ಮನೆಯಲ್ಲಿಯೆ ಗೋಬಿ ಮಂಚೂರಿ ಮಾಡೋದು ಹೇಗೆ..?

ಈ ಸುದ್ದಿಯನ್ನು ಶೇರ್ ಮಾಡಿ

Gobi-Manchurianಚಳಿಗಾಲ ಬಂತೆಂದರೆ ಸಾಕು, ನಮ್ಮ ನಾಲಿಗೆಯ ಚಪಲವು ಹೆಚ್ಚಾಗುತ್ತದೆ. ಒಂದೇ ಸಮನೆ ಚುಮು ಚುಮು ಚಳಿಯಲ್ಲಿ, ಒಳಗೆ ಬೆಚ್ಚಗೆ ಕೂತು ಬಿಸಿ ಬಿಸಿಯಾದ, ನಾಲಿಗೆಗೆ ಚಟಪಟ ಎಂದು ರುಚಿಸುವ, ಯಾವುದಾದರು ಖಾರವಾದ ಕರಿದ ತಿನಿಸನ್ನು ತಿನ್ನಬೇಕೆಂದು ಮನಸ್ಸು ಬಯಸುವುದು ಸಹಜವೇ ಸರಿ.

ಮಾರುಕಟ್ಟೆಗೆ ಹೋದರೆ, ಬೇಕಾದಷ್ಟು ಚಾಟ್ ಅಂಗಡಿಗಳಲ್ಲಿ, ರೆಸ್ಟೋರೆಂಟ್ ಗಳಲ್ಲಿ ಇಂತಹ ಖಾದ್ಯಗಳು ನಮ್ಮನ್ನು ಆಕರ್ಷಿಸದೇ ಬಿಡುವುದಿಲ್ಲ. ಆದರೆ, ಮೇಲಿಂದ ಮೇಲೆ ಹೊರಗಿನ ತಿಂಡಿ ತಿನಿಸುಗಳನ್ನು ತಿನ್ನುವುದು ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ.

ಅದರಲ್ಲೂ ಚಳಿಗಾಲದಲ್ಲಿ ನಮ್ಮ ಶರೀರವು ಅನೇಕ ರೋಗಗಳಿಗೆ ತುತ್ತಾಗುವ ಸಂಭವ ಹೆಚ್ಚಿರುತ್ತದೆ. ಹಾಗಾಗಿ, ಮನೆಯಲ್ಲೇ ನಾವು ಇಷ್ಟಪಡುವ ಖಾದ್ಯಗಳನ್ನು ಮಾಡಿ ತಿಂದರೆ, ರುಚಿಶುಚಿಯಾಗಿಯೂ ಇರುತ್ತದೆ ಮತ್ತು ಆರೋಗ್ಯಕರವಾಗಿಯೂ ಇರುತ್ತದೆ. ಮನೆಯಲ್ಲಿಯೆ ಆನಂದಿಸಿ ಗೋಬಿ ಮಂಚೂರಿ ರುಚಿ

ಬೇಕಾಗುವ ಪದಾರ್ಥಗಳು :  ಮೈದಾಹಿಟ್ಟು- ಅರ್ಧ ಬಟ್ಟಲು,  ಜೋಳದ ಹಿಟ್ಟು- 2 ಚಮಚ,   ಶುಂಠಿ, ಬೆಳ್ಳುಳ್ಳಿ ಪೇಸ್ಟ್- 1,  ಚಮಚ,  ಅಚ್ಚ ಖಾರದ ಪುಡಿ- 1 ಚಮಚ,  ಉಪ್ಪು- ರುಚಿಗೆ ತಕ್ಕಷ್ಟು,  ಸೋಯಾ ಸಾಸ್- 1 ಚಮಚ,  ಹೂಕೋಸು- 1 ಬಟ್ಟಲು, * ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು,   ಸ್ಪ್ರಿಂಗ್ ಆನಿಯನ್- ಸ್ವಲ್ಪ (ಸಣ್ಣಗೆ ಹೆಚ್ಚಿದ್ದು),  ಕ್ಯಾಪ್ಸಿಕಂ- ಸ್ವಲ್ಪ,  ಚಿಲ್ಲಿ ಸಾಸ್- 1 ಚಮಚ,  ಟೊಮೆಟೋ ಸಾಸ್- 1 ಚಮಚ,   ಸೋಯಾ ಸಾಸ್ – 1 ಚಮಚ.  ವಿನೆಗರ್- 1 ಚಮಚ,  ಕಾಳು ಮೆಣಸಿನ ಪುಡಿ- ಅರ್ಧ ಚಮಚ,  ಉಪ್ಪು- ರುಚಿಗೆ ತಕ್ಕಷ್ಟು

ಮಾಡುವ ವಿಧಾನ :   ಪಾತ್ರೆಯೊಂದನ್ನು ತೆಗೆದುಕೊಂಡು ಅದಕ್ಕೆ ಮೈದಾಹಿಟ್ಟು, ಜೋಳದ ಹಿಟ್ಟು, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಅಚ್ಚ ಖಾರದ ಪುಡಿ, ಉಪ್ಪು, ಸೋಯಾ ಸಾಸ್ ಎಲ್ಲವನ್ನೂ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.

# ಹೂಕೋಸನ್ನು ಸಣ್ಣದಾಗಿ ಬಿಡಿಸಿಕೊಂಡು, ಚೆನ್ನಾಗಿ ತೊಳೆದುಕೊಳ್ಳಬೇಕೆ, ಒಲೆಯ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ ಕಾಯಲು ಬಿಡಿ.

# ನಂತರ ಹೂಕೋಸನ್ನು ಮೈದಾಹಿಟ್ಟಿನ ಮಸಾಲೆಯೊಂದಿಗೆ ಅದ್ದಿ ಎಣ್ಣೆಗೆ ಹಾಕಿ ಚಿನ್ನದ ಬಣ್ಣ ಬರುವವರೆಗೂ ಕರಿದುಕೊಳ್ಳಿ.
# ಒಲೆಯ ಮೇಲೆ ಮತ್ತೊಂದು ಬಾಣಲೆಯಿಟ್ಟು ಅದಕ್ಕೆ 2 ಚಮಚ ಎಣ್ಣೆ ಹಾಕಿ. ನಂತರ ಸಣ್ಣಗೆ ಹೆಚ್ಚಿಕೊಂಡ ಬೆಳ್ಳುಳ್ಳಿ, ಸ್ಪ್ರಿಂಗ್ ಆನಿಯನ್, ಕ್ಯಾಪ್ಸಿಕಂ ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ನಂತರ ಇದಕ್ಕೆ ಚಿಲ್ಲಿ ಸಾಸ್, ಟೊಮೆಟೋ ಸಾಸ್, ಸೋಯಾ ಸಾಸ್, ವಿನೆಗರ್, ಕಾಳು ಮೆಣಸಿನ ಪುಡಿ, ಉಪ್ಪು ಹಾಕಿ.

# ಬಟ್ಟಲಿಗೆ ಸ್ವಲ್ಪ ನೀರು ಹಾಗೂ ಜೋಳದ ಹಿಟ್ಟನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣವನ್ನು ಕುದಿಯುತ್ತಿರುವ ಗ್ರೇವಿಯೊಂದಿಗೆ ಹಾಕಿ 5 ನಿಮಿಷ ಕುದಿಸಿ. ನಂತರ ಈಗಾಗಲೇ ಮಾಡಿಟ್ಟಿಕೊಂಡಿದ್ದ ಗೋಬಿಗಳನ್ನು ಇದಕ್ಕೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿದರೆ, ರುಚಿಕರವಾದ ಗೋಬಿ ಮಂಚೂರಿ ಸವಿಯಲು ಸಿದ್ಧ.

Facebook Comments