ಮೈಸೂರು ರೈಲ್ವೆ ನಿಲ್ದಾಣದ ಸಂಪೂರ್ಣ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ

ಈ ಸುದ್ದಿಯನ್ನು ಶೇರ್ ಮಾಡಿ

mysoerಮೈಸೂರು, ಜ.24- ಮೈಸೂರು ರೈಲ್ವೆ ನಿಲ್ದಾಣದ ಸಂಪೂರ್ಣ ಅಭಿವೃದ್ಧಿ ಹಾಗೂ ಅಶೋಕಪುರಂ ರೈಲ್ವೆ ನಿಲ್ದಾಣದಲ್ಲಿ ಪಾದಚಾರಿ ಮೇಲ್ಸೇತುವೆ ವಿಸ್ತರಣೆ ಕಾಮಗಾರಿಗೆ ಸಂಸದ ಪ್ರತಾಪ್‍ಸಿಂಹ ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಪ್ರತಾಪ್‍ಸಿಂಹ ಮಾತನಾಡಿ, ಮೈಸೂರು ರೈಲು ನಿಲ್ದಾಣಕ್ಕೆ ಹೊಸ ರೂಪ ನೀಡುವ ನಿಟ್ಟಿನಲ್ಲಿ 16 ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ಇಂದಿನಿಂದ ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು.

ಈಗಾಗಲೇ ನಾಗನಹಳ್ಳಿಯಲ್ಲಿ ಸ್ಯಾಟಲೈಟ್ ಟರ್ಮಿನಲ್ ಕಾಮಗಾರಿ ಆರಂಭವಾಗಿದೆ. ಈ ಮಧ್ಯೆ ಮೈಸೂರಿನಲ್ಲೂ ಸಹ ಅಭಿವೃದ್ಧಿ ಕಾಮಗಾರಿ ಪ್ರಾರಂಭಿಸಲಾಗಿದ್ದು, ನಗರ ರೈಲು ನಿಲ್ದಾಣದ ಬಳಿ ಕಾರು ಪಾರ್ಕಿಂಗ್, ಆಟೋ ನಿಲ್ದಾಣ, ಪ್ರಯಾಣಿಕರ ಕಾಯುವಿಕೆ ಕೊಠಡಿಯನ್ನು ಉತ್ತಮಪಡಿಸಲಾಗುತ್ತದೆ ಎಂದು ತಿಳಿಸಿದರು.

ಪಾರ್ಸೆಲ್ ಕೊಠಡಿಯನ್ನು ಮತ್ತಷ್ಟು ಅಭಿವೃದ್ಧಿಪಡಿಸಲಾಗುವುದು. ಇನ್ನು ಮುಂದೆ ಅಶೋಕಪುರಂ ರೈಲು ನಿಲ್ದಾಣದಿಂದಲೇ ಹಲವು ರೈಲುಗಳ ಸಂಚಾರವನ್ನು ಪ್ರಾರಂಭಿಸಲಾಗುತ್ತದೆ ಎಂದು ಹೇಳಿದರು.

ದಕ್ಷಿಣ ಪ್ರದೇಶದಲ್ಲಿರುವ ಪ್ರಯಾಣಿಕರು ಅಶೋಕಪುರಂ ನಿಲ್ದಾಣದಿಂದಲೇ ಪ್ರಯಾಣಿಸಲು ಅನುಕೂಲವಾಗಲಿ ಎಂಬ ಕಾರಣಕ್ಕೆ ಕೆಲ ರೈಲುಗಳನ್ನು ಅಲ್ಲಿಂದಲೇ ಪ್ರಾರಂಭಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಅಶೋಕಪುರಂ ನಿಲ್ದಾಣವು ಹಾಲ್ಟಿಂಗ್ ನಿಲ್ದಾಣವನ್ನಾಗಿ ಪರಿವರ್ತಿಸಲಾಗುತ್ತದೆ ಎಂದು ತಿಳಿಸಿದರು.

ಕೆಲ ವರ್ಷಗಳ ಹಿಂದೆ ಮೈಸೂರಿಗೆ ಬೆರಳೆಣಿಕೆಯಷ್ಟು ರೈಲುಗಳು ಸಂಚರಿಸುತ್ತಿದ್ದವು. ಇತ್ತೀಚಿನ ದಿನಗಳಲ್ಲಿ 14ಕ್ಕೂ ಹೆಚ್ಚು ರೈಲುಗಳು ಬೆಂಗಳೂರು-ಮೈಸೂರು ನಡುವೆ ಸಂಚರಿಸುತ್ತಿವೆ ಎಂದು ಪ್ರತಾಪ್‍ಸಿಂಹ ಹೇಳಿದರು. ಶಾಸಕರಾದ ನಾಗೇಂದ್ರ, ಎಸ್.ಎ.ರಾಮದಾಸ್, ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ, ಡಿಆರ್‍ಎಂ ಅಪರ್ಣಗಾರ್ಗ್ ಈ ವೇಳೆ ಉಪಸ್ಥಿತರಿದ್ದರು.

Facebook Comments