ಬೆಂಗಳೂರಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿನಿ ಅನುಮಾನಸ್ಪದ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Journalist

ಬೆಂಗಳೂರು, ಜ.24-ಪತ್ರಿಕೋದ್ಯಮ ವ್ಯಾಸಂಗ ಮಾಡುತ್ತಿದ್ದ ಮುಂಬೈ ಮೂಲದ ವಿದ್ಯಾರ್ಥಿನಿ ಹಾಸ್ಟೆಲ್‍ನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಕೊತ್ತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೆ.ನಾರಾಯಣಪುರ ಬಳಿಯ ಖಾಸಗಿ ಕಾಲೇಜಿನಲ್ಲಿ 4ನೇ ಸೆಮಿಸ್ಟರ್ ಪತ್ರಿಕೋದ್ಯಮ ವ್ಯಾಸಂಗ ಮಾಡುತ್ತಿದ್ದ ಮುಂಬೈ ಮೂಲದ ಸೋಫಿಯಾ ದಮನಿ ಮೃತಪಟ್ಟಿರುವ ವಿದ್ಯಾರ್ಥಿನಿ.

ಕಳೆದ ಒಂದು ವರ್ಷದಿಂದ ಬೆಂಗಳೂರಿನಲ್ಲಿ ನೆಲೆಸಿದ್ದ ಈಕೆ ನಿನ್ನೆ ಬೆಳಗ್ಗೆ ಹಾಸ್ಟೆಲ್‍ನಲ್ಲಿದ್ದ ಸಹಪಾಠಿಗಳ ಜತೆ ಮಾತನಾಡಿ ನಾನು ಇಂದು ಕಾಲೇಜಿಗೆ ಬರುವುದಿಲ್ಲ ಎಂದು ಹೇಳಿದ್ದರಿಂದ ಸಹಪಾಠಿಗಳು ಕಾಲೇಜಿಗೆ ತೆರಳಿದ್ದರು.

ಸಂಜೆ ಕಾಲೇಜು ಮುಗಿಸಿಕೊಂಡು ಸಹಪಾಠಿಗಳು ಹಾಸ್ಟೆಲ್‍ಗೆ ವಾಪಸಾದಾಗ ಈಕೆ ತನ್ನ ಕೊಠಡಿಯ ಬೆಡ್‍ಮೇಲೆ ಮಲಗಿದ್ದ ಸ್ಥಿತಿಯಲ್ಲಿ ಮೃತಪಟ್ಟಿದ್ದಾಳೆ. ಇದನ್ನು ಗಮನಿಸಿದ ಸಹಪಾಠಿಗಳು ಗಾಬರಿಯಾಗಿ ತಕ್ಷಣ ಹಾಸ್ಟೆಲ್ ವಾರ್ಡನ್‍ಗೆ ತಿಳಿಸಿದ್ದು, ಅವರು ಕೊತ್ತನೂರು ಪೊಲೀಸ್ ಠಾಣೆಗೆ ತಿಳಿಸಿದ್ದಾರೆ.

ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಸಾವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಲಾಗಿದೆ.

Facebook Comments