2000 ಅಡಿ ಬೋರ್‍ವೆಲ್ ಕೊರೆದರೂ ನೀರು ಸಿಗುವುದಿಲ್ಲ. ಸಿಗುವ ಅಲ್ಪಸ್ವಲ್ಪ ನೀರಿನಲ್ಲೇ ತರಕಾರಿ, ಹಣ್ಣು ಬೆಳೆದು ಇಡೀ ಬೆಂಗಳೂರಿಗೆ ಸರಬರಾಜು ಮಾಡುತ್ತಾರೆ, ಹಸು ಸಾಕಿ ಹೈನುಗಾರಿಕೆ ಮಾಡಿ ಹಾಲು ಪೂರೈಸುತ್ತಿದ್ದಾರೆ.

ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಿಗೆ ನೀರು ತಲುಪಿಸಬೇಕು ಎಂದು 18 ಸಾವಿರ ಕೋಟಿ ರೂ. ಖರ್ಚು ಮಾಡಿ ಎತ್ತಿನ ಹೊಳೆ ಯೋಜನೆ ರೂಪಿಸಲಾಗಿದೆ. ಆದರೆ ಇತ್ತೀಚೆಗೆ ಆತಂಕ ಶುರುವಾಗಿದ್ದು, ನಾಲೆ ಹಾದುಬರುವ ಮಾರ್ಗದಲ್ಲಿ ಅನಧಿಕೃತವಾಗಿ ಮೋಟಾರ್ ಪಂಪ್‍ಗಳನ್ನು ಅಳವಡಿಸಿಕೊಂಡು ನಾಲೆಯಿಂದ ಆ ಪ್ರದೇಶದ ಜನ ನೀರು ತೆಗೆದುಕೊಳ್ಳಬಹುದೆಂಬ ಭಯ ಕಾಡುತ್ತಿದೆ.

ಕಾವೇರಿ, ಕೃಷ್ಣ , ತುಂಗಭದ್ರ ನದಿ ಪಾತ್ರಗಳಲ್ಲಿ ಈ ರೀತಿಯ ಕೆಲಸಗಳು ನಡೆಯುತ್ತಿವೆ. ಕಾವೇರಿ ನೀರು ಕೊನೆಯ ಭಾಗದವರೆಗೂ ತಲುಪೇ ಇಲ್ಲ. ಕುಣಿಗಲ್‍ನಲ್ಲಿ 26 ವರ್ಷದ ಹಿಂದೆ ನಾಲೆ ನಿರ್ಮೀಸಲಾಗಿದೆ. ಆದರೆ ಈವರೆಗೂ ಅಲ್ಲಿಗೆ ನೀರು ಬಂದಿಲ್ಲ. ಮಧ್ಯೆದಲ್ಲಿಯೇ ಜನ ಮೋಟಾರು ಪಂಪ್ ಹಾಕಿ ನೀರು ಬಳಸಿಕೊಳ್ಳುತ್ತಿದ್ದಾರೆ.

ಇಂಥ ಕೆಲಸಗಳನ್ನು ತಡೆದು ಎತ್ತಿನಹೊಳೆಯ ನೀರನ್ನು ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯ ಕೊನೆಯ ಭಾಗಕ್ಕೂ ತಲುಪಿಸುವುದು ನಮ್ಮ ಗುರಿ. ಅದಕ್ಕಾಗಿ ಮೋಟಾರ್ ಪಂಪ್ ಅಳವಡಿಸಿ ನೀರು ಎತ್ತುವವರಿಗೆ ಕಠಿಣ ಶಿಕ್ಷೆ ವಿಧಿಸುವ ಕಾನೂನು ರೂಪಿಸಲಾಗುತ್ತಿದೆ ಎಂದರು.  ಈ ರೀತಿಯ ಕೆಲಸಗಳನ್ನು ತಡೆಯುವ ಸಲುವಾಗಿಯೇ ವಿಶೇಷ ತಜ್ಞರ ಸಮಿತಿಯೊಂದನ್ನು ರಚಿಸಲಾಗುತ್ತಿದೆ. ಈ ಸಮಿತಿಗಳನ್ನು ಮುಂದಿನ ದಿನಗಳಲ್ಲಿ ಇತರ ನದಿಗಳ ನಾಲಾ ವಿಭಾಗಕ್ಕೂ ವಿಸ್ತರಣೆ ಮಾಡಲಾಗುವುದು ಎಂದು ಅವರು ತಿಳಿಸಿದರು.

 

Facebook Comments

Sri Raghav

Admin