ಈ ವಾರ ಸಿನಿಮಾ ‘ಬಜಾರ್’ಗೆ ಹೊಸ ಹೀರೊ ಎಂಟ್ರಿ

ಈ ಸುದ್ದಿಯನ್ನು ಶೇರ್ ಮಾಡಿ

Bazar-Movie--01

ಬೆಳ್ಳಿ ಪರದೆಯ ಮೇಲೆ ತನ್ನ ಹವಾ ತೋರಿಸಲು ಬರುತ್ತಿದ್ದಾನೆ ಬಜಾರ್‍ನ ಯುವ ನಾಯಕ. ಈ ಚಿತ್ರದ ಮೂಲಕ ಧನ್ವೀರ್ ಎಂಬ ಯುವ ಪ್ರತಿಭೆ ಬೆಳ್ಳಿ ಪರದೆಯ ಮೇಲೆ ಮಿಂಚಲು ಅಣಿಯಾಗಿದ್ದಾನೆ.

ಈ ಚಿತ್ರವನ್ನು ಸಿಂಪಲ್ ಆಗಿ ಒಂದು ಲವ್ ಸ್ಟೋರಿ ಖ್ಯಾತಿಯ ಸುನಿ ನಿರ್ದೇಶನ ಮಾಡಿದ್ದಾರೆ. ಈ ಚಿತ್ರವನ್ನು ನಾಯಕನ ತಂದೆ ತಿಮ್ಮೇಗೌಡರವರು ನಿರ್ಮಿಸಿದ್ದು , ಚಿತ್ರವನ್ನು ಅದ್ಧೂರಿಯಾಗಿ ಸಿದ್ಧಪಡಿಸಿದ್ದಾರೆ.

ಇದೊಂದು ಅಪ್ಪಟ್ಟ ರೌಡಿಸಂ ಸಬ್ಜೆಕ್ಟ್‍ವುಳ್ಳ ಸಿನಿಮಾವಾಗಿದ್ದು, ಭೂಗತ ಲೋಕ ಹಾಗೂ ಪ್ರೀತಿಯ ಎಳೆ ಈ ಚಿತ್ರದಲ್ಲಿ ಬೆಸೆದುಕೊಂಡಿದೆಯಂತೆ. ವಿಶೇಷವಾಗಿ ಈ ಚಿತ್ರದಲ್ಲಿ ಪಾರಿವಾಳ ಪ್ರಮುಖ ಪಾತ್ರವಾಗಿ ಕಾಣಿಸಲಿದ್ದು, ಪಾರಿವಾಳಗಳ ಅಡ್ಡ ಈ ಚಿತ್ರದ ಕೇಂದ್ರ ಬಿಂದುವಾಗಿದೆ.

ನಿರ್ದೇಶಕ ಸುನಿ ಮಾತನಾಡುತ್ತಾ , ನಾನು ಮೊದಲ ಬಾರಿಗೆ ಇಂಥ ಮಾಸ್ ಕಥೆಗೆ ಕೈಹಾಕಿದ್ದೇನೆ. ಕಾಮಿಡಿ ಎಲಿಮೆಂಟ್ ಬಜಾರ್ ಚಿತ್ರದಲ್ಲಿ ಕೊಂಚ ಕಡಿಮೆಯೇ ಇದೆ. ಹಾಗಾಗಿ ಜನರು ಕಾಮಿಡಿಯನ್ನು ಅಪೇಕ್ಷಿಸಿ ಬಂದರೆ ಇಲ್ಲಿ ಅಷ್ಟಾಗಿ ಸಿಗುವುದಿಲ್ಲ ಎನ್ನುತ್ತಾರೆ.

ಹೊಸ ಹುಡುಗ ಧನ್ವೀರ್ ಹಾಗೂ ಕಿರುತೆರೆಯ ನಟಿ ಅದಿತಿ ಪ್ರಭುದೇವ ಅವರ ಅಭಿನಯದಲ್ಲಿ ಬಜಾರ್ ಸಿನಿಮಾ ಮೂಡಿ ಬಂದಿದೆ. ಸಾಮಾನ್ಯವಾಗಿ ಎಲ್ಲಾ ನಾಯಕನಿಗೆ ಲವ್ ಸಕ್ಸಸ್ ಆಗಬೇಕೆಂಬ ಆಸೆಯಿರುತ್ತದೆ.

ಆದರೆ ನಮ್ಮ ಧನವೀರ್ ಅವರಿಗೆ ಮಾತ್ರ ಚಿತ್ರದಲ್ಲಿ ಲವ್ ಫೇಲ್ಯೂರ್ ಆಗಬೇಕೆಂಬ ಆಸೆ ಇದೆ. ಏಕೆಂದರೆ ಲವ್ ಫೇಲ್ಯೂರ್ ಫೀಲ್ ಸಖತ್ತಾಗಿರುತ್ತದೆ ಎಂಬುದು ನಾಯಕನ ನಂಬಿಕೆ. ಹೀಗೆ ಚಿತ್ರದ ಪ್ರೋಮೋದಲ್ಲಿ ಹಾಸ್ಯವಿದೆ.

ಲವ್ ಸ್ಟೋರಿಯಿದೆ ಹಾಗೂ ಮುಖ್ಯವಾಗಿ ಭರಪೂರವಾದ ಆ್ಯಕ್ಷನ್ ಇದೆ. ಪಾರಿವಾಳಗಳ ಅಡ್ಡದ ಬಗ್ಗೆ ರಿಸರ್ಚ್ ಮಾಡಿ ತೆಗೆದಿರುವ ಚಿತ್ರ ಬಜಾರ್. ಪಾರಿವಾಳದ ಅಡ್ಡಕ್ಕೂ ಹಾಗೂ ಭೂಗತಲೋಕಕ್ಕೂ ಒಂದು ರೀತಿಯ ನಂಟಿದೆ.

ಪಾರಿವಾಳಗಳ ಅಡ್ಡಗಳನ್ನು ನಡೆಸುತ್ತಾ ಎಷ್ಟೋ ಮಂದಿ ರೌಡಿಸಂ ನಡೆಸುತ್ತಿದ್ದ ನಿರ್ದಶನಗಳಿವೆ. ಬಜಾರ್ ಎಂದರೆ ರೌಡಿಸಂ ಅಡ್ಡವು ಹೌದು, ಪಾರಿವಾಳಗಳ ರೇಸಿನ ಅಡ್ಡವು ಹೌದು! ಪಾರಿವಾಳಗಳ ಸಾಕುವವರನ್ನು ಶೋಕ್‍ದಾರ್ ಎಂದು ಕರೆಯುತ್ತಾರೆ. ವಿಶೇಷವಾಗಿ ಚಿತ್ರದ ಕ್ಲೈಮಾಕ್ಸ್‍ನಲ್ಲಿ 500 ಪಾರಿವಾಳಗಳನ್ನು ಇಟ್ಟುಕೊಂಡು ಚಿತ್ರೀಕರಣ ಮಾಡಲಾಗಿದೆ ಎಂದು ಮಾಹಿತಿಯನ್ನು ನೀಡಿದರು.

ಕೆಜಿಎಫ್ ಚಿತ್ರಕ್ಕೆ ಸಂಗೀತ ನೀಡಿದಂತಹ ರವಿ ಬಸ್ರೂರ್ ಅವರು ಸಂಗೀತ ಸಂಯೋಜಿಸಿದ್ದಾರೆ. ಶರತ್ ಲೋಹಿತಾಶ್ವ, ಸಾಧುಕೋಕಿಲ, ಅರುಣಾ ಬಾಲ್‍ರಾಜ್, ಮಂಜುನಾಥ್ ಹೆಗ್ಡೆ, ಧರ್ಮೇಂದ್ರ, ಚಿತ್ರಕಲಾ ಬಿರಾದಾರ್ ಸೇರಿದಂತೆ ಮುಂತಾದವರ ತಾರಾಗಣ ಚಿತ್ರದಲ್ಲಿದೆ.

ಈ ಚಿತ್ರವನ್ನು ಕರ್ನಾಟಕದಾದ್ಯಂತ ಬಿ.ಕೆ.ಗಂಗಾಧರ್ ಬಿಡುಗಡೆ ಮಾಡುತ್ತಿದ್ದಾರೆ. ಈಗ ರೇಸ್‍ಗೆ ಶುರು ಎಂದು ಹೇಳುತ್ತಾ ಬಜಾರ್‍ನ ಖದರ್ ತೋರಿಸಲು ಸುಮಾರು 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬರುತ್ತಿದ್ದಾರೆ.

ಈಗಾಗಲೇ ಸಾಮಾಜಿಕ ಜಾಲ ತಾಣಗಳಲ್ಲಿ ಹಾಡುಗಳು ಹಾಗೂ ಟ್ರೇಲರ್ ಭಾರೀ ನಿರೀಕ್ಷೆಯನ್ನು ಹುಟ್ಟು ಹಾಕಿದ್ದು , ಇನ್ನೇನಿದ್ದರೂ ಪರದೆಯ ಮೇಲೆ ಬಜಾರ್ ಅಡ್ಡ ಯಾವ ರೀತಿ ಇದೆ ಎನ್ನುವುದನ್ನು ನೋಡಬೇಕು.

Facebook Comments